ಒಂದು ತಿಂಗಳ ಹಿಂದೆ ಕೊರೊನಾ ಕೇಸುಗಳ ಸಂಖ್ಯೆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದ ಸಂದರ್ಭದಲ್ಲಿ ಭಾರತ ಬೇರೆಬೇರೆ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡಿದ್ದನ್ನು ಹೊಗಳಿದವರೇ ಹೆಚ್ಚು. ಈಗ ಒಂದು ತಿಂಗಳಲ್ಲಿ, ಭಾರತದಲ್ಲಿ ಇದ್ದಕ್ಕಿದ್ದಂತೆ ಕೊರನಾದ ಎರಡನೇ ಅಲೆ ಬಂದು ಎಲ್ಲರೂ ಲಸಿಕೆ ಎಲ್ಲಿ ಸಿಗುತ್ತೆ ಎಂದು ತಲೆಕೆಡಿಸಿಕೊಂಡಿದ್ದಾರೆ. ವಿರೋಧ ಪಕ್ಷ ಕಾಂಗ್ರೆಸ್ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಟೀಕಿಸುತ್ತಿದೆ. ಈಗ ಪರಿಸ್ಥಿತಿಯೇ ಬೇರೆ ಇದೆ. ಭಾರತಕ್ಕೆ ಮೊದಲು ತನ್ನ ದೇಶಕ್ಕೆ ಅಗತ್ಯವಿರುವಷ್ಟು ಕೊರೊನಾ ಲಸಿಕೆಯನ್ನು ಉತ್ಪಾದಿಸಿ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಕೊರೊನಾ ಲಸಿಕೆಯನ್ನ ಉತ್ಪಾದಿಸಿ ಪೂರೈಸುತ್ತಿರುವ ಎರಡು ಕಂಪನಿಗಳಾದ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಹೈದರಾಬಾದ್ನ ಭಾರತ್ ಬಯೋಟೆಕ್ ಕಂಪನಿಗಳಿಗೆ ದೇಶ, ವಿದೇಶಗಳ ಕೊರೊನಾ ಲಸಿಕೆಯ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ.
ಲಸಿಕೆ ರಫ್ತಿನಿಂದ ಅಮದಿನತ್ತ ಭಾರತದ ಹೆಜ್ಜೆ
ಭಾರತ ಸರ್ಕಾರವು ಜನವರಿಯಿಂದ ಮಾರ್ಚ್ ವರೆಗೆ 6.4 ಕೋಟಿ ಡೋಸ್ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಿದೆ. ಏಪ್ರಿಲ್ ತಿಂಗಳಲ್ಲಿ 12 ಲಕ್ಷ ಡೋಸ್ ಲಸಿಕೆಯನ್ನು ರಫ್ತು ಮಾಡಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆಯೇ ಅಧಿಕೃತ ಮಾಹಿತಿ ನೀಡಿದೆ. ಇದುವರೆಗೂ 6.5 ಕೋಟಿ ಡೋಸ್ ಲಸಿಕೆಯನ್ನು ಭಾರತವು 84 ದೇಶಗಳಿಗೆ ರಫ್ತು ಮಾಡಿದೆ. ಇದರ ಪೈಕಿ 1.05 ಕೋಟಿ ಡೋಸ್ ಅನ್ನು 44 ದೇಶಗಳಿಗೆ ಉಚಿತವಾಗಿ ನೀಡಿದೆ. 3.58 ಕೋಟಿ ಡೋಸ್ ಲಸಿಕೆಯನ್ನು 25 ದೇಶಗಳಿಗೆ ಮಾರಾಟ ಮಾಡಿದೆ. 1.82 ಕೋಟಿ ಡೋಸ್ ಲಸಿಕೆಯನ್ನು 39 ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್ ಯೋಜನೆಯಡಿ ನೀಡಲಾಗಿದೆ ಎಂದು ಕೇಂದ್ರದ ಆರೋಗ್ಯ ಸಚಿವ ಡಾಕ್ಟರ್ ಹರ್ಷವರ್ಧನ್ ಅವರೇ ಅಧಿಕೃತ ಮಾಹಿತಿ ನೀಡಿದ್ದಾರೆ. ಬಡರಾಷ್ಟ್ರಗಳು ಕೊರೊನಾ ಲಸಿಕೆಯಿಂದ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಕೋವ್ಯಾಕ್ಸ್ ಯೋಜನೆ ರೂಪಿಸಿದೆ. ಈ ಯೋಜನೆಯಡಿ ಭಾರತವು 39 ಬಡ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಿಗೆ 1.82 ಕೋಟಿ ಡೋಸ್ ಲಸಿಕೆಯನ್ನು ಪೂರೈಸಿದೆ.
