Reservation: ಕ್ರಿಶ್ಚಿಯನ್-ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಗೊಂದಲ; ಮತ್ತೊಂದು ಆಯೋಗ ರಚಿಸಲು ಮುಂದಾದ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 19, 2022 | 12:05 PM

ಡಾ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಎರಡು ಬಾರಿ ಮೀಸಲಾತಿ ನಿಗದಿಪಡಿಸಲು ಆಯೋಗ ರಚಿಸಲಾಗಿತ್ತು. ಆದರೆ ಎರಡೂ ಆಯೋಗದ ಶಿಫಾರಸುಗಳನ್ನು ಸರ್ಕಾರ ತಿರಸ್ಕರಿಸಿತ್ತು.

Reservation: ಕ್ರಿಶ್ಚಿಯನ್-ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ಗೊಂದಲ; ಮತ್ತೊಂದು ಆಯೋಗ ರಚಿಸಲು ಮುಂದಾದ ಸರ್ಕಾರ
ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಆಯೋಗ ರಚಿಸಲು ಮುಂದಾಗಿದೆ.
Follow us on

ದೆಹಲಿ: ಹಿಂದೂ, ಬೌದ್ಧ ಮತ್ತು ಸಿಖ್ಖ್ ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡ ದಲಿತರ (Dalit) ಸ್ಥಿತಿಗತಿ ಅಧ್ಯಯನಕ್ಕೆ ಹೊಸ ಆಯೋಗ ರಚಿಸಲು ಕೇಂದ್ರ ಸರ್ಕಾರವು (Govt Of India) ಮುಂದಾಗಿದೆ. ಮತಾಂತರಗೊಂಡ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಈ ಆಯೋಗವು ಅಧ್ಯಯನ ಮಾಡಲಿದ್ದು, ಮೀಸಲಾತಿ (Reservation) ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡಲಿದೆ. ಇಂಥದ್ದೊಂದು ಆಯೋಗ ರಚನೆ ಅಗತ್ಯವಿದೆ ಎಂದು ಇತ್ತೀಚೆಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಶೀಘ್ರದಲ್ಲಿಯೇ ಈ ಸಂಬಂಧ ಅಧಿಸೂಚನೆಯೊಂದು ಪ್ರಕಟವಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ (Ministry of Minority Affairs) ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (Department of Personnel and Training – DoPT) ಉನ್ನತ ಅಧಿಕಾರಿಗಳು ಇಂಥ ಕ್ರಮಕ್ಕೆ ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಇಂಡಿಯನ್ ಎಕ್ಸ್​ಪ್ರೆಸ್’ ಜಾಲತಾಣವು ವರದಿ ಮಾಡಿದೆ. ಗೃಹ, ಕಾನೂನು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಹಾಗೂ ಹಣಕಾಸು ಸಚಿವಾಲಯಗಳಲ್ಲಿ ಈ ಪ್ರಸ್ತಾಪದ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್​ಸಿ (Scheduled Caste – SC) ಮೀಸಲಾತಿ ಸೌಲಭ್ಯಗಳನ್ನು ಕೋರಿ ಸಲ್ಲಿಸಿರುವ ಹಲವು ಅರ್ಜಿಗಳು ಸುಪ್ರೀಂಕೋರ್ಟ್​ನಲ್ಲಿ ಬಾಕಿಯಿವೆ. ಮತಾಂತರಗೊಂಡ ದಲಿತರಿಗೂ ಮೀಸಲಾತಿ ವಿಸ್ತರಿಸಿದರೆ ಮುಂದಿನ ದಿನಗಳಲ್ಲಿ ಅದು ಸಾಮಾಜಿಕವಾಗಿ ಬೀರಬಹುದಾದ ಪರಿಣಾಮಗಳ ಬಗ್ಗೆ ಹಿಂದುತ್ವಪರ ಸಂಘಟನೆಗಳಲ್ಲಿ ಹೆಚ್ಚಿನ ಆತಂಕವಿದೆ. ಧಾರ್ಮಿಕ ಅಂಕಿಅಂಶಗಳು ಏರುಪೇರಾಗಬಹುದು ಎಂದೂ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗವನ್ನು ರಚಿಸುವ ಕ್ರಮವು ಮಹತ್ವವನ್ನು ಪಡೆದುಕೊಂಡಿದೆ.

