AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಂಭಮೇಳದಲ್ಲಿ ಭಾಗವಹಿಸಿದ್ದ ನಿರ್ವಾನಿ ಅಖಾಡದ ನಾಯಕ ಕೊವಿಡ್​ನಿಂದ ಸಾವು; ಮೇಳದಿಂದ ನಿರ್ಗಮಿಸಲು ಎರಡು ಅಖಾಡ ನಿರ್ಧಾರ

Kumbh Mela 2021: ಇಲ್ಲಿಯವರೆಗೆ 30 ಸಾಧುಗಳಿಗೆ ಕೊವಿಡ್ ದೃಢಪಟ್ಟಿದೆ. ನಿರ್ದಿಷ್ಟ ಅಖಾಡಕ್ಕೆ ಸೇರಿದವರು ಎಂದು ಹೇಳಲಾಗುವುದಿಲ್ಲ. ನಿರಂಜನಿ, ಜುನಾ ಮತ್ತು ಇತರ ಅಖಾಡಗಳಿಗೆ ಸೇರಿದ ಬಹುತೇಕ ಎಲ್ಲ ಅಖಾಡಗಳ ಸಾಧುಗಳಿಗೂ ಕೊರೊನಾವೈರಸ್ ತಗುಲಿದೆ ಎಂದು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಕೆ ಝಾ ಹೇಳಿದ್ದಾರೆ.

ಕುಂಭಮೇಳದಲ್ಲಿ ಭಾಗವಹಿಸಿದ್ದ ನಿರ್ವಾನಿ ಅಖಾಡದ ನಾಯಕ ಕೊವಿಡ್​ನಿಂದ ಸಾವು; ಮೇಳದಿಂದ ನಿರ್ಗಮಿಸಲು ಎರಡು ಅಖಾಡ ನಿರ್ಧಾರ
ಸಾಂದರ್ಭಿಕ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Apr 16, 2021 | 5:18 PM

Share

ಹರಿದ್ವಾರ: ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗವಹಿಸಿದ 30 ಸಾಧುಗಳಿಗೆ ಗುರುವಾರ ಕೊವಿಡ್ ದೃಢಪಟ್ಟಿದೆ. ಅಖಿಲ ಭಾರತೀಯ ಅಖಾಡ ಪರಿಷತ್​ನ ಮುಖಂಡ ಮಹಂತ ನರೇಂದ್ರ ಗಿರಿ ಸೇರಿದಂತೆ ಹಲವಾರು ಸ್ವಾಮಿಗಳು ಋಷಿಕೇಷದಲ್ಲಿರುವ ಏಮ್ಸ್​ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಹಾ ನಿರ್ವಾನಿ ಅಖಾಡದ ನಾಯಕ ಮಧ್ಯಪ್ರದೇಶದ ಸ್ವಾಮಿ ಕಪಿಲ್ ದೇವ್ ಕೊವಿಡ್​ನಿಂದಾಗಿ ಡೆಹ್ರೂಡೂನ್ ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಅದೇ ವೇಳೆ ಕುಂಭಮೇಳದಲ್ಲಿ ಭಾಗಿಯಾಗಿದ್ದ 13 ಧಾರ್ಮಿಕ ಸಂಘಟನೆಗಳಲ್ಲಿ ಎರಡನೇ ಅತಿ ದೊಡ್ಡ ಸಂಘಟನೆಯಾದ ನಿರಂಜನಿ ಅಖಾಡ ಶನಿವಾರದ ನಂತರ ಕುಂಭಮೇಳದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ. ಏಪ್ರಿಲ್ 30ರಂದು ಕುಂಭಮೇಳ ಮುಕ್ತಾಯಗೊಳ್ಳಲಿದ್ದು,ಎರಡು ವಾರಗಳ ಮುಂಚೆಯೇ ನಿರಂಜನಿ ಅಖಾಡ ಕುಂಭಮೇಳದಿಂದ ನಿರ್ಗಮಿಸಲಿದೆ.

ಇಲ್ಲಿಯವರೆಗೆ 30 ಸಾಧುಗಳಿಗೆ ಕೊವಿಡ್ ದೃಢಪಟ್ಟಿದೆ. ನಿರ್ದಿಷ್ಟ ಅಖಾಡಕ್ಕೆ ಸೇರಿದವರು ಎಂದು ಹೇಳಲಾಗುವುದಿಲ್ಲ. ನಿರಂಜನಿ, ಜುನಾ ಮತ್ತು ಇತರ ಅಖಾಡಗಳಿಗೆ ಸೇರಿದ ಬಹುತೇಕ ಎಲ್ಲ ಅಖಾಡಗಳ ಸಾಧುಗಳಿಗೂ ಕೊರೊನಾವೈರಸ್ ತಗುಲಿದೆ ಎಂದು ಹರಿದ್ವಾರದ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಕೆ ಝಾ ಹೇಳಿದ್ದಾರೆ.

