ಮಾನವೀಯತೆಗೇ ಲಾಕ್​ ಬಿತ್ತಾ?- ಕೊರೊನಾ ಸೋಂಕಿತಳನ್ನು ಮನೆಯಾಚೆ ಹಾಕಿದ ಪತಿ, ಮಕ್ಕಳು; ಆಹಾರ, ಔಷಧಿ ಇಲ್ಲದೆ ಜೀವ ಬಿಟ್ಟರು

|

Updated on: Apr 16, 2021 | 11:45 AM

ಮಹಿಳೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಅವರು ಬದುಕಿ ಉಳಿಯಬಹುದಿತ್ತು. ಆದರೆ ಮೂರ್ನಾಲ್ಕು ದಿನಗಳ ಕಾಲ ಯಾವುದೇ ಔಷಧಿ, ಆಹಾರ ಇಲ್ಲದೆ ಕಳೆಯುವಂತಾಯಿತು ಎಂದು ಐಸೋಲೇಶನ್​ ಕೇಂದ್ರದ ವೈದ್ಯರು ತಿಳಿಸಿದ್ದಾರೆ.

ಮಾನವೀಯತೆಗೇ ಲಾಕ್​ ಬಿತ್ತಾ?- ಕೊರೊನಾ ಸೋಂಕಿತಳನ್ನು ಮನೆಯಾಚೆ ಹಾಕಿದ ಪತಿ, ಮಕ್ಕಳು; ಆಹಾರ, ಔಷಧಿ ಇಲ್ಲದೆ ಜೀವ ಬಿಟ್ಟರು
ಪ್ರಾತಿನಿಧಿಕ ಚಿತ್ರ
Follow us on

ಕೊರೊನಾ ಸೋಂಕಿತರಿಂದ ದೂರ ಇರಬೇಕು.. ಹೊರತು ಅವರನ್ನು ಬೀದಿಪಾಲು ಮಾಡಬಾರದು. ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬಬೇಕು. ಸರಿಯಾದ ಚಿಕಿತ್ಸೆ ಪಡೆದರೆ ಇದು ಖಂಡಿತ ಗುಣವಾಗುವ ರೋಗ ಎಂದು ಕೊರೊನಾ ವೈರಸ್​ ಜಗತ್ತಿಗೆ ಕಾಲಿಟ್ಟಾಗಿನಿಂದಲೂ ಅದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಆದರೂ ಅಲ್ಲಲ್ಲಿ ಕೊರೊನಾ ಸೋಂಕಿತರನ್ನು ಬೀದಿಗೆ ನೂಕುವ, ಮನೆಯಿಂದ ಹೊರಹಾಕುವ ಪ್ರಸಂಗಗಳು ನಡೆಯುತ್ತಲೇ ಇವೆ. ಇದೀಗ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಕೊರೊನಾ ಸೋಂಕಿತ ತಾಯಿಯನ್ನು ಮಕ್ಕಳು ಮನೆಗೆ ಸೇರಿಸದೆ ಅಮಾನವೀಯತೆ ತೋರಿದ್ದಾರೆ. ಆ ತಾಯಿ ಕೊನೆಗೂ ಬದುಕಲಿಲ್ಲ.

ಈ ಮಹಿಳೆಗೆ 50ವರ್ಷ. ತರಕಾರಿ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದರು. ಹಾಗೇ ಪತಿ, ಗಂಡುಮಕ್ಕಳೊಂದಿಗೆ ಅಂಬೇಡ್ಕರ್ ಕಾಲನಿಯ ಜಮ್ಮಿಕುಂಟಾ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಏಪ್ರಿಲ್​ 8ರಂದು ಇವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತು. ಆಕೆಯಲ್ಲಿ ಕೊವಿಡ್​ ಕಾಣಿಸಿಕೊಳ್ಳುತ್ತಿದ್ದಂತೆ ಮನೆಯೊಳಗೆ ಬಾರದಂತೆ ಮನೆ ಮಾಲೀಕ ನಿರ್ಬಂಧ ಹೇರಿದ. ಮನೆ ಮಾಲೀಕ ಬಿಡಿ, ಈ ಮಹಿಳೆಯ ಪತಿ, ಮಕ್ಕಳು ಕೂಡ ಬೆಂಬಲಕ್ಕೆ ನಿಲ್ಲಲಿಲ್ಲ. ಸೋಂಕಿತ ಮಹಿಳೆ, ಅಸ್ವಸ್ಥರಾಗಿ ಎರಡು ದಿನ ಮನೆಯ ಹೊರಗೇ ಇದ್ದರೂ ಆಕೆಯ ಬಗ್ಗೆ ಯಾರೊಬ್ಬರೂ ಕನಿಕರ ತೋರಲಿಲ್ಲ. ನಂತರ ಆಕೆ, ತಾನು ತರಕಾರಿ ಮಾರುತ್ತಿದ್ದ, ಹಣ್ಣು-ತರಕಾರಿಗಳ ಮಾರುಕಟ್ಟೆಗೆ ಬಂದರು. ಆದರೆ ಆ ಮಾರುಕಟ್ಟೆ ಆಡಳಿತವೂ ಸಹ ಆಕೆಯನ್ನು ದೂರವೇ ತಳ್ಳಿತು.

