‘ಮನೆಯೊಳಗೇ ಇರಿ, ವಿಡಿಯೋ ಹಂಚಿಕೊಳ್ಳಬೇಡಿ’; ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆ

ಸೌದಿ ಅರೇಬಿಯಾದ ರಾಜಧಾನಿ ರಿಯಾದ್​​ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ದಂಗೆಕೋರರು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ಸೌದಿಯಲ್ಲಿ ನೆಲೆಸಿರುವ ಲಕ್ಷಾಂತರ ಭಾರತೀಯ ಪ್ರಜೆಗಳಿಗೆ ರಿಯಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತುರ್ತು ಮುನ್ನೆಚ್ಚರಿಕೆ ಬಿಡುಗಡೆ ಮಾಡಿದೆ. ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಪ್ರಸ್ತುತ ಪರಿಸ್ಥಿತಿಯಲ್ಲಿ ತೀವ್ರ ಜಾಗರೂಕರಾಗಿರಬೇಕು. ಆದಷ್ಟೂ ಸುರಕ್ಷಿತವಾಗಿ ಮನೆಯೊಳಗೇ ಇರಬೇಕು ಹಾಗೂ ಸೌದಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಅಧಿಕೃತವಾಗಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದೆ.

ಮನೆಯೊಳಗೇ ಇರಿ, ವಿಡಿಯೋ ಹಂಚಿಕೊಳ್ಳಬೇಡಿ; ಕ್ಷಿಪಣಿ ದಾಳಿ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿರುವ ಭಾರತೀಯರಿಗೆ ಎಚ್ಚರಿಕೆ
ರಿಯಾದ್ ವಿಮಾನ ನಿಲ್ದಾಣ
Image Credit source: TV9

Updated on: Oct 08, 2026 | 9:47 PM

ರಿಯಾದ್, ಅಕ್ಟೋಬರ್ 8: ಸೌದಿ ಅರೇಬಿಯಾದ ರಾಜಧಾನಿ ರಿಯಾದ್​ನಲ್ಲಿರುವ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿವೆ. ಇದರ ಬೆನ್ನಲ್ಲೇ, ಸೌದಿ ಅರೇಬಿಯಾಯಲ್ಲಿರುವ ಭಾರತೀಯ ಪ್ರಜೆಗಳಿಗೆ ರಿಯಾದ್​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಮುನ್ನೆಚ್ಚರಿಕೆ ಬಿಡುಗಡೆ ಮಾಡಿದೆ. ಸೌದಿಯಲ್ಲಿ ನೆಲೆಸಿರುವ ಭಾರತೀಯರು ತೀವ್ರ ಜಾಗರೂಕರಾಗಿರಬೇಕು ಮತ್ತು ಸ್ಥಳೀಯ ಆಡಳಿತ ಅಧಿಕೃತವಾಗಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.

ಭಾರತೀಯ ರಾಯಭಾರ ಕಚೇರಿಯ ಮಾರ್ಗದರ್ಶನಗಳೇನು?:

“ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಜಾಗರೂಕರಾಗಿರಬೇಕು. ಅಗತ್ಯವಿದ್ದರೆ ಮನೆ ಒಳಗಡೆ ಅಥವಾ ಸುರಕ್ಷಿತ ಸ್ಥಳಗಳಲ್ಲೇ ಇರಬೇಕು ಹಾಗೂ ಸ್ಥಳೀಯ ಆಡಳಿತ ನೀಡುವ ಅಧಿಕೃತ ಸೂಚನೆಗಳನ್ನು ಅನುಸರಿಸಬೇಕು” ಎಂದು ರಾಯಭಾರ ಕಚೇರಿ ತಿಳಿಸಿದೆ.

ಇದನ್ನೂ ಓದಿ: ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಗುರಿ ತಲುಪಿರುವುದಾಗಿ ಘೋಷಿಸಿಕೊಂಡ ಹೌತಿ ಉಗ್ರರು

ವಿಡಿಯೋ ಅಥವಾ ಸುದ್ದಿ ಹಂಚಿಕೊಳ್ಳದಿರಲು ಮನವಿ:

