ತಿರುಪತಿ: ಆಂಧ್ರಪ್ರದೇಶದ ಕೃಷ್ಣಾಪಟ್ಟಣಂನಲ್ಲಿ ಆನಂದಯ್ಯ ಎಂಬುವರು ಕೊವಿಡ್ 19 ಸೋಂಕಿಗೆ ನೀಡುತ್ತಿದ್ದ ಆಯುರ್ವೇದ ಔಷಧಿಗೆ ತಾತ್ಕಾಲಿಕ ತಡೆನೀಡಲಾಗಿದೆ. ಈಗಾಗಲೇ ಆಯುಷ್ ಇಲಾಖೆಯ ತಜ್ಞರ ತಂಡ ಔಷಧಿ ತಯಾರಿಕೆಯನ್ನು ಪರಿಶೀಲನೆ ನಡೆಸಿದ್ದು, ಈ ಔಷಧಿ ಕೊವಿಡ್ 19 ಸೋಂಕನ್ನು ಕಡಿಮೆ ಮಾಡುತ್ತದೆ, ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತು ಆಗುವವರೆಗೂ ಅದನ್ನು ಕೊವಿಡ್ 19 ಔಷಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.
ಹೀಗಿದ್ದಾಗ್ಯೂ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಬೋರ್ಡ್, ಬೋನಿಗಿ ಆನಂದಯ್ಯ ಅವರ ಔಷಧಿಯನ್ನು ಉತ್ಪಾದಿಸಿ, ವಿತರಿಸುವುದಾಗಿ ಹೇಳಿದೆ. ಇದಕ್ಕೆ ಚಂದ್ರಗಿರಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿಯವರೂ ಸಾಥ್ ನೀಡಿದ್ದಾರೆ. ಬೋನಿಗಿ ಆನಂದಯ್ಯ ಅವರ ಆಯುರ್ವೇದ ಔಷಧಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಅದು ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುತ್ತದೆ. ಹೀಗಾಗಿ ನಾವು ಆ ಔಷಧಿಯನ್ನು ತಯಾರಿಸಿ, ವಿತರಣೆ ಮಾಡುತ್ತೇವೆ ಎಂದು ಟಿಟಿಡಿ ಹೇಳಿಕೊಂಡಿದೆ.
ಹೀಗಾಗಿ ಆನಂದಯ್ಯನವರ ಶಿಷ್ಯಂದಿರು ತಿರುಪತಿಗೆ ಭೇಟಿ ನೀಡಲಿದ್ದಾರೆ. ಚೆವಿರೆಡ್ಡಿ ಭಾಸ್ಕರ್ರೆಡ್ಡಿ ನೇತೃತ್ವದಲ್ಲಿ ಟಿಟಿಯ ಆಯುರ್ವೇದಿಕ್ ಫಾರ್ಮಾಗೆ ಹೋಗಿ ಔಷಧೀಯ ಸಸ್ಯ, ಗಿಡಮೂಲಿಕೆಗಳನ್ನು ಪರಿಶೀಲನೆ ಮಾಡಲಿದ್ದಾರೆ. ಹಾಗೇ, ಟಿಟಿಡಿಯ ಆಯುರ್ವೇದಿಕ್ ಕಾಲೇಜಿನ ಪ್ರಾಧ್ಯಾಪಕರನ್ನೂ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಇನ್ನು ಸರ್ಕಾರದ ಅನುಮತಿ ದೊರೆತರೆ ಟಿಟಿಡಿ ಆಯುರ್ವೇದಿಕ್ ಫಾರ್ಮ್ನಲ್ಲಿ ಔಷಧಿ ತಯಾರಿಕೆ ಶೀಘ್ರವೇ ಶುರುವಾಗಲಿದೆ.
ಇದನ್ನೂ ಓದಿ: ಕ್ರಿಕೆಟ್ ದುನಿಯಾದಲ್ಲಿ ಯಾರಿಂದಲೂ ಮುರಿಯಲಾಗದ 10 ವಿಶಿಷ್ಟ ದಾಖಲೆಗಳಿವು; ಈ ದಾಖಲೆಗಳ ಬಗ್ಗೆ ನಿಮಗೆಷ್ಟು ಗೊತ್ತು?