ಹಿಂದೂ, ಸಿಖ್ಖ್ ಅಥವಾ ಬೌದ್ಧ ಧರ್ಮಕ್ಕೆ ಸೇರದ ವ್ಯಕ್ತಿಯನ್ನು ಪರಿಶಿಷ್ಟ ಜಾತಿಗೆ ಸೇರಿದವ ಎಂದು ಘೋಷಿಸಲು ‘ಸಂವಿಧಾನದ (ಅನುಸೂಚಿತ ಜಾತಿಗಳು) ಆದೇಶ 1950ರ ಪರಿಚ್ಛೇದ 341 ನಿರ್ಬಂಧಿಸುತ್ತದೆ. ಮೊದಲು ಕೇವಲ ಹಿಂದೂಗಳನ್ನು ಮಾತ್ರವೇ ಪರಿಶಿಷ್ಟ ಜಾತಿ ಎಂದು ಘೋಷಿಸಲು ಅವಕಾಶವಿತ್ತು. 1956ರಲ್ಲಿ ಸಿಖ್ಖರನ್ನು ಸೇರಿಸಲು ಮತ್ತು 1990ರಲ್ಲಿ ಬೌದ್ಧರನ್ನು ಒಳಗೊಳ್ಳಲು ಅಗತ್ಯ ತಿದ್ದುಪಡಿ ಮಾಡಲಾಯಿತು.

ಕಳೆದ ಆಗಸ್ಟ್ 30 ರಂದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠದಲ್ಲಿ ಸರ್ಕಾರದ ಪರವಾಗಿ ಹಾಜರಾಗಿ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳಿಗೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿಯ ಸೌಲಭ್ಯ ಒದಗಿಸುವ ಬಗ್ಗೆ ಸರ್ಕಾರದ ನಿಲುವ್ನು ಶೀಘ್ರ ತಿಳಿಸಲಾಗುವುದು ಎಂದು ಹೇಳಿದ್ದರು. ನ್ಯಾಯಪೀಠವು ಸಾಲಿಸಿಟರ್ ಜನರಲ್ ಅವರಿಗೆ ಮೂರು ವಾರಗಳ ಕಾಲಾವಕಾಶವನ್ನು ನೀಡಿತ್ತು. ಅಕ್ಟೋಬರ್ 11ಕ್ಕೆ ವಿಚಾರಣೆಯನ್ನು ನ್ಯಾಯಾಲಯವು ಮುಂದೂಡಿತ್ತು.

ಇದೀಗ ಕೇಂದ್ರ ಸರ್ಕಾರಲು ರಚಿಸಲು ಉದ್ದೇಶಿಸಿರುವ ಆಯೋಗವು ಸುಮಾರು ನಾಲ್ವರು ಸದಸ್ಯರನ್ನು ಹೊಂದಿರಬಹುದು. ಅದರ ಅಧ್ಯಕ್ಷರಿಗೆ ಕೇಂದ್ರ ಕ್ಯಾಬಿನೆಟ್ ಸಚಿವರ ಶ್ರೇಣಿ ಇರುತ್ತದೆ. ವರದಿ ಸಲ್ಲಿಸಲು ಸುಮಾರು ಒಂದು ವರ್ಷದ ಕಾಲಾವಧಿ ಸಿಗಬಹುದು ಎಂದು ಹೇಳಲಾಗಿದೆ. ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್​ಸಿ ಸ್ಥಾನಮಾನ ನೀಡುವುದರ ಸಾಧಕ-ಬಾಧಕ ಪರಿಶೀಲನೆ ಹಾಗೂ ಹಾಲಿ ಇರುವ ಎಸ್​ಸಿ ಪಟ್ಟಿಗೆ ಹೆಚ್ಚಿನ ಸದಸ್ಯರನ್ನು ಸೇರಿಸಿದರೆ ಆಗಬಹುದಾದ ಪರಿಣಾಮವನ್ನು ಸಹ ಸಮಿತಿಯು ಅಧ್ಯಯನ ಮಾಡಲಿದೆ.

ಎಸ್​ಟಿ ಮತ್ತು ಒಬಿಸಿಗಳು ನಿರ್ದಿಷ್ಟ ಧರ್ಮಕ್ಕೆ ಸೇರಿರಬೇಕು ಎಂಬ ನಿಯಮವಿಲ್ಲ. ಮಂಡಲ್ ಆಯೋಗದ ವರದಿಯ ಅನುಷ್ಠಾನದ ನಂತರ, ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳು ಕೇಂದ್ರ ಅಥವಾ ರಾಜ್ಯಗಳ ಒಬಿಸಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಎಸ್​ಸಿ ಸಮುದಾಯಕ್ಕೆ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿಗಾಗಿ ಶೇ 15ರಷ್ಟು ಮೀಸಲಾತಿ ಮತ್ತು ಎಸ್​ಟಿಗಳಿಗೆ ಶೇ 7.5 ಹಾಗೂ ಒಬಿಸಿಗಳಿಗೆ ಶೇ 27ರಷ್ಟು ಮೀಸಲಾತಿ ಇದೆ. ಹೀಗಾಗಿಯೇ ಎಸ್​ಸಿ ಸ್ಥಾನಮಾನಕ್ಕೆ ಅಷ್ಟು ಮಹತ್ವ ಬಂದಿದೆ.