ಕೊವಿಡ್​ನಿಂದಾಗಿ ಪರಿಸ್ಥಿತಿ ಗಂಭೀರವಾಗುತ್ತಿರುತ್ತಿರುವುದರಿಂದ ನಮ್ಮ ಪಾಲಿಗೆ ಕುಂಭಮೇಳ ಮುಕ್ತಾಯವಾಗುತ್ತಿದೆ. ಶಾಹಿ ಸ್ನಾನ ಮುಗಿದಿದೆ. ನಮ್ಮಲ್ಲಿನ ಹಲವಾರು ಸಾಧುಗಳಿಗೆ ಈಗಾಗಲೇ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ ಎಂದು ನಿರಂಜನಿ ಅಖಾಡದ ಕಾರ್ಯದರ್ಶಿ ರವೀಂದ್ರ ಪುರಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಏಪ್ರಿಲ್ 10ರಿಂದ 15ರವರೆಗಿನ ಅವಧಿಯಲ್ಲಿ ಕುಂಭಮೇಳದಲ್ಲಿ ಭಾಗವಹಿಸಿದ 2,167ಮಂದಿಗೆ ಕೊವಿಡ್ ಸೋಂಕು ತಗುಲಿದೆ ಎಂದು ಅಂಕಿ ಅಂಶಗಳು ಹೇಳಿವೆ. ಏಪ್ರಿಲ್ 27ರಂದು ಕುಂಭಮೇಳದಲ್ಲಿ ಮತ್ತೊಂದು ಶಾಹಿ ಸ್ನಾನ ನಡೆಯಲಿದೆ.

ದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವಾಗಲೇ ಕುಂಭಮೇಳ ನಡೆಯಲು ಅವಕಾಶ ನೀಡಿದ್ದನ್ನು ದೇಶದ ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಕುಂಭಮಳದಿಂದಾಗಿ ಕೊರೊನಾವೈರಸ್ ಸೋಂಕು ಮತ್ತಷ್ಟು ಹರಡಲಿದೆ ಎಂದು ವೈದ್ಯಕೀಯ ತಜ್ಞರು, ವಿಪಕ್ಷ ನಾಯಕರು ಹೇಳಿದ್ದಾರೆ. ಸಾವಿರಾರು ಭಕ್ತರು ಗುಂಪು ಸೇರಿ ಗಂಗಾ ಸ್ನಾನ ಮಾಡಿದ್ದು, ಮಾಸ್ಕ್ ಧರಿಸದೆ ಕುಂಭಮೇಳದಲ್ಲಿ ಭಾಗಿಯಾಗಿದ್ದು ಕೊರೊನಾವೈರಸ್ ವ್ಯಾಪಕವಾಗಿ ಹರಡಲು ಕಾರಣವಾಗಿದೆ.

ಕುಂಭಮೇಳದಲ್ಲಿ ಅಖಾಡಗಳ ನಡುವೆ ಭಿನ್ನಾಭಿಪ್ರಾಯ ಕುಂಭಮೇಳದಲ್ಲಿ ಭಾಗವಹಿಸಿದ್ದ ನಿರಂಜನಿ ಅಖಾಡ, ಆನಂದ್ ಅಖಾಡಗಳು ಮೇಳದಿಂದ ನಿರ್ಗಮಿಸಲು ನಿರ್ಧರಿಸಿವೆ. ಈ ನಿರ್ಧಾರಕ್ಕೆ ನಿರ್ಮೋಹಿ, ನಿರ್ವಾನಿ, ದಿಗಂಬರ ಆಕ್ಷೇಪ ವ್ಯಕ್ತಪಡಿಸಿದೆ. ಹರಿದ್ವಾರದ ಕುಂಭಮೇಳದಿಂದ ತೆರಳಲು 2 ಅಖಾಡ ನಿರ್ಧರಿಸಿದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ಸಿಎಂ ತೀರಥ್ ಸಿಂಗ್ ರಾವತ್ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕುಂಭಮೇಳ ಮುಂದುವರಿಕೆ ಅಥವಾ ಸ್ಥಗಿತ, ಕುಂಭಮೇಳದ ಮುಂದಿನ ಶಾಹಿ ಸ್ನಾನದ ಬಗ್ಗೆ ಚರ್ಚೆ ನಡೆಯಲಿದೆ.