ಭಾರತವು ವಿದೇಶಗಳಿಗೆ 6.5 ಕೋಟಿ ಡೋಸ್ ಲಸಿಕೆ ರಫ್ತು ಮಾಡಿದೆ. ಆದರೇ, ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ 10 ರಷ್ಟು ಜನರಿಗೆ ಇದುವರೆಗೂ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಲು ಸಾಧ್ಯವಾಗಿಲ್ಲ. ಇದುವರೆಗೂ 11.5 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಿದೆ.
ಈಗ ಕೇಂದ್ರ ಸರ್ಕಾರಕ್ಕೂ ಪರಿಸ್ಥಿತಿಯ ಗಂಭೀರತೆಯ ಅರಿವಾಗಿದೆ. ಭಾರತದಲ್ಲೇ ಕೊರೊನಾ ಲಸಿಕೆ ಕೊರತೆಯಿಂದ ಲಸಿಕೆ ನೀಡಿಕೆಯನ್ನು ಅನೇಕ ರಾಜ್ಯಗಳು ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿತ್ತು ಈಗ ತನ್ನ ತಪ್ಪಿನಿಂದ ಕೇಂದ್ರ ಸರ್ಕಾರ ಪಾಠ ಕಲಿತಿದೆ. ಭಾರತವು ಈಗ ತನ್ನ ಲಸಿಕಾ ಕಾರ್ಯತಂತ್ರವನ್ನು ಬದಲಿಸಿಕೊಳ್ಳುತ್ತಿದೆ. ಭಾರತದಲ್ಲಿ ಉತ್ಪಾದನೆಯಾಗುವ ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ರಫ್ತು ಮಾಡಲ್ಲ. ಮೊದಲು ತನ್ನ ದೇಶದ ನಾಗರಿಕರಿಗೆ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ಭಾರತದಲ್ಲಿ ಕೊರೊನಾ ಲಸಿಕೆ ಕೊರತೆಗೆ ಕಾರಣಗಳೇನು?
ಭಾರತದಲ್ಲಿ ಕೊರೊನಾ ಲಸಿಕೆಯ ಕೊರತೆಗೆ ಮೂರು ಪ್ರಮುಖ ಕಾರಣಗಳಿವೆ. ಲಸಿಕೆಯ ಉತ್ಪಾದನೆಯಲ್ಲಿ ಬಂಡವಾಳ ಹೂಡಿಕೆಯ ಕೊರತೆ ಎದುರಾಗಿದೆ. ಕಚ್ಚಾವಸ್ತುಗಳ ಕೊರತೆ ಎದುರಾಗಿದೆ. ಭಾರತದಲ್ಲಿ ಕೊರೊನಾ ಕೇಸ್ ಎರಡನೇ ಅಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಬಹುದು ಎನ್ನುವುದನ್ನು ಕಡೆಗಣಿಸಿದ್ದು ಕೂಡ ಲಸಿಕೆಯ ಕೊರತೆಗೆ ಕಾರಣವಾಗಿದೆ.
ಭಾರತ ಹಾಗೂ ವಿಶ್ವದ ಅತಿದೊಡ್ಡ ಲಸಿಕಾ ಉತ್ಪಾದಕ ಕಂಪನಿಯೆಂದರೇ, ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿ. ಈ ಕಂಪನಿಯು 2021ರ ಅಂತ್ಯದೊಳಗೆ ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ 200 ಕೋಟಿ ಡೋಸ್ ಲಸಿಕೆ ಪೂರೈಸುವ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಬ್ರಿಟನ್, ಕೆನಡಾ ಮತ್ತು ಸೌದಿ ಅರೇಬಿಯಾ ದೇಶಗಳಿಗೂ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಕೊರೊನಾ ಲಸಿಕೆಯನ್ನು ಪೂರೈಸಬೇಕಾದ ಒತ್ತಡದಲ್ಲಿದೆ. ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ ಇಂಗ್ಲೆಂಡ್ ದೇಶದಲ್ಲಿನ ಉತ್ಪಾದನೆ ಕೂಡ ಸ್ಪಲ್ಪ ಮಟ್ಟಿಗೆ ಕುಂಠಿತವಾಗಿದೆ.
