ಕಾನೂನು ಆಮೇಲೆ, ಮೊದಲು ರೈತರ ಸಮಸ್ಯೆಗಳಿಗೆ ಕೇಂದ್ರವೇ ಪರಿಹಾರ ಸೂಚಿಸಲಿ: ಈ ಮಧ್ಯೆ ರೈತರು ಅಲ್ಲಿಂದ ಶಿಫ್ಟ್ ಆಗಲಿ- ಸುಪ್ರೀಂ ಗರಂ

|

Updated on: Jan 11, 2021 | 3:01 PM

ಪ್ರತಿಭಟನೆಯಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ ಸರ್ಕಾರವನ್ನು ಇದೇ ವಿಷಯದ ಕುರಿತು ಪ್ರಶ್ನಿಸಿದರೂ ಉತ್ತರ ಬಂದಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಜಾರಿಗೊಳಿಸದೇ ಇದ್ದರೆ ಏನಾಗಲಿದೆ ಎಂಬುದು ನ್ಯಾಯಾಲಯಕ್ಕೂ ಅರ್ಥವಾಗಿಲ್ಲ ಎಂದು ನ್ಯಾಯಾಲಯ ಕೇಂದ್ರ ಸರ್ಕಾರದ ಕಿವಿ ಹಿಂಡಿದೆ.

ಕಾನೂನು ಆಮೇಲೆ, ಮೊದಲು ರೈತರ ಸಮಸ್ಯೆಗಳಿಗೆ ಕೇಂದ್ರವೇ ಪರಿಹಾರ ಸೂಚಿಸಲಿ: ಈ ಮಧ್ಯೆ ರೈತರು ಅಲ್ಲಿಂದ ಶಿಫ್ಟ್ ಆಗಲಿ- ಸುಪ್ರೀಂ ಗರಂ
ಸುಪ್ರೀಂಕೋರ್ಟ್​
Follow us on

ದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಏಕೆ ಪ್ರತಿಷ್ಠೆಯ ವಿಷಯವಾಗಿಸಿಕೊಂಡಿದೆ ಎಂದು ಅರ್ಥವಾಗುತ್ತಿಲ್ಲ. ಸರ್ಕಾರ ಕಾಯ್ದೆ ತಡೆಹಿಡಿಯದಿದ್ದರೇ, ನ್ಯಾಯಾಲಯವೇ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಲಿದೆ ಎಂದು ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ಸುಪ್ರೀಂ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆ ಪದೇ ಪದೇ ಯಾಕೆ ವಿಫಲವಾಗುತ್ತಿದೆ ಎಂಬುದನ್ನು ನಾವು ವರದಿಗಳಿಂದ ಅರ್ಥ ಮಾಡಿಕೊಂಡ್ದೇವೆ. ಸರ್ಕಾರ ಅನುಚ್ಛೇದಗಳ ಬಗ್ಗೆ ಚರ್ಚೆ ನಡೆಸಲು ಬಯಸುತ್ತದೆ. ಆದರೆ ರೈತರು ಇಡೀ ಕಾನೂನನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಆದ್ದರಿಂದ ನಾವು ಕೇಂದ್ರದಿಂದ ನೇಮಕಗೊಂಡ ಸಮಿತಿಯು ಯಾವುದೇ ನಿರ್ಧಾರ ಕೈಗೊಳ್ಳುವವರೆಗೆ ಹಾಲಿ ಕಾನೂನು ಅನುಷ್ಠಾನಕ್ಕೆ ತಡೆ ನೀಡುತ್ತೇವೆ ಎಂದು ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಹೇಳಿದೆ.

ಪ್ರತಿಭಟನೆಯಲ್ಲಿ ಹಿರಿಯ ನಾಗರಿಕರು ಮತ್ತು ಮಹಿಳೆಯರು ಸಹ ಭಾಗವಹಿಸುತ್ತಿದ್ದಾರೆ. ಕಳೆದ ಬಾರಿ ಸರ್ಕಾರವನ್ನು ಇದೇ ವಿಷಯದ ಕುರಿತು ಪ್ರಶ್ನಿಸಿದರೂ ಉತ್ತರ ಬಂದಿಲ್ಲ. ಈಗ ಪರಿಸ್ಥಿತಿ ಬಿಗಡಾಯಿಸುತ್ತಿದೆ, ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಾನೂನು ಜಾರಿಗೊಳಿಸದೇ ಇದ್ದರೆ ಏನಾಗಲಿದೆ ಎಂದು ನ್ಯಾಯಾಲಯಕ್ಕೂ ಅರ್ಥವಾಗಿಲ್ಲ ಎಂದು ನ್ಯಾಯಾಲಯ ಕೇಂದ್ರ ಸರ್ಕಾರದ ಕಿವಿ ಹಿಂಡಿದೆ.

