ತಮಿಳುನಾಡಿನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ (Omicron Variant) ಪತ್ತೆಯಾಗಿದೆ. ನೈಜೀರಿಯಾದಿಂದ ಬಂದಿದ್ದ ವ್ಯಕ್ತಿಯಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡು, ಅದನ್ನು ಜಿನೋಮ್ ಸಿಕ್ವೆನ್ಸಿಂಗ್ ತಪಾಸಣೆಗೆ ಕಳಿಸಿದಾಗ ಅವರಲ್ಲಿ ಒಮಿಕ್ರಾನ್ ಇರುವುದು ದೃಢಪಟ್ಟಿದೆ. ಸದ್ಯ ಒಮಿಕ್ರಾನ್ ಸೋಂಕಿತ ಮತ್ತು ಆತನ ಜತೆಗೆ ಇದ್ದಿದ್ದ ಏಳು ಪ್ರಯಾಣಿಕರು ಗಿಂಡಿ ಕಿಂಗ್ಸ್ ಇನ್ಸ್ಟಿಟ್ಯೂಟ್ನಲ್ಲಿ ದಾಖಲಾಗದ್ದಾರೆ. ದೇಶದ ಇತರೆಡೆಗೆ ಒಮಿಕ್ರಾನ್ ಬಂದಾಗಲೇ ತಮಿಳುನಾಡು ಕೂಡ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ತಪಾಸಣೆ ಪ್ರಮಾಣವನ್ನು ಹೆಚ್ಚಿಸಿದೆ ಎಂದು ಆರೋಗ್ಯ ಸಚಿವ ಮಾ.ಸುಬ್ರಹ್ಮಣಿಯನ್ ತಿಳಿಸಿದ್ದಾರೆ. ರಾಜ್ಯಾದ್ಯಂತ ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ 50-150 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಅಷ್ಟೇ ಅಲ್ಲ ಈ ಹಾಸ್ಪಿಟಲ್ಗಳಲ್ಲಿ ವೈದ್ಯಕೀಯ ಉಪಕರಣಗಳು, ಆಕ್ಸಿಜನ್ ವ್ಯವಸ್ಥೆ ಸೇರಿ ಎಲ್ಲ ರೀತಿಯ ಅಗತ್ಯ ಸೌಕರ್ಯಗಳೂ ಇವೆ ಎಂದಿದ್ದಾರೆ.
ದೇಶದಲ್ಲಿ ಇದೀಗ ಒಮಿಕ್ರಾನ್ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ. ಬುಧವಾರ ಕೇರಳದಲ್ಲಿ 4 ಪ್ರಕರಣ ದಾಖಲಾಗಿದ್ದು, ಅಲ್ಲಿಗೆ 5ಕ್ಕೆ ಏರಿಕೆಯಾಗಿದೆ. ಹಾಗೇ, ಪಶ್ಚಿಮ ಬಂಗಾಳದಲ್ಲಿ ಒಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇದೀಗ ದೇಶದಲ್ಲಿ ಮಹಾರಾಷ್ಟ್ರದಲ್ಲಿ 32, ರಾಜಸ್ಥಾನದಲ್ಲಿ 17, ದೆಹಲಿ 6, ಗುಜರಾತ್ನಲ್ಲಿ 4, ಕರ್ನಾಟಕದಲ್ಲಿ 3, ಕೇರಳ 5, ಆಂಧ್ರಪ್ರದೇಶ, ಚಂಡಿಗಢ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ತಲಾ ಒಬ್ಬರು ಒಮಿಕ್ರಾನ್ ಸೋಂಕಿತರು ಇದ್ದಾರೆ.
ಒಮಿಕ್ರಾನ್ ಪ್ರಸರಣ ಡೆಲ್ಟಾಕ್ಕಿಂತಲೂ ವೇಗವಾಗಿದ್ದು, ಈಗಿರುವ ಕೊವಿಡ್ 19 ಲಸಿಕೆಗಳ ದಕ್ಷತೆಯನ್ನು ಕುಗ್ಗಿಸಲಿದೆ ಎಂದು ಆರೋಗ್ಯ ತಜ್ಞರು, ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಿರುವಾಗ ಅಮೆರಿಕದ ಔಷಧಿ ಕಂಪನಿ ಫೈಜರ್, ತಾವು ತಯಾರಿಸಿರುವ ಕೊವಿಡ್ 19 ಮಾತ್ರೆಗಳು ಒಮಿಕ್ರಾನ್ ವಿರುದ್ಧ ಶೇ.89ರಷ್ಟು ಪರಿಣಾಮಕಾರಿ. ಪ್ರಾಥಮಿಕ ಹಂತದಲ್ಲಿಯೇ ಈ ಮಾತ್ರೆಗಳನ್ನು ಸೇವಿಸಿದರೆ, ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣವನ್ನು ತಡೆಗಟ್ಟುತ್ತದೆ ಎಂದು ಹೇಳಿಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರಾನ್ ಭಾರತಕ್ಕೆ ಕಾಲಿಟ್ಟು, ಈಗ ಇಲ್ಲಿ ಒಂದೊಂದೇ ರಾಜ್ಯವನ್ನಾಗಿ ವ್ಯಾಪಿಸುತ್ತಿದ್ದು, ಅದರ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಈ ಮಧ್ಯೆ ಯುಕೆಯಲ್ಲಿ ಒಮಿಕ್ರಾನ್ನಿಂದ ಮೊದಲ ಸಾವು ಆಗಿದ್ದು, ಮುಂದಿನ ತಿಂಗಳ ಹೊತ್ತಿಗೆ ವೈರಾಣು ಪ್ರಸರಣ ತೀವ್ರಗೊಳ್ಳಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Pearl Millet Benefits: ಸಜ್ಜೆ ರೊಟ್ಟಿ ಮಾಡುವ ವಿಧಾನದ ಜತೆಗೆ ಆರೋಗ್ಯಕರ ಗುಣಗಳ ಕುರಿತು ಇಲ್ಲಿದೆ ಮಾಹಿತಿ
Published On - 7:59 am, Thu, 16 December 21