ದೆಹಲಿ: ಭಾರತದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿಗೆ ಇಲ್ಲಿನ ಕೇಂದ್ರಸರ್ಕಾರ, ಪ್ರಧಾನಮಂತ್ರಿ ಮೋದಿಯವರೇ ಕಾರಣ ಎಂದು ಆಸ್ಟ್ರೇಲಿಯಾದ ದಿನಪತ್ರಿಕೆಯೊಂದು ವರದಿ ಬರೆದಿದ್ದು, ಅದೀಗ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಇದೊಂದು ದುರುದ್ದೇಶಪೂರಿತ ವರದಿ ಎಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮೀಷನ್ ಕಚೇರಿ ಆರೋಪಿಸಿದೆ.
ಆಸ್ಟ್ರೇಲಿಯನ್ ದಿನಪತ್ರಿಕೆ Modi leads India out of lockdown… and into a viral apocalypse ಎಂಬ ತಲೆಬರಹದಡಿ ಭಾರತದಲ್ಲಿ ಕೊರೊನಾ ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬರ್ಥದ ವರದಿ ಪ್ರಕಟಿಸಿತ್ತು. ರೂಪಾಂತರ ಕೊರೊನಾ ವೈರಸ್ ವಿಚಾರದಲ್ಲಿ ತಜ್ಞರು ನೀಡಿರುವ ಸಲಹೆಯನ್ನು ನಿರ್ಲಕ್ಷಿಸಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾವಿರಾರು ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದು, ಕುಂಭಮೇಳದಂಥ ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ ಭಾರತದ ಸರ್ಕಾರದ ವೈಫಲ್ಯತೆ ತೋರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಲ್ಲದೆ, ಇಲ್ಲಿನ ಆಕ್ಸಿಜನ್, ಲಸಿಕೆ ಅಭಾವದ ಬಗ್ಗೆಯೂ ಬರೆದಿತ್ತು.
ಈ ವರದಿ ಎಲ್ಲೆಡೆ ಪ್ರಚಾರ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮೀಷನ್ ಆಕ್ರೋಶ ವ್ಯಕ್ತಪಡಿಸಿದೆ. ಆಸ್ಟ್ರೇಲಿಯಾದ ಈ ಸುದ್ದಿಪತ್ರಿಕೆಯ ಮುಖ್ಯಸಂಪಾದಕ ಕ್ರಿಸ್ಟೋಪರ್ ಡೋರ್ಗೆ ಪತ್ರ ಬರೆದು, ನಿಮ್ಮ ವರದಿ ಆಧಾರರಹಿತವಾಗಿ, ದುರುದ್ದೇಶಪೂರಿತವಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲ, ಭಾರತದ ಬಗ್ಗೆ ಮಾಡುತ್ತಿರುವ ಅಪಪ್ರಚಾರ ಎಂದೂ ಆರೋಪಿಸಿದೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳು ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟು, ಒಳ್ಳೆಯ ಅಭಿಪ್ರಾಯವನ್ನು ಹೊಂದಿವೆ. ಕಳೆದ ಮಾರ್ಚ್ನಲ್ಲಿ ಮಾಡಲಾಗಿದ್ದ ಲಾಕ್ಡೌನ್ನಿಂದ ಹಿಡಿದು ಇಂದಿನ ಲಸಿಕೆ ಅಭಿಯಾನದವರೆಗಿನ ಕ್ರಮವನ್ನು ಬೇರೆ ರಾಷ್ಟ್ರಗಳು ಹೊಗಳುತ್ತಿವೆ. ಇದನ್ನು ಸಹಿಸಿಕೊಳ್ಳಲಾಗದೆ, ಭಾರತದ ಮೇಲೆ ಉಳಿದವರು ಇಟ್ಟ ನಂಬಿಕೆ, ಮೆಚ್ಚುಗೆಯ ಭಾವನೆಯನ್ನು ದುರ್ಬಲಗೊಳಿಸಲು ಹೀಗೆ ವರದಿ ಮಾಡಿದ್ದೀರಿ ಎಂದು ಹೇಳಿದೆ.
ದೇಶದಲ್ಲಿ ಕೊರೊನಾ ಸಂಕಷ್ಟ
ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸಂಕಷ್ಟ ತಂದೊಡ್ಡಿರುವುದು ಸತ್ಯ. ಈಗಂತೂ ಪ್ರಸರಣದ ವೇಗ ಹೆಚ್ಚಾಗಿದ್ದು, ಇದರಿಂದಾಗಿ ಹಲವು ರೀತಿಯ ಸಂಕಷ್ಟಗಳು ಎದುರಾಗುತ್ತಿವೆ. ಆಕ್ಸಿಜನ್, ಲಸಿಕೆಗಳ ಕೊರತೆ ಎದುರಾಗಿದೆ. ಬೆಡ್ಗಳು ಸಿಗುತ್ತಿಲ್ಲ ಎಂಬ ಗೋಳು ಕೇಳಿಬರುತ್ತಿದೆ. ಅದೂ ಬಿಡಿ, ಸೋಂಕಿನಿಂದ ಜೀವ ಕಳೆದುಕೊಂಡವರ ಅಂತ್ಯಸಂಸ್ಕಾರವೂ ಕೆಲವು ಕಡೆ ದೊಡ್ಡ ತಲೆನೋವಾಗಿಬಿಟ್ಟಿದೆ. ಹೀಗೆಲ್ಲ ಇದ್ದರೂ ಕೇಂದ್ರ ಸರ್ಕಾರ ಭರವಸೆ ಕೊಟ್ಟಿದ್ದು, ಜನರ ಸುರಕ್ಷತೆಯೇ ನಮ್ಮ ಆಧ್ಯತೆ. ಯಾರೂ ಗಾಬರಿಯಾಗುವ ಅಗತ್ಯವಿಲ್ಲ ಎಂದಿದೆ.
Urge @australian to publish the rejoinder to set the record straight on the covid management in India and also refrain from publishing such baseless articles in future. @cgisydney @CGIPerth @cgimelbourne @MEAIndia https://t.co/4Z3Mk6ru3W pic.twitter.com/4bgWYnKDlB
— India in Australia (@HCICanberra) April 26, 2021