ನವದೆಹಲಿ: ಚುನಾವಣೆ ಬಾಂಡ್ಗಳ (ಎಲೆಕ್ಟೋರಲ್ ಬಾಂಡ್) ವಿತರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಮಾರ್ಚ್ 26ನೇ ತಾರೀಕಿನ ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ. ಇದರ ಪರಿಣಾಮವಾಗಿ, ಈಗ ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮಬಂಗಾಲ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯಲ್ಲಿ ಹೊಸದಾಗಿ ಚುನಾವಣೆ ಬಾಂಡ್ಗಳನ್ನು ಬಿಡುಗಡೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಕಿಕೊಂಡಿದ್ದ ಅರ್ಜಿಯ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯಮ್ ಅವರನ್ನು ಒಳಗೊಂಡ ಪೀಠವು ಮಾರ್ಚ್ 24ರಂದು ಕಾಯ್ದಿರಿಸಿತ್ತು.
2018 ಮತ್ತು 2019ರಲ್ಲಿ ಯಾವುದೇ ಅಡೆತಡೆ ಇಲ್ಲದೆ ಬಾಂಡ್ಗಳನ್ನು ಬಿಡುಗಡೆ ಮಾಡಿದಾಗ ಅಗತ್ಯ ಪ್ರಮಾಣದ ಸುರಕ್ಷತಾ ಕ್ರಮಗಳು ಇದ್ದವು. ಸದ್ಯಕ್ಕೆ ಚುನಾವಣೆ ಬಾಂಡ್ಗಳಿಗೆ ತಡೆ ನೀಡುವುದಕ್ಕೆ ಯಾವುದೇ ಸಮರ್ಥನೆ ಇಲ್ಲ ಎಂಬುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿರುವುದಾಗಿ ಕಾನೂನು ಸಂಸ್ಥೆಯೊಂದು ತಿಳಿಸಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ಏನಿದು ಎಲೆಕ್ಟೋರಲ್ ಬಾಂಡ್?
ಎಲೆಕ್ಟೋರಲ್ ಬಾಂಡ್ ಎಂಬುದು ಫೈನಾನ್ಷಿಯಲ್ ಇನ್ಸ್ಟ್ರುಮೆಂಟ್. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಇದನ್ನು ಬಳಸಲಾಗುತ್ತಿದೆ. ಕೇವಲ ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್ಗಳು ಕೇಂದ್ರದ ಅನುಮತಿ ಮೇರೆ ವಿತರಿಸುತ್ತದೆ. ದೇಣಿಗೆ ನೀಡುವವರು ಚೆಕ್ ಮತ್ತು ಡಿಜಿಟಲ್ ಪಾವವತಿ ಮಾಡಬಹುದು. ನಗದಿನ ಮೂಲಕ ಖರೀದಿಸುವುದು ಸಾಧ್ಯವಿಲ್ಲ. ಬಾಂಡ್ ವಿತರಣೆ ಆದ ನಿರ್ದಿಷ್ಟ ಅವಧಿಯೊಳಗಾಗಿ ನೋಂದಾಯಿತ ರಾಜಕೀಯ ಪಕ್ಷಗಳು ಆಯಾ ಬ್ಯಾಂಕ್ ಖಾತೆಯಲ್ಲಿ ಹಣ ಪಡೆದುಕೊಳ್ಳಬಹುದು.
ಎಲೆಕ್ಟೋರಲ್ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳು ಪಡೆಯುವ ಈ ನಿಧಿಯನ್ನು ಭಯೋತ್ಪಾದನೆಯಂಥ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸದಂತೆ ತಡೆಯುವುದಕ್ಕೆ ನಿಯಂತ್ರಣ ಇದೆಯೇ ಎಂದು ಮಾರ್ಚ್ 24ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಪ್ರಶ್ನೆ ಎತ್ತಿತ್ತು. ಮುಖ್ಯನಾಯಮೂರ್ತಿ ಬೋಬ್ಡೆ ಅವರನ್ನು ಒಳಗೊಂಡ ಪೀಠವು ಅಟಾರ್ನಿ ಜನರಲ್ ಕೆ.ಕೆ. ವೇಣಿಗೋಪಾಲ್ ಅವರಿಗೆ ಸೂಚಿಸಿ, ಸರ್ಕಾರವು ಈ ಸಮಸ್ಯೆ ಕಡೆಗೆ ಗಮನ ಹರಿಸಬೇಕು. ಚುನಾವಣೆ ಬಾಂಡ್ಗಳ ಮೂಲಕ ಪಡೆದ ಹಣವು ಭಯೋತ್ಪಾದನೆಯಂಥ ಕಾನೂನುಬಾಹಿರ ಉದ್ದೇಶಕ್ಕೆ ದುರ್ಬಳಕೆ ಆಗಬಾರದು ಎಂದಿತ್ತು.
ಯಾರು ಖರೀದಿಸುತ್ತಾರೆ ಎಂಬುದು ಗೊತ್ತಾಗಲ್ಲ
ಎಡಿಆರ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ವಕಾಲತ್ತು ವಹಿಸಿದ್ದರು. ಚುನಾವಣೆ ಬಾಂಡ್ಗಳನ್ನು ಮಾರಾಟ ಮಾಡಲು ಅವಕಾಶ ನೀಡಬಾರದು ಎಂದು ಕೇಳಿದ್ದರು. ಚುನಾವಣೆಗಳು ದೊಡ್ಡ ಮಟ್ಟದಲ್ಲಿ ಹಣದಿಂದ ಪ್ರಭಾವಿತ ಆಗುತ್ತಿದೆ. ಪೀಠವು ಸಹ ಗಮನಿಸಿದಂತೆ, ಚುನಾವಣೆಯಲ್ಲಿ ಹಣದ ಪ್ರಭಾವ ದೊಡ್ಡ ಮಟ್ಟದಲ್ಲಿದೆ ಎಂಬುದು ಬಹಳ ಮಂದಿಗೆ ತಿಳಿದಿದೆ ಎಂದಿದ್ದರು.
ಚುನಾವಣೆ ಬಾಂಡ್ ಯಾರು ಖರೀದಿ ಮಾಡುತ್ತಾರೆ ಎಂಬದು ಗೊತ್ತಾಗುವುದಿಲ್ಲ. ಅದನ್ನು ಬಹಿರಂಗ ಮಾಡುವುದಿಲ್ಲ. ಈ ಬಗ್ಗೆ ಹಿಂದೆ ಚುನಾವಣೆ ಆಯೋಗ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಷೇಪ ವ್ಯಕ್ತಪಡಿಸಿತ್ತು. ಇನ್ನು ಚುನಾವಣೆ ಬಾಂಡ್ ಮೂಲಕ ಬರುವ ಹಣ ಬಹುತೇಕ ಆಳುವ ಪಕ್ಷಗಳಿಗೆ ಬರುತ್ತದೆ ಎಂದಿದ್ದರು. ಪೀಠವು ಗಮನಿಸಿರುವ ಪ್ರಕಾರ, ಚುನಾವಣೆ ಬಾಂಡ್ಗಳ ಮೂಲಕ ಹಣವು ಯಾವ ಪಕ್ಷಕ್ಕಾದರೂ ಬರಬಹುದು.
Published On - 12:05 pm, Fri, 26 March 21