ಡೊಮಿನಿಕಾದಲ್ಲಿ ಬಂಧಿತನಾಗಿರುವ ಮೆಹುಲ್ ಚೋಕ್ಸಿ ಗಡೀಪಾರಿಗೆ ಸಂಬಂಧಪಟ್ಟ ಪ್ರಕರಣದ ಅರ್ಜಿ ವಿಚಾರಣೆ ಇಂದು ಪೂರ್ವ ಕೆರಿಬಿಯನ್ ಸುಪ್ರಿಂಕೋರ್ಟ್ನಲ್ಲಿ ಇಂದು ನಡೆಯುವುದಿತ್ತು. ಭಾರತದ ಪಾಲಿಗೆ ದೇಶಭ್ರಷ್ಟ ವಜ್ರದ ವ್ಯಾಪಾರಿಯಾಗಿರುವ ಚೋಕ್ಸಿ, ಇಲ್ಲಿಂದ ಆಂಟಿಗುವಾಕ್ಕೆ ಹೋಗಿ, ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಗಳು ಶುರುವಾಗುತ್ತಿದ್ದಂತೆ ಅಲ್ಲಿಂದ ಗುಟ್ಟಾಗಿ ಡೊಮಿನಿಕಾಗೆ ನುಸುಳಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐ ಶುರುಮಾಡುವುದಕ್ಕೂ ಒಂದು ವಾರ ಮೊದಲು ಆಂಟಿಗುವಾಕ್ಕೆ ತೆರಳಿದ್ದ ಚೋಕ್ಸಿ, 2017ರ ನವೆಂಬರ್ನಲ್ಲಿ ಅಲ್ಲಿನ ಹೂಡಿಕೆ ಮೂಲಕ ಪೌರತ್ವ ಪಡೆಯುವ (CIP) ಕಾರ್ಯಕ್ರಮದ ಮೂಲಕ ಆಂಟಿಗುವಾ ಪೌರತ್ವ ಪಡೆದಿದ್ದರು.
ಡೊಮಿನಿಕಾದಲ್ಲಿ ಚೋಕ್ಸಿ ಬಂಧಿತರಾಗುತ್ತಿದ್ದಂತೆ ಭಾರತ ಅಲ್ಲಿಗೆ ಎಂಟು ಜನ ಅಧಿಕಾರಿಗಳ ತಂಡವನ್ನು ಕಳಿಸಿದೆ. ಚೋಕ್ಸಿಯನ್ನು ಕಾನೂನು ಪ್ರಕ್ರಿಯೆ ಮೂಲಕ ಕರೆತರಲು ಈ ತಂಡ ತೆರಳಿದ್ದು, ಶಾರದಾ ರಾವತ್ ಎಂಬ ಮಹಿಳಾ ಸಿಬಿಐ ಅಧಿಕಾರಿ ತಂಡದ ನೇತೃತ್ವ ವಹಿಸಿದ್ದಾರೆ. ಆದರೆ ಚೋಕ್ಸಿಯ ಪರ ವಕೀಲರ ಮನವಿಯ ಮೇರೆಗೆ ಚೋಕ್ಸಿಯನ್ನು ಭಾರತಕ್ಕೆ ಕಳಿಸಲು ಸದ್ಯದ ಮಟ್ಟಿಗೆ ಪೂರ್ವ ಕೆರಿಬಿಯನ್ ಸುಪ್ರೀಂಕೋರ್ಟ್ ತಡೆ ನೀಡಿದೆ.