ಈ ಎಲ್ಲ ಗಾಯದ ಮೇಲೆ ಬರೆ ಎಳೆದಂತೆ ವಿಶ್ವದ ದೊಡ್ಡಣ್ಣ ಆಮೆರಿಕಾ, ಲಸಿಕೆಯ ಕಚ್ಚಾವಸ್ತುಗಳನ್ನು ಆಮೆರಿಕಾದಿಂದ ಬೇರೆ ದೇಶಗಳಿಗೆ ರಫ್ತು ಮಾಡದಂತೆ ನಿರ್ಬಂಧ ವಿಧಿಸಿದೆ. ಲಸಿಕೆ ಕಚ್ಚಾವಸ್ತುಗಳು ತನಗೆ ಬೇಕು, ಹೀಗಾಗಿ ಬೇರೆ ದೇಶಗಳಿಗೆ ಲಸಿಕೆಯ ಕಚ್ಚಾ ವಸ್ತುಗಳನ್ನು ರಫ್ತು ಮಾಡಬಾರದೆಂದು 33 ಕೋಟಿ ಜನಸಂಖ್ಯೆ ಹೊಂದಿರುವ ಆಮೆರಿಕಾ ಆದೇಶಿಸಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೂಡ ಲಸಿಕೆಯ ಕಚ್ಚಾವಸ್ತುಗಳಿಗಾಗಿ ಆಮೆರಿಕಾವನ್ನೇ ಅವಲಂಬಿಸಿದೆ . ಆಮೆರಿಕಾದಿಂದ ಕಚ್ಚಾವಸ್ತುಗಳು ಭಾರತಕ್ಕೆ ಬರದೇ ಇರುವುದರಿಂದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾಗೆ ತನ್ನ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಕಂಪನಿಯು ತನ್ನ ಲಸಿಕೆಯ ಉತ್ಪಾದನೆಯನ್ನು ಪ್ರತಿ ತಿಂಗಳಿಗೆ 7 ಕೋಟಿ ಡೋಸ್ನಿಂದ 10 ಕೋಟಿ ಡೋಸ್ಗೆ ಹೆಚ್ಚಿಸುವ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಲಸಿಕೆಯ ಕಚ್ಚಾವಸ್ತು ರಫ್ತು ನಿರ್ಬಂಧ ತೆರವಿಗೆ ಆಮೆರಿಕಾಕ್ಕೆ ಮನವಿ
ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲಾ ಶುಕ್ರವಾರ ಅಮೆರಿಕ ಅಧ್ಯಕ್ಷರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಕೊರೊನಾ ಲಸಿಕೆಯ ಕಚ್ಚಾವಸ್ತುಗಳ ರಫ್ತಿನ ಮೇಲೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿ. ನಿಮ್ಮ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇದೆ ಎಂದು ಆದಾರ್ ಪೂನಾವಾಲಾ ಟ್ವೀಟ್ ಮಾಡಿ ಆಮೆರಿಕಾ ಅಧ್ಯಕ್ಷ ಜೋ ಬೈಡೆನ್ಗೆ ಮನವಿ ಮಾಡಿದ್ದಾರೆ.
ಜೊತೆಗೆ ಭಾರತವು ಕಳೆದ ವರ್ಷವೇ ತನಗೆ ಎಷ್ಟು ಕೋಟಿ ಡೋಸ್ ಲಸಿಕೆ ಬೇಕೆಂದು ಸೆರಮ್ ಇನ್ಸ್ಟಿಟ್ಯೂಟ್ಗೆ ಆರ್ಡರ್ ನೀಡಲು ಹಿಂದೇಟು ಹಾಕಿತ್ತು. ಆಕ್ಸ್ಫರ್ಡ್ ವಿವಿ-ಅಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಗೆ ಭಾರತದ ಡಿಸಿಜಿಐ ಒಪ್ಪಿಗೆ ನೀಡಿದ ಬಳಿಕವಷ್ಟೇ ಸೆರಮ್ ಇನ್ಸ್ ಟಿಟ್ಯೂಟ್ ಜೊತೆಗೆ ಲಸಿಕೆಯ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಡಿಸಿಜಿಐ ಕೋವಿಶೀಲ್ಡ್ ಲಸಿಕೆಯನ್ನು ಜನರ ತುರ್ತು ಬಳಕೆಗೆ ಅನುಮೋದಿಸಿದ ಎರಡು ವಾರದ ಬಳಿಕವಷ್ಟೇ ಭಾರತ ಲಸಿಕೆ ಖರೀದಿ ಒಪ್ಪಂದ ಮಾಡಿಕೊಂಡಿತ್ತು. ಒಂದು ಹಂತದಲ್ಲಿ ಸೆರಮ್ ಇನ್ಸ್ಟಿಟ್ಯೂಟ್ ತಾನು ಉತ್ಪಾದಿಸಿದ ಲಸಿಕೆಯನ್ನು ಸಂಗ್ರಹಿಸಿಡುವ ಸ್ಟೋರೇಜ್ ಕೊರತೆ ಎದುರಿಸಿತ್ತು.