ಕುಂಭಮೇಳದ 3ನೇ ಶಾಹಿ ಸ್ನಾನದಲ್ಲಿ 13 ಲಕ್ಷ ಭಕ್ತರು ಭಾಗಿ ಪೊಲೀಸ್ ಕಂಟ್ರೋಲ್ ರೂಂ ಮಾಹಿತಿ ಪ್ರಕಾರ ಬುಧವಾರ ನಡೆದ ಬೈಸಾಕಿ ಸ್ನಾನದಲ್ಲಿ 13,51,631 ಮಂದಿ ಭಾಗಿಯಾಗಿದ್ದಾರೆ. ಕುಂಭಮೇಳದಲ್ಲಿ ನಡೆಯುವ ಮೂರು ಶಾಹಿ ಸ್ನಾನಗಳ ಪೈಕಿ ಬುಧವಾರ ನಡೆದ ಶಾಹಿ ಸ್ನಾನದಲ್ಲಿ ಭಾಗವಹಿಸಿದವರ ಸಂಖ್ಯೆ ಕಡಿಮೆ ಆಗಿತ್ತು. ಜನರು ಕಡಿಮೆ ಆಗಿರುವುದರಿಂದ ಜನರ ಗುಂಪನ್ನು ಸಂಭಾಳಿಸುವುದು ಕೂಡಾ ಸುಲಭವಾಗಿದೆ ಎಂದು ಪೊಲೀಸ್ ಐಜಿ ಸಂಜಯ ಗುಂಜಯಲ್ ಹೇಳಿದ್ದಾರೆ.

ಉತ್ತರಾಖಂಡ ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಹರಿದ್ವಾರದಲ್ಲಿ ಕುಂಭ ಮೇಳ ನಡೆಯುವ ಪ್ರದೇಶಗಳಲ್ಲಿ 2,167ಮಂದಿಗೆ ಕೊವಿಡ್ ದೃಢಪಟ್ಟಿದೆ. ಮುಖ್ಯ ವೈದ್ಯಕೀಯ ಅಧಿಕಾರಿಯವರ ಪ್ರಕಾರ ಏಪ್ರಿಲ್ 10ರಿಂದ ಆರೋಗ್ಯ ಇಲಾಖೆಯು ಕುಂಭ ಮೇಳದ ಸ್ಥಳದಲ್ಲಿ 2,28,650 ಕೊವಿಡ್ ಪರೀಕ್ಷೆಗಳನ್ನು ಮಾಡಿದೆ. ಇಲ್ಲಿಗೆ ಆಗಮಿಸಿದ ಭಕ್ತರಿಗೆ ಆ್ಯಂಟಿಜೆನ್ , ಆರ್ ಟಿ ಪಿಸಿಆರ್ ಮತ್ತು ಟ್ರೂನಾಟ್ ಪರೀಕ್ಷೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಹರಿದ್ವಾರ, ಪೌರಿ, ಡೆಹ್ರಾಡೂನ್ ಮತ್ತು ತೆಹರಿಯಲ್ಲಿ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಕುಂಭ ಮೇಳ ನಡೆಯುವ ಪ್ರದೇಶಗಳಲ್ಲಿ ಕನಿಷ್ಠ 50,000 ಕೊವಿಡ್ ಪರೀಕ್ಷೆಗಳನ್ನು ನಡೆಸಬೇಕು. ಮೇಳಕ್ಕೆ ಪ್ರವೇಶಿಸಬೇಕಾದರೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ ಎಂದು ಕೇಂದ್ರ ಸರ್ಕಾರ ಮತ್ತು ಉತ್ತರಾಖಂಡ ಹೈಕೋರ್ಟ್ ನಿರ್ದೇಶಿಸಿತ್ತು. ಆದರೆ ಕುಂಭ ಮೇಳದಲ್ಲಿ ಈ ನಿರ್ದೇಶನವನ್ನು ಪಾಲಿಸುವುದು ಕಷ್ಟ ಎಂದಿದ್ದಾರೆ ಝಾ.

ಇದನ್ನೂ ಓದಿ: ಕರ್ನಾಟಕದಿಂದ ಕುಂಭಮೇಳಕ್ಕೆ ಹೋಗಿ ಬಂದವರಿಗೆ ಕೊವಿಡ್ ಟೆಸ್ಟ್ ಕಡ್ಡಾಯ; ಆರೋಗ್ಯ ಸಚಿವ ಡಾ.ಸುಧಾಕರ್

Published On - 5:10 pm, Fri, 16 April 21