ನಿಮಗೆ ಜವಾಬ್ದಾರಿಯಿದ್ದರೆ, ಕಾನೂನಿನ ಅನುಷ್ಠಾನವನ್ನು ತಡೆ ಹಿಡಿಯಿರಿ. ಈ ಬಗ್ಗೆ ನಿರ್ಧರಿಸಲು ತಜ್ಞರ ಸಮಿತಿ ರೂಪಿಸುತ್ತೇವೆ. ಕಾನೂನು ಅನುಷ್ಠಾನಕ್ಕೆ ಪಟ್ಟು ಯಾಕೆ? ಎಂದು ನ್ಯಾಯಪೀಠ ಪ್ರಶ್ನಿಸಿತು.

ನಿಮಗೆ ಸರ್ಕಾರದ ಮೇಲೆ ನಂಬಿಕೆ ಇದೆಯೋ ಇಲ್ಲವೋ ಎಂಬುದಕ್ಕೆ ಪ್ರಾಧಾನ್ಯವಿಲ್ಲ. ಸುಪ್ರೀಂಕೋರ್ಟ್, ನಾವೇನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಈ ಕಾನೂನು ಉತ್ತಮವಾಗಿದೆ ಎಂದು ಹೇಳುವ ಯಾವುದೇ ಅರ್ಜಿ ನಮ್ಮ ಮುಂದೆ ಬಂದಿಲ್ಲ ಎಂದು ಕೇಂದ್ರದ ನಿರ್ಧಾರಕ್ಕೆ ನ್ಯಾಯಪೀಠ ಚಾಟಿಯೇಟು ಕೊಟ್ಟಿದೆ.

ಸಿಜೆಐ ನಮ್ಮ ಉದ್ದೇಶ ಸ್ಪಷ್ಟವಾಗಿದೆ, ನಾವು ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಬಯಸುತ್ತೇವೆ. ಹಾಗಾಗಿಯೇ ಈ ಕಾನೂನನ್ನು ತಡೆ ಹಿಡಿಯುವುದಕ್ಕೆ ಸಾಧ್ಯವಿಲ್ಲವೇ ಎಂದು ಅಂದು ಕೇಳಿದ್ದೆವು. ಆದರೆ ನೀವು ಸಮಯಾವಕಾಶ ಕೇಳುತ್ತಾ ಹೋದಿರಿ..ಈವರೆಗೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇದೆಲ್ಲ ಹಿಂದಿನ ಸರ್ಕಾರ ಮಾಡಿದ್ದು ಎಂದು ಹೇಳುವುದರಿಂದ ನಿಮಗೆ ಸಹಾಯ ಆಗಲ್ಲ. ನಾವು ಸಾಂವಿಧಾನಿಕ ರೀತಿಯಲ್ಲಿ ಚರ್ಚೆ ಮಾಡುತ್ತೇವೆ, ಸಂಧಾನ ಕಾರ್ಯ ನಡೆಯುತ್ತಿದೆ ಎಂದು ನೀವು ಹೇಳುತ್ತಿದ್ದೀರಿ..ಆದರೆ, ಸಂಧಾನ ಎಲ್ಲಿ ನಡೆಯುತ್ತಿದೆ ? ಎಂದು ವಿಧವಿಧವಾಗಿ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಸುರಿಮಳೆ ಸುರಿಸಿತು.

