ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ಹೃದಯಾಘಾತದಿಂದ ನಿಧನ

| Updated By: Lakshmi Hegde

Updated on: Jan 05, 2022 | 10:29 AM

ಸಿಂಧುತಾಯಿ ಕೂಡ 12ನೇ ವರ್ಷಕ್ಕೆ, 32 ವರ್ಷದ ವ್ಯಕ್ತಿಯನ್ನು ಮದುವೆಯಾಗಬೇಕಾದರು. ಮೂರು ಮಕ್ಕಳಿಗೆ ಜನ್ಮ ಕೊಟ್ಟರು. ಆದರೆ ಈ ಮಧ್ಯೆ ಕೊನೇ ಮಗು ಹೊಟ್ಟೆಯಲ್ಲಿದ್ದಾಗಲೇ ಪತಿ ಇವರನ್ನು ನಡುದಾರಿಯಲ್ಲಿ ಕೈಬಿಟ್ಟ.

ಅನಾಥ ಮಕ್ಕಳ ತಾಯಿ, ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ಹೃದಯಾಘಾತದಿಂದ ನಿಧನ
ಸಿಂಧುತಾಯಿ ಸಪ್ಕಾಲ್​
Follow us on

ಪುಣೆ: ಖ್ಯಾತ ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್​ ಅವರು ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಇವರು ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧರಾಗಿದ್ದರು. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ಸಿಂಧುತಾಯಿ ಸಪ್ಕಾಲ್​​​ರಿಗೆ 75 ವರ್ಷ ವಯಸ್ಸಾಗಿತ್ತು. ಒಂದೂವರೆ ತಿಂಗಳ ಹಿಂದೆ ಸಿಂಧುತಾಯಿ ಸಪ್ಕಾಲ್​​​ ಅವರು ಹರ್ಣಿಯಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ತುಂಬ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದರು. ಜ.4ರ ರಾತ್ರಿ 8 ಗಂಟೆ ಹೊತ್ತಿಗೆ ಹೃದಯಾಘಾತದಿಂದ ನಿಧನರಾದರು ಎಂದು ಸಪ್ಕಲ್​ ಅಡ್ಮಿಟ್ ಆಗಿದ್ದ ಮುಂಬೈ ಗೆಲ್ಯಾಕ್ಸಿ ಕೇರ್​ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್​   ಪುಂಟಂಬೆಕರ್ ತಿಳಿಸಿದ್ದಾರೆ. ಸಿಂಧು ತಾಯಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಮಂಜಿರಿ ಆಶ್ರಮದಲ್ಲಿ ಇಡಲಾಗುವುದು. ಇಂದು ಮಧ್ಯಾಹ್ನ 12ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಯಲಿದೆ. 

