ಚಂಡೀಗಢ: ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮದ ವೇದಿಕೆಯನ್ನು ಧ್ವಂಸಗೊಳಿಸಿದ ಪ್ರಕರಣದಲ್ಲಿ 71 ಜನರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಭಾರತ ದಂಡ ಸಂಹಿತೆಯ ವಿವಿಧ ಸೆಕ್ಷನ್ ಮತ್ತು ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿಯಲ್ಲಿ 71 ಮಂದಿ ಹಾಗೂ ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಭಾನುವಾರ ಕರ್ನಾಲ್ ಜಿಲ್ಲೆಯಲ್ಲಿ ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮ ಆರಂಭವಾಗುವ ಮುನ್ನ ಪ್ರತಿಭಟನೆನಿರತ ರೈತರು ವೇದಿಕೆ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಹೆಲಿಕಾಪ್ಟರ್ ಇಳಿಯಲು ಮಾಡಿದ ತಾತ್ಕಾಲಿಕ ಹೆಲಿಪ್ಯಾಡ್ನ್ನು ಧ್ವಂಸಗೊಳಿಸಿದ್ದರು.
ಕೇಂದ್ರದ ನೂತನ ಕೃಷಿ ಕಾನೂನಿನಂದ ರೈತರಿಗೆ ಯಾವ ರೀತಿಯ ಪ್ರಯೋಜನವಿದೆ ಎಂದು ವಿವರಿಸುವುದಕ್ಕಾಗಿ ಖಟ್ಟರ್, ಕಿಸಾನ್ ಮಹಾಪಂಚಾಯತ್ ಆಯೋಜಿಸಿದ್ದರು. ರೈತರು ಪ್ರತಿಭಟನೆ ನಡೆಸಿ ವೇದಿಕೆ ಧ್ವಂಸಗೊಳಿಸಿದ್ದರಿಂದ ಈ ಕಾರ್ಯಕ್ರಮ ರದ್ದಾಗಿತ್ತು.
ಪ್ರತಿಭಟನೆ ನಿರತ ರೈತರು ಕಾರ್ಯಕ್ರಮ ನಡೆಯುತ್ತಿರುವ ಕೈಮಲ ಗ್ರಾಮಕ್ಕೆ ಬರದಂತೆ ತಡೆಯಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದ್ದರು. ಕಪ್ಪು ಬಾವುಟ ಹಿಡಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮದ ಸ್ಥಳಕ್ಕೆ ಮುನ್ನುಗ್ಗಿದ ರೈತರು ಪೊಲೀಸರ ಮುಂದೆಯೇ ಬಿಜೆಪಿ ಬ್ಯಾನರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕಿಸಾನ್ ಮಹಾಪಂಚಾಯತ್ ಕಾರ್ಯಕ್ರಮ ವಿರುದ್ಧ ಸಿಡಿದೆದ್ದ ರೈತರು; ಪೊಲೀಸರಿಂದ ಅಶ್ರುವಾಯು ಪ್ರಯೋಗ