ದೆಹಲಿ, ಫೆ.7: ದೆಹಲಿ ಮದ್ಯದ ಅಬಕಾರಿ ನೀತಿಯಲ್ಲಿ (Delhi liquor excise policy) ಅಕ್ರಮ ಹಣ ವರ್ಗಾವಣೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ 5 ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಈ ಯಾವುದಕ್ಕೂ ಅರವಿಂದ್ ಕೇಜ್ರಿವಾಲ್ ಉತ್ತರಿಸದೆ, ತನಿಖಾ ಸಂಸ್ಥೆ ಕೇಂದ್ರ ಸರ್ಕಾರ ಹೇಳಿದಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಇಡಿ ಸಮನ್ಸ್ಗೆ ಉತ್ತರ ನೀಡದ ಕ್ರೇಜಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ ಕೋರ್ಟ್ ಮೊರೆ ಹೋಗಿತ್ತು. ಇದೀಗ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರ ಪೀಠ ಫೆ.17ರೊಳಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಇಡಿ 5 ಬಾರಿ ಪ್ರತ್ಯೇಕ ಸಮನ್ಸ್ ನೀಡಿದೆ. 2023ರ ನವೆಂಬರ್ 2 ಮತ್ತು ಡಿಸೆಂಬರ್ 22, ಹಾಗೆಯೇ ಜನವರಿ 3, ಜನವರಿ 18 ಮತ್ತು 2024 ರ ಫೆಬ್ರವರಿ 2 ರಂದು ಸಮನ್ಸ್ ನೀಡಲಾಗಿತ್ತು. ಇಡಿ ನೀಡಿದ ಐದು ಸಮನ್ಸ್ಗೆ ಅವರು ಉತ್ತರ ನೀಡಿರಲಿಲ್ಲ. ಈ ಸಮನ್ಸ್ ಕಾನೂನು ಬಾಹಿರವಾಗಿದೆ ಹಾಗೂ ರಾಜಕೀಯ ಪ್ರೇರಿತವಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿ ನ್ಯಾಯಾಲಯದ ಆದೇಶಕ್ಕೆ ಬುಧವಾರ ಪ್ರತಿಕ್ರಿಯಿಸಿದ ಎಎಪಿ, ನ್ಯಾಯಾಲಯದ ಆದೇಶವನ್ನು ಅಧ್ಯಯನ ಮಾಡುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಇಡಿ ನೀಡಿದ ಸಮನ್ಸ್ ಕಾನೂನುಬಾಹಿರ ಎಂದು ಸಮರ್ಥಿಸಿಕೊಂಡಿದೆ ಮತ್ತು ನ್ಯಾಯಾಲಯಕ್ಕೆ ತನ್ನ ನಿಲುವನ್ನು ತಿಳಿಸುವುದಾಗಿ ಹೇಳಿದೆ.
“ನಾವು ನ್ಯಾಯಾಲಯದ ಆದೇಶವನ್ನು ಅಧ್ಯಯನ ಮಾಡುತ್ತಿದ್ದೇವೆ ಮತ್ತು ಅದಕ್ಕೆ ಅನುಗುಣವಾಗಿ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಎಎಪಿ ನಾಯಕ ಜಾಸ್ಮಿನ್ ಶಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 5 ಬಾರಿ ಸಮನ್ಸ್ಗೆ ಗೈರಾದ ಅರವಿಂದ್ ಕೇಜ್ರಿವಾಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಇಡಿ
ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ದೆಹಲಿಯ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿದ್ದಾರೆ. ಹಾಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ l
Published On - 4:57 pm, Wed, 7 February 24