ಇನ್ನು ಚೋಕ್ಸಿಯನ್ನು ಭಾರತಕ್ಕೆ ಕಳಿಸದಂತೆ ತಡೆಯಲು ಅವರ ಪರ ಲಂಡನ್ನ ನಾಲ್ವರು ವಕೀಲರು ಕೆಲಸ ಮಾಡುತ್ತಿದ್ದಾರೆ. ಚೋಕ್ಸಿಗೆ ಕಳೆದ 6ತಿಂಗಳಿಂದ ಪರಿಚಯವಿದ್ದ ಯುವತಿಯೊಬ್ಬಳು ಅವರನ್ನು ಹನಿಟ್ರ್ಯಾಪ್ ಮಾಡಿದ್ದಾಳೆ. ಆಂಟಿಗುವಾದಲ್ಲಿ ಆ ಯುವತಿ ಮೆಹುಲ್ ಚೋಕ್ಸಿಯನ್ನು ಭೇಟಿಗಾಗಿ ಕರೆದಿದ್ದಳು. ಅಲ್ಲಿಂದ ಅವರನ್ನು ಪುರುಷರ ಗುಂಪೊಂದು ಅಪಹರಿಸಿ ಕರೆದುಕೊಂಡು ಹೋಗಿದೆ ಎಂದು ವಕೀಲರ ತಂಡ ಕೋರ್ಟ್ಗೆ ಹೇಳಿದೆ. ಅಷ್ಟೇ ಅಲ್ಲ, ಅವರು ಭಾರತದ ಪ್ರಜೆ ಅಲ್ಲ, ಆಂಟಿಗುವಾ ಪ್ರಜೆ ಎಂಬುದರ ದಾಖಲೆಯನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಹೀಗಾಗಿ ಭಾರತಕ್ಕೆ ಚೋಕ್ಸಿಯನ್ನು ಅಷ್ಟು ಸುಲಭಕ್ಕೆ ಕರೆತರುವುದು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಾಗಲೇಬೇಕಾಗಿದೆ.
ಭಾರತದ ಪೌರತ್ವ ರದ್ದಾಗಿಲ್ಲ
ಮೆಹುಲ್ ಚೋಕ್ಸಿ ಇಲ್ಲಿಯೂ ಒಂದು ಎಡವಟ್ಟು ಮಾಡಿದ್ದಾರೆ. ಅವರು ಆಂಟಿಗುವಾ ಪೌರತ್ವ ಪಡೆದುಕೊಂಡಿದ್ದರೂ, ಭಾರತದ ಪೌರತ್ವವನ್ನು ರದ್ದು ಮಾಡಿಕೊಂಡಿಲ್ಲ. ಇದು ಚೋಕ್ಸಿಯನ್ನು ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಮುನ್ನಡೆ ಕೊಡುವ ಅಂಶವಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಆದರೆ ಎರಡು ಪೌರತ್ವವನ್ನು ಭಾರತ ಅನುಮತಿಸುವುದಿಲ್ಲ. 1955ರ ಪೌರತ್ವ ಕಾಯ್ದೆ ಸೆಕ್ಷನ್ 9ರ ಪ್ರಕಾರ ಚೋಕ್ಸಿ ಆಂಟಿಗುವಾ ಪೌರತ್ವ ಪಡೆಯುತ್ತಿದ್ದಂತೆ ಭಾರತದ ಪೌರತ್ವವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ವಿಚಾರದಲ್ಲಿ ಭಾರತಕ್ಕೆ ವಾದಮಂಡನೆ ತುಸು ಕಷ್ಟವೇ ಆಗಬಹುದು.