ಬೇರೆ ದಾರಿ ಕಾಣದ ಮಹಿಳೆ ತನ್ನ ತರಕಾರಿ ಗಾಡಿಯನ್ನು ಅಂಬೇಡ್ಕರ್​ ಚೌಕ್​​ದ ಸೇತುವೆಯೊಂದರ ಕೆಳಗೆ ತೆಗೆದುಕೊಂಡು ಹೋಗಿ, ಅಲ್ಲೇ ಮಲಗಿದ್ದರು. ಶನಿವಾರ ಅದನ್ನು ನೋಡಿದ ಒಂದಷ್ಟು ಮಂದಿ, ಸ್ಥಳೀಯ ಆಡಳಿತಕ್ಕೆ ಸುದ್ದಿ ಮುಟ್ಟಿಸಿದರು. ಅಲ್ಲಿಗೆ ಬಂದ ಸ್ಥಳೀಯ ಆಡಳಿತದ ಅಧಿಕಾರಿಗಳು, ಮಹಿಳೆಯನ್ನು ಕರೆದುಕೊಂಡು ಹೋಗಿ ಜಮ್ಮಿಕುಂಟಾದ ಐಸೋಲೇಶನ್​ ಕೇಂದ್ರಕ್ಕೆ ಸೇರಿಸಿದ್ದಾರೆ. ಐಸೋಲೇಶನ್ ಕೇಂದ್ರದಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಆದರೆ ಅದು ಫಲಿಸದೆ ಬುಧವಾರ ಮೃತಪಟ್ಟಿದ್ದಾರೆ.

ಮಹಿಳೆಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಕ್ಕಿದ್ದರೆ ಅವರು ಬದುಕಿ ಉಳಿಯಬಹುದಿತ್ತು. ಆದರೆ ಮೂರ್ನಾಲ್ಕು ದಿನಗಳ ಕಾಲ ಯಾವುದೇ ಔಷಧಿ, ಆಹಾರ ಇಲ್ಲದೆ ಕಳೆಯುವಂತಾಯಿತು. ದೇಹದಲ್ಲಿ ಶಕ್ತಿಯೂ ಇಲ್ಲದ ಕಾರಣ, ಚಿಕಿತ್ಸೆಗೂ ಸ್ಪಂದಿಸಲಿಲ್ಲ ಎಂದು ವೈದ್ಯರು ಹೇಳಿದ್ದಾಗಿ ತೆಲಂಗಾಣದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನೊಂದು ಭೀಕರ ಘಟನೆ
ಇದೊಂದು ಆದರೆ, ಉತ್ತರಪ್ರದೇಶದ ಗ್ರೇಟರ್​ ನೊಯ್ಡಾದಲ್ಲಿ ಗುರುವಾರ ಕೊರೊನಾ ಸೋಂಕಿತ, 52 ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ. ತನಗೆ ಕೊವಿಡ್​ ಸೋಂಕು ತಗುಲಿದೆ ಎಂದು ಗೊತ್ತಾದಾಗಿನಿಂದಲೂ ಆಕೆ ಚಿಂತಾಕ್ರಾಂತಳಾಗಿದ್ದಳು. ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಾವಿನ ರಾಜಧಾನಿ | ಕೊರೊನಾಗೆ ಬಲಿಯಾದವರ ಅಂತ್ಯಸಂಸ್ಕಾರಕ್ಕೂ ಸಂಕಷ್ಟ!

Corona in Karnataka: ಏಪ್ರಿಲ್ 20ರ ತನಕ ನೈಟ್ ಕರ್ಫ್ಯೂ ಮುಂದುವರಿಕೆ; ಆನಂತರ ಕೊರೊನಾ ತಡೆಗೆ ಸೂಕ್ತ ನಿರ್ಧಾರ: ಸಿಎಂ ಯಡಿಯೂರಪ್ಪ

Published On - 11:43 am, Fri, 16 April 21