ಈ ಹಿಂದಿನ ಸರ್ಕಾರಗಳು ಸಹ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್​ಸಿ ಮೀಸಲಾತಿ ಪ್ರಯೋಜನ ಒದಗಿಸುವ ಬಗ್ಗೆ ಪರಿಶೀಲನೆ ನಡೆಸಿತ್ತು. ಅಕ್ಟೋಬರ್ 2004ರಲ್ಲಿ ಡಾ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯುಪಿಎ ಸರ್ಕಾರವು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕ್ರಮಗಳನ್ನು ಶಿಫಾರಸು ಮಾಡಲು ಸುಪ್ರಿಂಕೋರ್ಟ್​ನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅಧ್ಯಕ್ಷತೆಯಲ್ಲಿ ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗವನ್ನು ರಚಿಸಿತ್ತು.

ಮೇ 2007 ರಲ್ಲಿ, ರಂಗನಾಥ್ ಮಿಶ್ರಾ ಆಯೋಗವು ತನ್ನ ವರದಿಯನ್ನು ಸಲ್ಲಿಸಿತು. ಎಸ್​ಸಿ ಸ್ಥಾನಮಾನವನ್ನು ಎಸ್​ಟಿ ಮಾದರಿಯಲ್ಲಿ ಧರ್ಮಾತೀತಗೊಳಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅಂದಿನ ಯುಪಿಎ ಸರ್ಕಾರ ಒಪ್ಪಿರಲಿಲ್ಲ. ಈ ಶಿಫಾರಸಿಗೆ ಕ್ಷೇತ್ರಾಧ್ಯಯನದ ಬಲ ಇಲ್ಲ ಎನ್ನುವುದು ಮನಮೋಹನ್ ಸಿಂಗ್ ಸರ್ಕಾರದ ಆಕ್ಷೇಪವಾಗಿತ್ತು. 2007ರಲ್ಲಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ನಡೆಸಿದ ಅಧ್ಯಯನವು ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರಿಗೆ ಎಸ್​ಸಿ ಸ್ಥಾನಮಾನ ನೀಡುವ ಅಗತ್ಯವಿದೆ ಎಂದು ಹೇಳಿತು. ಈ ಅಧ್ಯಯನಕ್ಕೂ ಕ್ಷೇತ್ರಕಾರ್ಯದ ಕೊರತೆಯಿದೆ ಎಂದು ಕೇಂದ್ರ ಸರ್ಕಾರವು ಶಿಫಾರಸುಗಳನ್ನು ತಿರಸ್ಕರಿಸಿತ್ತು.

ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಸಂಪೂರ್ಣ ಬಹುಮತ ಪಡೆದು 2014ರಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿದ ನಂತರ ಇಂಥ ಪ್ರಸ್ತಾವಗಳಿಗೆ ಆಡಳಿತಾರೂಢ ಪಕ್ಷದಿಂದ ಪ್ರಬಲ ವಿರೋಧ ವ್ಯಕ್ತವಾಗಿತ್ತು. ‘ಮತಾಂತರಗೊಂಡವರಿಗೂ ಮೀಸಲಾತಿ ಒದಗಿಸುವುದು ಮುಂದಿನ ದಿನಗಳಲ್ಲಿ ಮತಾಂತರಕ್ಕೆ ಪ್ರೇರಣೆಯಾಗಬಹುದು. ಸಾಮಾಜಿಕ ವೈರುಧ್ಯಗಳಿಗೆ ಕಾರಣವಾಗಬಹುದು’ ಎಂದು ಹಲವರು ಆಕ್ಷೇಪಿಸಿದ್ದರು. ಇದೀಗ ಸರ್ಕಾರವು ಪ್ರತ್ಯೇಕ ಆಯೋಗವೊಂದನ್ನು ರಚಿಸಲು ತೀರ್ಮಾನಿಸಿರುವುದು ಈ ಹಿನ್ನೆಲೆಯಲ್ಲಿಯೂ ಮಹತ್ವ ಪಡೆದಿದೆ.

Published On - 11:57 am, Mon, 19 September 22