ಸಿಂಧು ತಾಯಿ ಸಪ್ಕಾಲ್ಅವರು 1948ರ ನವೆಂಬರ್​ 14ರಂದು ಮಹಾರಾಷ್ಟ್ರದಲ್ಲಿ ವಾರ್ಧಾ ಜಿಲ್ಲೆಯಲ್ಲಿ ಹುಟ್ಟಿದ್ದಾರೆ. 4ನೇ ತರಗತಿಯವರೆಗೆ ಕಲಿತ ನಂತರ ಅನಿವಾರ್ಯವಾಗಿ ಶಾಲೆ ಬಿಡಬೇಕಾಯಿತು. ಬಡತನದಲ್ಲೇ ಬೆಳೆದು, ಕಷ್ಟಕಂಡ ಸಪ್ಕಾಲ್​ ನಂತರ ಅನಾಥ ಮಕ್ಕಳಿಗಾಗಿ ಒಂದು ಅನಾಥಾಶ್ರಮ ಕಟ್ಟಲು ಮುಂದಾದರು. ಆಗೆಲ್ಲ ಬಾಲ್ಯವಿವಾಹ ಚಾಲ್ತಿಯಲ್ಲಿತ್ತು. ಸಿಂಧುತಾಯಿ ಕೂಡ 12ನೇ ವರ್ಷಕ್ಕೆ, 32 ವರ್ಷದ ವ್ಯಕ್ತಿಯನ್ನು ಮದುವೆಯಾಗಬೇಕಾದರು. ಮೂರು ಮಕ್ಕಳಿಗೆ ಜನ್ಮ ಕೊಟ್ಟರು. ಆದರೆ ಈ ಮಧ್ಯೆ ಕೊನೇ ಮಗು ಹೊಟ್ಟೆಯಲ್ಲಿದ್ದಾಗಲೇ ಪತಿ ಇವರನ್ನು ನಡುದಾರಿಯಲ್ಲಿ ಕೈಬಿಟ್ಟ. ಪತಿಯಿಂದ ಹೊರದೂಡಲ್ಪಟ್ಟ ಸಿಂಧುರನ್ನು ಅವರ ತಾಯಿಯಾಗಲಿ, ಅವರ ಹುಟ್ಟೂರಾಗಲೀ ಕೈ ಹಿಡಿಯಲಿಲ್ಲ. ಭಿಕ್ಷೆ ಬೇಡು ಎಂದು ಹೇಳಿದರು. ಆದರೆ ನಂತರ ಇದೆಲ್ಲ ಕಷ್ಟಗಳನ್ನು ಎದುರಿಸಿ, ತಮ್ಮದೇ ದಾರಿ ಕಂಡುಕೊಂಡರು. ಅನಾಥಾಶ್ರಮಗಳಲ್ಲಿ ಕೆಲಸ ಮಾಡಲು ಶುರು ಮಾಡಿದರು.  ನಂತರ ಸುಮಾರು 1050 ಅನಾಥ ಮಕ್ಕಳನ್ನು ಬೆಳೆಸಿದರು. ಈ ಸಾಧನೆಗೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ಪ್ರಧಾನಿ-ರಾಷ್ಟ್ರಪತಿಯಿಂದ ಸಂತಾಪ
ಪದ್ಮಶ್ರೀ ಪುರಸ್ಕೃತ ಸಿಂಧುತಾಯಿ ಸಪ್ಕಾಲ್​ ನಿಧನಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಿಂಧುತಾಯಿಯವರು ಈ ಸಮಾಜಕ್ಕೆ ಸಲ್ಲಿಸಿದ ಸೇವೆ ಸದಾ ಸ್ಮರಣೀಯ. ಅವರಿಂದಾಗಿ ಅದೆಷ್ಟೋ ಅನಾಥ ಮಕ್ಕಳಿಗೆ ಉತ್ತಮ ಜೀವನ ಸಿಕ್ಕಿತು. ದುರ್ಬಲ ವರ್ಗದವರ ಏಳ್ಗೆಗಾಗಿಯೂ ದುಡಿದರು. ಅವರ ನಿಧನದಿಂದ ಅಪಾರ ನೋವಾಗಿದೆ ಎಂದು ಹೇಳಿದ್ದಾರೆ.

ಹಾಗೇ, ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಟ್ವೀಟ್ ಮಾಡಿ,  ಸಿಂಧುತಾಯಿ ಜೀವನ ಧೈರ್ಯ, ಸಮರ್ಪಣೆ ಮತ್ತು ಸೇವೆಯಿಂದ ಕೂಡಿ, ಸ್ಫೂರ್ತಿದಾಯಕವಾಗಿತ್ತು. ಅನಾಥರು, ಬುಡಕಟ್ಟು ಜನರು ಮತ್ತು ದುರ್ಬಲರನ್ನು ಪ್ರೀತಿಸುತ್ತಿದ್ದರು ಮತ್ತು ಅವರಿಗಾಗಿ ಕೆಲಸ ಮಾಡಿದರು. 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದರು. ಅವರ ಸಾವಿನಿಂದ ದುಃಖವಾಗಿದೆ ಎಂದು ಹೇಳಿದ್ದಾರೆ. ಹಾಗೇ, ಸಿಂಧುತಾಯಿಗೆ ತಾವು ಪದ್ಮಶ್ರೀ ಪ್ರಶಸ್ತಿ ನೀಡುತ್ತಿರುವ ಫೋಟೋವನ್ನು ಕೂಡ ಶೇರ್​ ಮಾಡಿಕೊಂಡಿದ್ದಾರೆ. ಇನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕೂಡ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಟಿವಿ9 ಕನ್ನಡ ನವ ನಕ್ಷತ್ರ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳಿಗೆ ಸನ್ಮಾನ

Published On - 8:47 am, Wed, 5 January 22