ರೈತರ ಪ್ರತಿಭಟನೆಯನ್ನು ಸರ್ಕಾರ ನಿಭಾಯಿಸುವ ರೀತಿ ಬಗ್ಗೆ ನಮಗೆ ತೀವ್ರ ಅಸಮಧಾನವಿದೆ. ಕಾನೂನು ರೂಪಿಸುವ ಮುನ್ನ ಯಾವ ರೀತಿಯ ಸಲಹಾ ಪ್ರಕ್ರಿಯೆಗಳನ್ನು ಅನುಸರಿಸಿತ್ತು ಎಂಬುದು ನಮಗೆ ಗೊತ್ತಿಲ್ಲ, ಹಲವಾರು ರಾಜ್ಯಗಳು ಇದನ್ನು ವಿರೋಧಿಸಿವೆ ಎಂದು ಅಟಾರ್ನಿ ಜನರಲ್​ರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯಕ್ಕೆ ಉತ್ತರಿಸಿದ ಅಟಾರ್ನಿ ಜನರಲ್, ಎಪಿಎಂಸಿ ವ್ಯವಸ್ಥೆಗೆ ನಿರ್ಬಂಧವನ್ನು ತೆಗೆದು ಹಾಕುವ ಬಗ್ಗೆ ಕಳೆದ ಸರ್ಕಾರ ರಚಿಸಿದ ತಜ್ಞರ ಸಮಿತಿಯ ಶಿಫಾರಸು ಮೇರೆಗೆ ಕೃಷಿ ಕಾನೂನು ರೂಪಿಸಲಾಗಿದೆ. ಇದು ನೇರ ಮಾರುಕಟ್ಟೆಗೆ ಅನುಮತಿ ನೀಡುತ್ತದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

ರೈತರು ಕಾನೂನು ವಿರುದ್ಧ ಹೋರಾಡುತ್ತಿದ್ದಾರೆ. ಅವರು ಸಮಿತಿಯ ಎದುರು ಅಳಲು ತೋಡಿಕೊಳ್ಳಲಿ. ಸಮಿತಿ ವರದಿ ಸಲ್ಲಿಸಿದ ನಂತರ ನಾವು ಕಾನೂನು ಬಗ್ಗೆ ನಿರ್ಧರಿಸುತ್ತೇವೆ. ಯಾರೊಬ್ಬರ ಕೈಗೂ ರಕ್ತ ಮೆತ್ತಿಕೊಳ್ಳಲು ನಾವು ಬಯಸುವುದಿಲ್ಲ. ಯಾರಾದರೂ ಒಂದು ದಿನ ಶಾಂತಿ ಕದಡುವ ಕಾರ್ಯವೆಸಗಿದರೆ..ಎಂಬ ಆತಂಕ ನಮ್ಮಲ್ಲಿದೆ. ಏನಾದರೂ ಅನಾಹುತಗಳಾದರೆ ಪ್ರತಿಯೊಬ್ಬರೂ ಹೊಣೆಗಾರರಾಗುತ್ತಾರೆ ಎಂದು ನ್ಯಾಯಾಲಯ ಆತಂಕ ವ್ಯಕ್ತಪಡಿಸಿತು.

ಹರಿಯಾಣ ಸರ್ಕಾರ ಪರ ವಕೀಲ ಹರೀಶ್ ಸಾಳ್ವೆ, ನ್ಯಾಯಾಲಯ ಕಾನೂನು ತಡೆ ಹಿಡಿಯುವುದಾದರೆ, ರೈತರು ಪ್ರತಿಭಟನೆ ನಿಲ್ಲಿಸಲಿ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಎಲ್ಲವನ್ನೂ ಒಂದೇ ಒಂದು ಆದೇಶದಿಂದ ಗಳಿಸಲು ಸಾಧ್ಯವಿಲ್ಲ. ರೈತರು ಸಮಿತಿಯ ಎದುರ ಮನವಿ ಮಾಡಲಿ. ನಾಗರಿಕರು ಪ್ರತಿಭಟನೆ ಮಾಡಬಾರದು ಎಂದು ನ್ಯಾಯಾಲಯ ಆದೇಶ ನೀಡುವುದಿಲ್ಲ ಎಂದು ತಿಳಿಸಿತು.

Explainer | ನೂತನ ಕೃಷಿ ಕಾನೂನು 2020 ಹೇಳುವುದೇನು? ವಿವಾದವೇಕೆ? ರೈತರಲ್ಲಿ ಏಕಿಷ್ಟು ಆತಂಕ?

Published On - 12:55 pm, Mon, 11 January 21