Telangana MLC Polls: ತೆಲಂಗಾಣ ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ವಿ. ನರಸಿಂಹರಾವ್ ಪುತ್ರಿ ಸುರಭಿ ವಾಣಿ ದೇವಿಗೆ ಗೆಲುವು

|

Updated on: Mar 21, 2021 | 12:40 PM

Surabhi Vani Devi: ರಾಜಕೀಯಕ್ಕೆ ಹೊಸತಾಗಿ ಕಾಲಿರಿಸಿದ ಸುರಭಿ ಅವರಿಗೆ ಟಿಆರ್​ಎಸ್ ಟಿಕೆಟ್ ನೀಡಿದ್ದು, ಅವರ ಗೆಲುವು ಆಡಳಿತರೂಢ ಮತ್ತು ವಿಪಕ್ಷಗಳಿಗೆ ಅಚ್ಚರಿಯನ್ನುಂಟು ಮಾಡಿದೆ.

Telangana MLC Polls: ತೆಲಂಗಾಣ ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ವಿ. ನರಸಿಂಹರಾವ್ ಪುತ್ರಿ ಸುರಭಿ ವಾಣಿ ದೇವಿಗೆ ಗೆಲುವು
ಸುರಭಿ ವಾಣಿ ದೇವಿ ಅವರನ್ನು ಅಭಿನಂದಿಸುತ್ತಿರುವ ಕೆ.ಚಂದ್ರಶೇಖರ್ ರಾವ್ (ಟ್ವಿಟರ್ ಚಿತ್ರ)
Follow us on

ಹೈದರಾಬಾದ್: ತೆಲಂಗಾಣ ವಿಧಾನ ಪರಿಷತ್ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (TRS) ಅಭ್ಯರ್ಥಿಗಳಾದ ಸುರಭಿ ವಾಣಿ ದೇವಿ ಮತ್ತು ಪಲ್ಲ ರಾಜಶೇಖರ್ ರೆಡ್ಡಿ ವಿಜಯಿಗಳಾಗಿದ್ದಾರೆ. ಶನಿವಾರ ರಾತ್ರಿ ಮತ ಎಣಿಕೆ ಪೂರ್ತಿಗೊಂಡಿದ್ದು, ವಿಜಯಿಗಳ ಹೆಸರನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿದೆ. ಸುರಭಿ ವಾಣಿ ದೇವಿ ಭಾರತದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರ ಪುತ್ರಿ. ಹೈದರಾಬಾದ್-ರಂಗರೆಡ್ಡಿ- ಮೆಹಬೂಬ್ ನಗರ ಪದವೀಧರರ ಕ್ಷೇತ್ರದಲ್ಲಿ ಸುರಭಿ ಗೆಲುವು ಸಾಧಿಸಿದ್ದಾರೆ. ಸುರಭಿ ಅವರು ಬಿಜೆಪಿ ಅಭ್ಯರ್ಥಿ ಎನ್. ರಾಮಚಂದರ್ ರಾವ್ ಅವರನ್ನು ಪರಾಭವಗೊಳಿಸಿದ್ದಾರೆ. 92 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ಸುರಭಿ ಅವರು ಶೇಕಡಾ 56.2 ಮತಗಳನ್ನು ಗಳಿಸಿದ್ದಾರೆ.

ರಾಜಕೀಯಕ್ಕೆ ಹೊಸತಾಗಿ ಕಾಲಿರಿಸಿದ ಸುರಭಿ ಅವರಿಗೆ ಟಿಆರ್​ಎಸ್ ಟಿಕೆಟ್ ನೀಡಿದ್ದು, ಅವರ ಗೆಲುವು ಆಡಳಿತರೂಢ ಮತ್ತು ವಿಪಕ್ಷಗಳಿಗೆ ಅಚ್ಚರಿಯನ್ನುಂಟು ಮಾಡಿದೆ. ನಾಲ್ಗೊಂಡ ಖಮ್ಮಂ ಮತ್ತು ವಾರಾಂಗಲ್ ಚುನಾವಣಾ ಕ್ಷೇತ್ರದ ಟಿಆರ್​ಎಸ್ ಅಭ್ಯರ್ಥಿ, ಹಾಲಿ ಎಂಎಲ್ ಎಸಿ ಪಲ್ಲ ರಾಜೇಶ್ವರ್ ರೆಡ್ಡಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಪಲ್ಲ ರಾಜಶೇಖರ್ ಅವರು ಶೇಕಡಾ 30.2 ಮತಗಳಿಸಿದ್ದು ಸ್ವತಂತ್ರ ಅಭ್ಯರ್ಥಿ ತೀನ್ಮಾರ್ ಮಲ್ಲಣ್ಣ ಅವರನ್ನು ಪರಾಭವಗೊಳಿಸಿದ್ದಾರೆ.

ಎರಡು ಪದವೀಧರ ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ನಿಧಾನವಾಗಿ ನಡೆದಿತ್ತು. ಅಭ್ಯರ್ಥಿಗಳ ಪಟ್ಟಿ ಉದ್ದವಿದ್ದ ಕಾರಣ ಮತಪತ್ರ ಎಣಿಸಲು ಮೂರು ದಿನಗಳೇ ಬೇಕಾಗಿ ಬಂತು. ಈ ಕ್ಷೇತ್ರಗಳಲ್ಲಿ ಮಾರ್ಚ್ 14 ರಂದು ಚುನಾವಣೆ ನಡೆದಿತ್ತು. ಪದವೀಧರರ ವಿಧಾನ ಪರಿಷತ್ ಚುನಾವಣೆಯಲ್ಲಿ 10 ಲಕ್ಷ ಮಂದಿ ಮತದಾನ ಮಾಡಿದ್ದಾರೆ.

ಹೈದರಾಬಾದ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ದುಬ್ಬಕ ಉಪಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಟಿಏರ್ ಎಸ್ ಪಕ್ಷಕ್ಕೆ ಈ ಎರಡು ಸೀಟುಗಳನ್ನು ಗೆದ್ದಿರುವುದು ಮಹತ್ವ ಎನಿಸಿಕೊಂಡಿದೆ. ಮೇಯರ್ ಸ್ಥಾನವನ್ನು ಟಿಆರ್​ಎಸ್ ಪಕ್ಷ ಉಳಿಸಿಕೊಂಡಿದ್ದರೂ ಹಲವಾರು ಸೀಟುಗಳನ್ನು ಗೆದ್ದು ಬಿಜೆಪಿ ಜಿದ್ದಾಜಿದ್ದಿನ ಪೈಪೋಟಿ ನೀಡಿತ್ತು.

ಶನಿವಾರ ಹೈದರಾಬಾದ್​ನ ಟಿಆರ್ ಎಸ್ ಭವನದಲ್ಲಿ ಸಂಭ್ರಮಾಚರಣೆ ನಡೆದಿದೆ. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸುವ ವೇಳೆ ಸಣ್ಣ ಪ್ರಮಾಣದಲ್ಲಿ ಅಗ್ನಿ ಅವಘಢ ಸಂಭವಿಸಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

ಇದನ್ನೂ ಓದಿ: ತೆಲಂಗಾಣದಲ್ಲಿ ವಿದ್ಯುತ್ ಸೇವೆ ಕಡಿತಗೊಳಿಸಲು ಚೀನಾ ಹ್ಯಾಕರ್​ಗಳ ಪ್ರಯತ್ನ?