ಸೆರಮ್ ಇನ್ಸ್ಟಿಟ್ಯೂಟ್ 5 ಕೋಟಿ ಡೋಸ್ಗಿಂತ ಹೆಚ್ಚಿನ ಲಸಿಕೆಯನ್ನು ಪ್ಯಾಕ್ ಮಾಡಿ ಇಡಲು ಮುಂದಾಗಲಿಲ್ಲ. ಏಕೆಂದರೇ, ಹೆಚ್ಚಿನ ಡೋಸ್ ಉತ್ಪಾದಿಸಿದರೇ, ನಮ್ಮ ಮನೆಯಲ್ಲೇ ಲಸಿಕೆ ಸಂಗ್ರಹಿಸಿಡಬೇಕಾಗುತ್ತಿತ್ತು ಎಂದು ಸೆರಮ್ ಇನ್ಸ್ ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲಾ ಹೇಳಿದ್ದರು. ಸೆರಮ್ ಇನ್ಸ್ ಟಿಟ್ಯೂಟ್ ಕಳೆದ ವರ್ಷದ ಆಕ್ಟೋಬರ್ ತಿಂಗಳಿನಿಂದಲೇ ಲಸಿಕೆಯನ್ನು ಉತ್ಪಾದಿಸಿ ಪ್ಯಾಕ್ ಮಾಡಲಾರಂಭಿಸಿತ್ತು. ಈಗಲೂ ಕೂಡ ಕೇಂದ್ರ ಸರ್ಕಾರವು ಸೆರಮ್ ಇನ್ಸ್ಟಿಟ್ಯೂಟ್ ಜೊತೆಗೆ 5 ರಿಂದ 10 ಕೋಟಿ ಡೋಸ್ ಖರೀದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದೆ. ದೀರ್ಘಕಾಲದ ಲಸಿಕೆ ಖರೀದಿ ಒಪ್ಪಂದವನ್ನೇ ಮಾಡಿಕೊಂಡಿಲ್ಲ.
ಲಸಿಕೆ ಉತ್ಪಾದಕ ಕಂಪನಿಗಳಿಗೆ ಹಣದ ನೆರವು ನೀಡಿಕೆಗೆ ಹಿಂದೇಟು
ಇನ್ನೂ ಸೆರಮ್ ಇನ್ಸ್ಟಿಟ್ಯೂಟ್ ತನ್ನ ಲಸಿಕೆಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ಮೂರು ಸಾವಿರ ಕೋಟಿ ರೂಪಾಯಿ ಹಣಕಾಸಿನ ನೆರವು ಕೇಳಿದೆ. ಆದರೆ, ಕೇಂದ್ರ ಸರ್ಕಾರವು ಖಾಸಗಿ ಕಂಪನಿಗಳಿಗೆ ಹಣಕಾಸಿನ ನೆರವು ನೀಡಲು ಸಾಧ್ಯವಿಲ್ಲ ಎಂದಿದೆ. ಹೀಗಾಗಿ ಸೆರಮ್ ಇನ್ಸ್ಟಿಟ್ಯೂಟ್ಗೆ ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಹಣಕಾಸಿನ ಕೊರತೆ ಕೂಡ ಎದುರಾಗಿದೆ. ಇದು ಸೋಷಿಯಲ್ ಮೀಡಿಯಾಗಳಲ್ಲೂ ಭಾರಿ ಚರ್ಚೆಯಾಗುತ್ತಿದೆ. ಕೇಂದ್ರ ಸರ್ಕಾರವು ತಾನು ನೇರವಾಗಿ ಸೆರಮ್ ಇನ್ಸ್ಟಿಟ್ಯೂಟ್ಗೆ ಹಣ ನೀಡಲಾಗದಿದ್ದರೇ, ಖಾಸಗಿ ಕಂಪನಿಗಳ ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್ಆರ್) ಫಂಡ್ ಹಣವನ್ನು ಸೆರಮ್ ಇನ್ಸ್ಟಿಟ್ಯೂಟ್ಗೆ ನೀಡಲಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಜನರು ಒತ್ತಾಯಿಸುತ್ತಿದ್ದಾರೆ. ಜೊತೆಗೆ ಪಿಎಂ-ಕೇರ್ಸ್ ಫಂಡ್ ನಿಂದಲೂ ಹಣ ನೀಡಲು ಅವಕಾಶ ಇದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸೆರಮ್ ಇನ್ಸ್ ಟಿಟ್ಯೂಟ್ ಮಾತ್ರವಲ್ಲದೇ, ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪನಿ ಕೂಡ ಲಸಿಕೆ ಉತ್ಪಾದನೆ ಹೆಚ್ಚಿಸಲು ಹಣಕಾಸಿನ ಕೊರತೆ ಎದುರಿಸುತ್ತಿದೆ. ಭಾರತ್ ಬಯೋಟೆಕ್ ಕಂಪನಿಯು