ಸಂಸ್ಕೃತವನ್ನು (Sanskrit) ಭಾರತದ ರಾಷ್ಟ್ರ ಭಾಷೆಯನ್ನಾಗಿ (national language) ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.ನ್ಯಾಯಮೂರ್ತಿಗಳಾದ ಎಂಆರ್ ಷಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ಮನವಿಯಲ್ಲಿ ಪ್ರಸ್ತಾಪಿಸಲಾದ ವಿಷಯವನ್ನು ಪರಿಗಣಿಸಲು ಸರಿಯಾದ ವೇದಿಕೆ ಸಂಸತ್, ನ್ಯಾಯಾಲಯವಲ್ಲ ಎಂದು ಹೇಳಿದೆ. ನಾವು ಏಕೆ ನೋಟಿಸ್ ಜಾರಿ ಮಾಡಬೇಕು ಅಥವಾ ಪ್ರಚಾರಕ್ಕಾಗಿ ಘೋಷಿಸಬೇಕು? ನಾವು ನಿಮ್ಮ ಕೆಲವು ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಆದರೆ ಇದನ್ನು ಚರ್ಚಿಸಲು ಸರಿಯಾದ ವೇದಿಕೆ ಸಂಸತ್. ಇದಕ್ಕೆ ಸಂವಿಧಾನದ ತಿದ್ದುಪಡಿ ಅಗತ್ಯವಿದೆ ಎಂದು ಪೀಠ ಹೇಳಿದೆ. ಇದು ನೀತಿಯ ವಿಷಯವಾಗಿದ್ದು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ನಾವು ಅರ್ಜಿಯನ್ನು ಪರಿಗಣಿಸಲು ನಿರಾಕರಿಸುತ್ತೇವೆ. ಅರ್ಜಿ ವಜಾಗೊಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮುಂದೆ ವಕೀಲರು ಇದನ್ನು ಸಲ್ಲಿಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ. ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ಕೆ.ಜಿ.ವಂಝಾರ ಅವರು ಪಿಐಎಲ್ ಸಲ್ಲಿಸಿದ್ದರು.
ಸಂಸ್ಕೃತವನ್ನು ರಾಷ್ಟ್ರ ಭಾಷೆಯನ್ನಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಅದೇ ವೇಳೆ ಇಂಥಾ ಕ್ರಮವು ದೇಶದ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಒದಗಿಸುವ ಪ್ರಸ್ತುತ ಸಾಂವಿಧಾನಿಕ ನಿಬಂಧನೆಗಳಿಗೆ ಅಡ್ಡಿಯಾಗುವುದಿಲ್ಲ ಎಂದು ಮನವಿಯಲ್ಲಿ ಹೇಳಿದೆ.