ಇನ್ನೊಂದು ವಿಚಾರ ಚೋಕ್ಸಿಯನ್ನು ಭಾರತಕ್ಕೆ ಕರೆತರಲು ಸಹಾಯ ಮಾಡಬಹುದು. ಮೆಹುಲ್ ಚೋಕ್ಸಿ ಮಾಡಿದ್ದು ಆರ್ಥಿಕ ಅಪರಾಧ. ಆತನ ವಿರುದ್ಧ ರೆಡ್ ಇಂಟರ್ಪೋಲ್ ನೋಟಿಸ್ ಜಾರಿಯಾಗಿತ್ತು. ಈ ಇಂಟರ್ಪೋಲ್ ನೋಟಿಸ್ ಜಾರಿಯಾದಾಗಿಯೂ ಚೋಕ್ಸಿ ದೇಶಬಿಟ್ಟು ಹೋಗಿದ್ದಾರೆ. ಇದು ಕಾನೂನು ಪ್ರಕಾರ ತಪ್ಪು ಎಂಬುದನ್ನು ಭಾರತ ಡೊಮಿನಿಕಾ ಕೋರ್ಟ್ಗೆ ಮನವರಿಕೆ ಮಾಡಿಸಿಕೊಡಬೇಕಾಗುತ್ತದೆ. ಇಂಟರ್ಪೋಲ್ ನೋಟಿಸ್ ಅನ್ವಯ ಡೊಮಿನಿಕಾ ನ್ಯಾಯಾಲಯ ಯಾವುದೇ ಸಮಯದಲ್ಲಾದರೂ ಚೋಕ್ಸಿಯನ್ನು ಭಾರತಕ್ಕೆ ಕಳಿಸಬಹುದು. ಆದರೆ ಚೋಕ್ಸಿ ಹನಿಟ್ರ್ಯಾಪ್ ಆಗಿದ್ದಕ್ಕೆ ಬಲವಾದ ಸಾಕ್ಷಿ ಸಿಕ್ಕರೆ ಕೋರ್ಟ್ ಖಂಡಿತ ಚೋಕ್ಸಿಯನ್ನು ಆಂಟಿಗುವಾಕ್ಕೆ ಕಳಿಸುತ್ತದೆ ಎಂದು ಸಿಬಿಐ ನಿರ್ದೇಶಕ ಎಪಿ ಸಿಂಗ್ ಹೇಳಿದ್ದಾರೆ.
ಡೊಮಿನಿಕಾ ಪ್ರತಿಪಕ್ಷ ನಾಯಕನ ಭೇಟಿ ಮಾಡಿದ ಚೋಕ್ಸಿ ಅಣ್ಣ
ಚೋಕ್ಸಿ ಡೊಮಿನಿಕಾದಲ್ಲಿ ಬಂಧಿತರಾಗಿ, ಕಾನೂನು ಪ್ರಕ್ರಿಯೆಗಳು ಶುರುವಾದ ಬೆನ್ನಲ್ಲೇ ಅವರ ಅಣ್ಣ ಚೇತನ್ ಚಿನು ಭಾಯ್ ಚೋಕ್ಸಿ ಫೀಲ್ಡ್ಗೆ ಇಳಿದಿದ್ದಾರೆ. ಮೇ 29ರಂದು ಖಾಸಗಿ ಜೆಟ್ನಲ್ಲಿ ಡೊಮಿನಿಕಾವನ್ನು ತಲುಪಿರುವ ಅವರು, ಅಲ್ಲಿನ ಪ್ರತಿಪಕ್ಷ ನಾಯಕ ಲೆನಾಕ್ಸ್ ಲಿಂಟಿನ್ರನ್ನು ಭೇಟಿಯಾಗಿ ಒಪ್ಪಂದವೊಂದಕ್ಕೆ ಬಂದಿದ್ದಾರೆ. ಚೋಕ್ಸಿ ಬಂಧನ, ಅವರನ್ನು ಥಳಿಸಿದ ಬಗ್ಗೆ ನೀವು ಸಂಸತ್ತಿನಲ್ಲಿ ಧ್ವನಿಯೆತ್ತಿ, ನಮಗೆ ಸಹಾಯ ಮಾಡಿ. ಅದಕ್ಕೆ ಪ್ರತಿಯಾಗಿ ನಾನು ನಿಮಗೆ ಚುನಾವಣೆಗೆ ಧನ ಸಹಾಯ ಮಾಡುತ್ತೇನೆ ಎಂದು ವ್ಯವಹಾರ ಕುದುರಿಸಿದ್ದಾಗಿ ಕೆರಿಬಿಯನ್ ಮಾಧ್ಯಮವೊಂದು ವರದಿ ಮಾಡಿದೆ.
ಇದನ್ನೂ ಓದಿ: ಕನ್ನಡದಲ್ಲಿ ಬರ್ತಿದೆ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಧಾರಾವಾಹಿ; ಜೂನ್ 7ರಿಂದ ಶುರು
Some leagal issues in bringing Fugitive jeweller Mehul Choksi back to India