
ನವದೆಹಲಿ, ಜುಲೈ 17: ವಿಮಾನಯಾನ ಟಿಕೆಟ್ ಬುಕಿಂಗ್ ಮಾಡುವಾಗ ಗ್ರಾಹಕರನ್ನು ಆಕರ್ಷಿಸಲು ಮತ್ತು ದಾರಿ ತಪ್ಪಿಸಲು ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ ‘ಡಾರ್ಕ್ ಪ್ಯಾಟರ್ನ್’ (Dark Pattern) ಪ್ರದರ್ಶಿಸುತ್ತಿದ್ದ ಸ್ಪೈಸ್ಜೆಟ್ (SpiceJet) ವಿಮಾನಯಾನ ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ 1 ಲಕ್ಷ ರೂ ದಂಡ ವಿಧಿಸುವ ಮೂಲಕ ತಕ್ಕ ಪಾಠ ಕಲಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ (Pralhad Joshi) ಸೂಚನೆ ಮೇರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಸ್ಪೈಸ್ಜೆಟ್ ಸಂಸ್ಥೆಯು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುವ ಗ್ರಾಹಕರನ್ನು ವಂಚಿಸುವ ರೀತಿಯಲ್ಲಿ ತಂತ್ರಗಳನ್ನು ಬಳಸುತ್ತಿರುವುದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಮನಕ್ಕೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು, ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಇಲಾಖೆಯ ಉನ್ನತಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದರು. ಸಚಿವರ ಆದೇಶದ ಬೆನ್ನಲ್ಲೇ ತನಿಖೆ ನಡೆಸಿದ CCPA ತಂಡಕ್ಕೆ ಸ್ಪೈಸ್ಜೆಟ್ ಸಂಸ್ಥೆಯು ಗ್ರಾಹಕರನ್ನು ಮೋಸಗೊಳಿಸುವ ಡಾರ್ಕ್ ಪ್ಯಾಟರ್ನ್ ಮತ್ತು ಪೂರ್ವನಿಯೋಜಿತ ಸಮ್ಮತಿ ಪದ್ಧತಿಯನ್ನು ಅಳವಡಿಸಿಕೊಂಡಿರುವುದು ಸಾಬೀತಾಗಿದೆ.
ಸ್ಪೈಸ್ಜೆಟ್ ಸಂಸ್ಥೆಯು ತನ್ನ ಆನ್ಲೈನ್ ವೇದಿಕೆಯಲ್ಲಿ ಸ್ವಯಂ ಚಾಲಿತ ನೋಂದಣಿ ಪ್ರಚಾರದ ಸಂದೇಶಗಳು ಮತ್ತು ಗ್ರಾಹಕರ ಮೇಲೆ ಪ್ರಭಾವ ಬೀರುವಂತಹ ದಾರಿ ತಪ್ಪಿಸುವ ಇಂಟರ್ಫೇಸ್ ವಿನ್ಯಾಸಗೊಳಿಸಿತ್ತು. ಗ್ರಾಹಕರು ಟಿಕೆಟ್ ಬುಕ್ ಮಾಡುವಾಗ “ಸ್ಪೈಸ್ ಕ್ಲಬ್ ಪ್ರಚಾರದ ಕೊಡುಗೆ, ಡೀಲ್ ಮತ್ತು ಅಪ್ಡೇಟ್ಗಳನ್ನು ಸ್ವೀಕರಿಸಲು ನಾನು ಒಪ್ಪುತ್ತೇನೆ” ಎಂಬ ಆಯ್ಕೆಯನ್ನು ಮೊದಲೇ ಟಿಕ್ ಮಾಡಲಾಗಿರುತ್ತಿತ್ತು. ಅಷ್ಟೇ ಅಲ್ಲದೆ, “ಸೀಮಿತ ಅವಧಿಯ ಕೊಡುಗೆ! ದರ ಏರಿಕೆಯನ್ನು ತಪ್ಪಿಸಲು ಮತ್ತು ಉತ್ತಮ ಡೀಲ್ ಪಡೆಯಲು ಈಗಲೇ ಬುಕ್ ಮಾಡಿ” ಎನ್ನುವಂತಹ ತಪ್ಪು ಸಂದೇಶಗಳ ಮೂಲಕ ಗ್ರಾಹಕರಲ್ಲಿ ಅನಗತ್ಯ ಆತುರ ಮೂಡಿಸಿ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಸ್ಪೈಸ್ಜೆಟ್ ಸಂಸ್ಥೆಗೆ 1 ಲಕ್ಷ ರೂ ದಂಡ ವಿಧಿಸಿರುವ CCPA, ಇಂತಹ ಗ್ರಾಹಕ ವಿರೋಧಿ ಮತ್ತು ಡೀಫಾಲ್ಟ್-ಸಮ್ಮತಿ ಅಭ್ಯಾಸಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಶಾಶ್ವತವಾಗಿ ನಿಲ್ಲಿಸಬೇಕು ಎಂದು ಖಡಕ್ ಆದೇಶ ನೀಡಿದೆ. ಇನ್ನು ಮುಂದೆ ಆನ್ಲೈನ್ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಗ್ರಾಹಕರ ಒಪ್ಪಿಗೆಯನ್ನು ಯಾವಾಗಲೂ ಸ್ಪಷ್ಟವಾಗಿ, ಮಾಹಿತಿಯುಕ್ತವಾಗಿ ಮತ್ತು ಮುಕ್ತವಾಗಿ ಪಡೆದುಕೊಳ್ಳಬೇಕು ಎಂದು ಪ್ರಾಧಿಕಾರವು ವಿಮಾನಯಾನ ಸಂಸ್ಥೆಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:46 pm, Fri, 17 July 26