
ಚೆನ್ನೈ, ಅಕ್ಟೋಬರ್ 27: ತಮಿಳುನಾಡಿನ ತೇಣಿ ಜಿಲ್ಲೆಯ ತೆಕ್ಕಂಪಟ್ಟಿ ಉಪ ಜೈಲಿನಲ್ಲಿ ಸೋಮವಾರ ತಡರಾತ್ರಿ ಭೀಕರ ಜೈಲು ಬ್ರೇಕ್ ನಡೆದಿದ್ದು, ಒಟ್ಟು 17 ವಿಚಾರಣಾಧೀನ ಕೈದಿಗಳು ಸಿಬ್ಬಂದಿ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಕಳೆದ 30 ವರ್ಷಗಳಲ್ಲೇ ರಾಜ್ಯದಲ್ಲಿ ನಡೆದ ಅತ್ಯಂತ ದೊಡ್ಡ ಜೈಲು ಪರಾರಿ ಪ್ರಕರಣ ಇದಾಗಿದ್ದು, ಕರಾವಳಿ ಹಾಗೂ ನೆರೆ ರಾಜ್ಯ ಕೇರಳದ ಗಡಿ ಭಾಗಗಳಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಸೋಮವಾರ ರಾತ್ರಿ ಸುಮಾರು 10.30ರ ವೇಳೆಗೆ, ಜೈಲಿನಲ್ಲಿದ್ದ ಸಹ ಕೈದಿಯೊಬ್ಬನಿಗೆ ಫಿಟ್ಸ್ (ಮೂರ್ಛೆ ರೋಗ) ಬಂದಿದೆ ಎಂದು ಸಬೂಬು ಹೇಳಿ ಕೈದಿಗಳು ಜೈಲು ಸಿಬ್ಬಂದಿಯ ನೆರವು ಕೋರಿದ್ದರು. ಇದನ್ನು ನಂಬಿ ಭದ್ರತಾ ಸಿಬ್ಬಂದಿ ಜೈಲು ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ, ಅವರ ಮೇಲೆ ಕೈದಿಗಳು ಏಕಾಏಕಿ ಎರಗಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ಗಲಾಟೆಯಲ್ಲಿ ಜೈಲು ಸಿಬ್ಬಂದಿ ಸೇರಿದಂತೆ ಮೂವರು ಗಾಯಗೊಂಡಿದ್ದು, ಅವರನ್ನು ತೇಣಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಎಚ್ಚೆತ್ತ ತಮಿಳುನಾಡು ಪೊಲೀಸರು ತಕ್ಷಣವೇ ಬಲೆ ಬೀಸಿದ್ದು, ಮಂಗಳವಾರ ಬೆಳಗಿನ ವೇಳೆಗೆ ಪರಾರಿಯಾಗಿದ್ದ ನಾಲ್ವರು ಕೈದಿಗಳಾದ ಸಿಲಂಬರಸನ್, ಪ್ರವೀಣ್ ಕುಮಾರ್, ರಾಜಾ ಸಿಕಂದರ್ ಮತ್ತು ರಾಜ್‌ಕುಮಾರ್ ಅವರನ್ನು ಬಂಧಿಸಿದ್ದಾರೆ. ಉಳಿದ 13 ಕೈದಿಗಳ ಪತ್ತೆಗೆ 17 ಪ್ರತ್ಯೇಕ ವಿಶೇಷ ಪೊಲೀಸ್ ಪಡೆಗಳನ್ನು ರಚಿಸಲಾಗಿದೆ. ತೇಣಿ ಜಿಲ್ಲೆಯು ಕೇರಳ ರಾಜ್ಯದ ಗಡಿಗೆ ಹೊಂದಿಕೊಂಡಿರುವುದರಿಂದ, ಕೇರಳದ ಇಡುಕ್ಕಿ ಜಿಲ್ಲೆ ಸೇರಿದಂತೆ ಗಡಿ ಅರಣ್ಯ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿಸಲಾಗಿದೆ.
1995ರಲ್ಲಿ ವೆಲ್ಲೂರು ಕೋಟೆಯಲ್ಲಿದ್ದ ಎಲ್‌ಟಿಟಿಇ (LTTE) ಶಂಕಿತರು ಸುರಂಗ ತೋಚಿ ಪರಾರಿಯಾದ ನಂತರ ನಡೆದ ಅತಿದೊಡ್ಡ ಜೈಲು ಬ್ರೇಕ್ ಇದಾಗಿದೆ. ಕಾನೂನು ಸಚಿವ ಸಿ.ಟಿ.ಆರ್. ನಿರ್ಮಲ್ ಕುಮಾರ್ ಅವರು ತನಿಖೆಗೆ ಆದೇಶಿಸಿದ್ದು, ಭದ್ರತಾ ಲೋಪ ಎಸಗಿದ ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:59 am, Tue, 27 October 26