ಹೌತಿ ಪಡೆಯ ದಾಳಿಯ ಘಟನೆಗಳು ಹಾಗೂ ದಾಳಿಗಳಿಗೆ ಸಂಬಂಧಿಸಿದ ಯಾವುದೇ ವಿಡಿಯೋಗಳು ಅಥವಾ ದೃಢೀಕರಿಸದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡದಂತೆ ಅಥವಾ ರೀಪೋಸ್ಟ್ ಮಾಡದಂತೆ ಭಾರತೀಯರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಸೌದಿ ಅರೇಬಿಯಾದ ಸ್ಥಳೀಯ ಸೈಬರ್ ಕಾನೂನುಗಳು ಅತ್ಯಂತ ಕಠಿಣವಾಗಿದ್ದು, ದೃಢೀಕರಿಸದ ಮಿಲಿಟರಿ ಅಥವಾ ದಾಳಿಯ ದೃಶ್ಯಗಳನ್ನು ಶೇರ್ ಮಾಡುವುದರಿಂದ ಭಾರತೀಯರು ಕಾನೂನು ಸಂಕಷ್ಟಕ್ಕೆ ಸಿಲುಕುವುದನ್ನು ತಡೆಯಲು ರಾಯಭಾರ ಕಚೇರಿ ಈ ಎಚ್ಚರಿಕೆ ನೀಡಿದೆ.


ಸೌದಿ ಸಿವಿಲ್ ಡಿಫೆನ್ಸ್ ಹಾಗೂ ಭದ್ರತಾ ಪಡೆಗಳು ನೀಡುವ ಅಧಿಕೃತ ಸೂಚನೆಗಳನ್ನು ಹೊರತುಪಡಿಸಿ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಭಾರತೀಯರಿಗೆ ಸೂಚಿಸಲಾಗಿದೆ. ರಿಯಾದ್​​ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ಕಾನ್ಸುಲೇಟ್ ಕಚೇರಿಗಳು ಮೊದಲಿನಂತೆಯೇ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಲಾಗಿದೆ. ತುರ್ತು ನೆರವಿಗಾಗಿ ಭಾರತೀಯ ಸಹಾಯ ಕೇಂದ್ರದ ಉಚಿತ ಟೋಲ್-ಫ್ರೀ ಸಂಖ್ಯೆ 8002471234 ನಿರಂತರವಾಗಿ ಲಭ್ಯವಿರುತ್ತದೆ.

ಇದನ್ನೂ ಓದಿ: ಸೌದಿ ಮೇಲೆ ಹೌತಿ ದಾಳಿ; ಅ. 10ರವರೆಗೆ ರಿಯಾದ್​ಗೆ ತೆರಳುವ ಏರ್ ಇಂಡಿಯಾ, ಇಂಡಿಗೋ ವಿಮಾನ ಸಂಚಾರ ರದ್ದು

ನಾಗರಿಕ ಮೂಲಸೌಕರ್ಯದ ಮೇಲಿನ ದಾಳಿಗೆ ಭಾರತ ಖಂಡನೆ:

ಅಭಾ ಮತ್ತು ರಿಯಾದ್ ವಿಮಾನ ನಿಲ್ದಾಣಗಳ ಮೇಲಿನ ದಾಳಿಯನ್ನು ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. “ನಾಗರಿಕರನ್ನು ಹಾಗೂ ಸಾರ್ವಜನಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುವ ಇಂತಹ ದಾಳಿಗಳನ್ನು ಒಪ್ಪಲು ಸಾಧ್ಯವಿಲ್ಲ” ಎಂದು ವಿದೇಶಾಂಗ ಸಚಿವಾಲಯ ಹೇಳಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಹಾಗೇ, ಸೌದಿ ಅರೇಬಿಯಾ ಸರ್ಕಾರದೊಂದಿಗೆ ಭಾರತ ದೃಢವಾಗಿ ನಿಲ್ಲುತ್ತದೆ ಎಂದು ಭರವಸೆ ನೀಡಿದೆ.


ರಿಯಾದ್ ಕಡೆಗೆ ವಿಮಾನ ಪ್ರಯಾಣ ಬೆಳೆಸಬೇಕಿದ್ದವರು ಏರ್ ಇಂಡಿಯಾ, ಇಂಡಿಗೋ ಹಾಗೂ ಅಕಾಸಾ ಏರ್ ಸಂಸ್ಥೆಗಳ ಸೇವೆಗಳನ್ನು ರದ್ದುಗೊಳಿಸಿರುವುದರಿಂದ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ವೇಳಾಪಟ್ಟಿಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 9:37 pm, Thu, 8 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us