
ಹೈದರಾಬಾದ್ನಲ್ಲಿ (Hyderabad) ಭಾನುವಾರ ನಾಲ್ಕು ವರ್ಷದ ಬಾಲಕನನ್ನು (Toddler) ಬೀದಿ ನಾಯಿಗಳು (Street Dogs) ಕೊಂದಿವೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ (CCTV ) ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿನ ತಂದೆ ಕಾವಲುಗಾರನಾಗಿ ಕೆಲಸ ಮಾಡುತ್ತಾರೆ. ನಾಯಿಗಳು ಕಚ್ಚಿದ ಏಟಿಗೆ ಬಾಲಕನ ಹೊಟ್ಟೆಗೆ ತೀವ್ರತರ ಗಾಯಗಳಾಗಿದ್ದು, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಗು ಕೊನೆಯುಸಿರೆಳೆದಿದ್ದಾನೆ (Death) . ಈ ಘಟನೆ ವೀಡಿಯೊದಲ್ಲಿ ಸೆರೆಹಿಡಿಯಲಾಗಿದೆ. ಹುಡುಗ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮೂರು ನಾಯಿಗಳು ಓಡಿ ಬಂದು ಅವನ ಮೇಲೆ ದಾಳಿ ಮಾಡಿ ಅವನನ್ನು ಕಚ್ಚಿ ಕೊಂದಿವೆ. ಅದಕ್ಕೂ ಮುನ್ನ, ಶನಿವಾರ ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲೆಯಲ್ಲಿ ಬೀದಿನಾಯಿಗಳು ಕಚ್ಚಿ ಏಳು ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿತ್ತು.
ಕನ್ಹಾ ಎಂಬ ಬಾಲಕ ಬಿಲಾಸ್ಪುರ ಗ್ರಾಮದ ತನ್ನ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ಬೀದಿ ನಾಯಿಗಳು ಆತನ ಮೇಲೆ ದಾಳಿ ನಡೆಸಿದವು ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಸೂರಜ್ ರೈ ತಿಳಿಸಿದ್ದಾರೆ. ಬೀದಿನಾಯಿಗಳು ಕನ್ಹಾಗೆ ಕಚ್ಚುತ್ತಲೇ ಇದ್ದವು ಮತ್ತು ಗ್ರಾಮಸ್ಥರು ಆತನನ್ನು ರಕ್ಷಿಸುವಷ್ಟರಲ್ಲಿ ಬಾಲಕನಿಗೆ ತೀವ್ರ ರಕ್ತಸ್ರಾವವಾಗಿತ್ತು ಎಂದು ಬಾಲಕನ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಗ್ರಾಮಸ್ಥರು ನಾಯಿಗಳನ್ನು ಓಡಿಸಿ, ಕನ್ಹಾನನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಮಗು ಸತ್ತಿರುವುದಾಗಿ ತಿಳಿಸಿದ್ದಾರೆ.
Also Read:
ಜನವರಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಹೈದರಾಬಾದ್ನ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದ ಸ್ವಿಗ್ಗಿ ಡೆಲಿವರಿ ಎಕ್ಸಿಕ್ಯೂಟಿವ್ ಗಾಯಗೊಂಡು ಸಾವನ್ನಪ್ಪಿದರು. 23 ವರ್ಷದ ಯುವಕ ಆರ್ಡರ್ ನೀಡಲು ಬಂಜಾರಾ ಹಿಲ್ಸ್ನ ರಸ್ತೆ ಸಂಖ್ಯೆ 6 ರಲ್ಲಿರುವ ಲುಂಬಿನಿ ರಾಕ್ ಕ್ಯಾಸಲ್ ಅಪಾರ್ಟ್ಮೆಂಟ್ಗೆ ಬಂದು ಬಾಗಿಲು ಬಡಿದಾಗ, ಆ ಗ್ರಾಹಕ ಮನೆಯ ಸಾಕು ನಾಯಿ ಅವನನ್ನು ಹಿಂಬಾಲಿಸಿದೆ ಎಂದು ವರದಿಯಾಗಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದಾಗ ಡೆಲಿವರಿ ಬಾಯ್ ತಲೆಗೆ ತೀವ್ರ ಪೆಟ್ಟಾಗಿತ್ತು. ನಂತರ ಗ್ರಾಹಕರು ಅವರನ್ನು ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (NIMS) ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೂ ಆತ ಬದುಕುಳಿಯಲಿಲ್ಲ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಏಳು ತಿಂಗಳ ಹಸುಳೆಯನ್ನು ಬೀದಿ ನಾಯಿ ಕೊಂದು ಹಾಕಿತ್ತು. ಘಟನೆ ನಡೆದ ನೋಯ್ಡಾದ ಸೆಕ್ಟರ್ 100ರ ಲೋಟಸ್ ಬೊಲೆವಾರ್ಡ್ ಸೊಸೈಟಿಯಲ್ಲಿ ಕೂಲಿ ಕೆಲಸ ಮಾಡುವ ಶಿಶುವಿನ ಪಾಲಕರು ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:51 am, Tue, 21 February 23