ಹೈದರಾಬಾದ್ ಘಟಕ ಹಾಗೂ ಕರ್ನಾಟಕದ ಮಾಲೂರು ಘಟಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು 150 ಕೋಟಿ ರೂಪಾಯಿ ಹಣದ ಅಗತ್ಯ ಇದೆ. ಲಸಿಕೆ ಉತ್ಪಾದನೆ ಯಂತ್ರಗಳು ಮತ್ತು ಕಚ್ಚಾವಸ್ತುಗಳ ಖರೀದಿಗೆ ಹಣದ ಅಗತ್ಯ ಇದೆ. ಕೇಂದ್ರ ಸರ್ಕಾರದಿಂದ 150 ಕೋಟಿ ರೂಪಾಯಿ ಹಣಕಾಸಿನ ನೆರವು ನೀಡುವಂತೆ ಕೇಂದ್ರದ ಬಯೋಟೆಕ್ ಇಲಾಖೆಯನ್ನು ಕೋರಿದೆ.
ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆ ಹೆಚ್ಚಿಸಲು ಕ್ರಮ
ಇನ್ನೂ ಏಪ್ರಿಲ್ 16ರ ಶುಕ್ರವಾರ ಸಂಜೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ನೀಡಿದೆ. ಹೈದರಾಬಾದ್ನ ಭಾರತ್ ಬಯೋಟೆಕ್ ಕಂಪನಿಯು ಏಪ್ರಿಲ್ ತಿಂಗಳಲ್ಲಿ ತಿಂಗಳಿಗೆ 1 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿದೆ. 2021ರ ಮೇ-ಜೂನ್ ತಿಂಗಳ ವೇಳೆಗೆ ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ದ್ವಿಗುಣವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮೇ-ಜೂನ್ ವೇಳೆಗೆ ತಿಂಗಳಿಗೆ 2 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಲಾಗುತ್ತೆ. ಜುಲೈ-ಆಗಸ್ಟ್ ಅಂತ್ಯಕ್ಕೆ ಪ್ರತಿ ತಿಂಗಳು 6-7 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯಾಗಲಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ ತಿಂಗಳಿಗೆ 10 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯಾಗಲಿದೆ.
ಭಾರತ್ ಬಯೋಟೆಕ್ ಕಂಪನಿಯು ಕರ್ನಾಟಕದ ಕೋಲಾರದ ಮಾಲೂರು ಬಳಿಯ ತನ್ನ ಉತ್ಪಾದನಾ ಘಟಕದಲ್ಲಿ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಲಿದೆ. ಕೇಂದ್ರ ಸರ್ಕಾರದಿಂದ 65 ಕೋಟಿ ರೂಪಾಯಿ ಹಣಕಾಸಿನ ನೆರವು ನೀಡಲಿದೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ. ಈ 65 ಕೋಟಿ ರೂಪಾಯಿ ಹಣವನ್ನು ಕೋವ್ಯಾಕ್ಸಿನ್ ಲಸಿಕೆಯ ಉತ್ಪಾದನೆ ಹೆಚ್ಚಿಸಲು ಭಾರತ್ ಬಯೋಟೆಕ್ ಕಂಪನಿ ಬಳಕೆ ಮಾಡಲಿದೆ. ಮಿಷನ್ ಕೋವಿಡ್ ಸುರಕ್ಷಾ ಯೋಜನೆಯಡಿ ಕೊರೊನಾ ಲಸಿಕೆಯ ಉತ್ಪಾದನೆಯನ್ನು ಹೆಚ್ಚಳ ಮಾಡಲಾಗುತ್ತೆ ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹೇಳಿದೆ.
ಕಳೆದ ವರ್ಷ ಖರೀದಿ ಒಪ್ಪಂದ ಮಾಡಿಕೊಳ್ಳದೇ ಯಡವಟ್ಟು
ಇನ್ನೂ ಆಮೆರಿಕಾ, ಇಂಗ್ಲೆಂಡ್, ಯೂರೋಪಿಯನ್ ಯೂನಿಯನ್ ರಾಷ್ಟ್ರಗಳು ಲಸಿಕೆ ಉತ್ಪಾದಿಸುವ ಕಂಪನಿಗಳ ಜೊತೆಗೆ ಕಳೆದ ವರ್ಷವೇ ಲಸಿಕೆ ಸಂಶೋಧನೆ ನಡೆಯುವಾಗಲೇ ಖರೀದಿ ಒಪ್ಪಂದ ಮಾಡಿಕೊಂಡಿದ್ದವು. ಭಾರತವು ಕೂಡ ಅದೇ ರೀತಿ ಕಳೆದ ವರ್ಷವೇ ಪ್ರಮುಖ ಲಸಿಕೆ ತಯಾರಕ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ಇತ್ತು. ಆದರೇ, ಭಾರತ, ಲಸಿಕೆಯನ್ನು ತಾನೇ ಇಡೀ ವಿಶ್ವಕ್ಕೆ ಪೂರೈಸುತ್ತೇನೆ ಎನ್ನುವ ಅತಿಯಾದ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಾ ಯಡವಟ್ಟು ಮಾಡಿಕೊಂಡಿತ್ತು. ಯಾವುದೇ ಕಂಪನಿಯ ಜೊತೆಗೂ ಕಳೆದ ವರ್ಷ ಲಸಿಕೆ ಖರೀದಿ ಒಪ್ಪಂದವನ್ನೇ ಮಾಡಿಕೊಳ್ಳಲಿಲ್ಲ. ಇದು ಕೂಡ ಈಗ ಭಾರತ ಕೇವಲ ಸೆರಮ್ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ಕಂಪನಿಗಳ ಲಸಿಕೆ ಮೇಲೆ ಮಾತ್ರ ಅವಲಂಬಿತವಾಗುವಂತೆ ಮಾಡಿದೆ.
ಭಾರತವು ತನ್ನಲ್ಲಿ ಉತ್ಪಾದನೆಯಾದ ಕೊರೊನಾ ಲಸಿಕೆಗಳನ್ನು ತನ್ನ ನಾಗರಿಕರಿಗೆ ನೀಡದೇ, ಈಗ ಲಸಿಕೆಯ ಕೊರತೆಯನ್ನು ಎದುರಿಸುತ್ತಿದೆ. ವಿದೇಶಿ ಕಂಪನಿಗಳಾದ ಪೈಜರ್, ಮಾಡೆರ್ನಾ, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳಿಗೆ ಭಾರತವು ಈಗ ರೆಡ್ ಕಾರ್ಪೆಟ್ ಸ್ವಾಗತ ಕೋರಿದರೂ, ಆ ಕಂಪನಿಗಳು ಬೇಗನೇ ಭಾರತದ ಮಾರುಕಟ್ಟೆ ಪ್ರವೇಶಿಸಲು ಕೂಡ ಸಾಧ್ಯವಾಗುತ್ತಿಲ್ಲ. ಹೀಗಾಗಿ ಭಾರತದಲ್ಲಿ ಈಗ ಕೊರೊನಾ ಲಸಿಕೆಯ ಕೊರತೆ ಎದುರಾಗಿದೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಭಾಗವಹಿಸಿದ್ದ ನಿರ್ವಾನಿ ಅಖಾಡದ ನಾಯಕ ಕೊವಿಡ್ನಿಂದ ಸಾವು; ಮೇಳದಿಂದ ನಿರ್ಗಮಿಸಲು ಎರಡು ಅಖಾಡ ನಿರ್ಧಾರ
(The Indian governments plan to be self reliant on Covid vaccine gone wrong and here are reasons how and why)
Published On - 4:52 pm, Sat, 17 April 21