ದೆಹಲಿ: ಜಿಯೋ ಟವರ್ ಹಾಳುಗೆಡಹುವ, ತಡೆಯೊಡ್ಡುವ ಕೃತ್ಯ ಎಸಗಿದವರಿಗೆ ಪ್ರತಿಸ್ಪರ್ಧಿ ಟೆಲಿಕಾಂ ಕಂಪೆನಿಗಳು ಕುಮ್ಮಕ್ಕು ನೀಡಿವೆ ಎಂಬ ಜಿಯೋ ಆರೋಪವನ್ನು ಉದ್ದೇಶಿಸಿ ಏರ್ಟೆಲ್ ಟೆಲಿಕಾಂ ವಿಭಾಗಕ್ಕೆ (DoT) ಪತ್ರ ಬರೆದಿದೆ. ಜಿಯೋ ಮಾಡಿರುವ ಆರೋಪ ಆಧಾರರಹಿತ ಎಂದು ಏರ್ಟೆಲ್ ಕಟುವಾಗಿ ಪ್ರತಿಕ್ರಿಯಿಸಿದೆ.
ಏರ್ಟೆಲ್ ವಿರುದ್ಧದ ಜಿಯೋ ಆರೋಪ ಯಾವುದೇ ಸಾಕ್ಷಿ ಹೊಂದಿಲ್ಲ ಎಂದು ಟೆಲಿಕಾಂ ವಿಭಾಗಕ್ಕೆ ಏರ್ಟೆಲ್ ಹೇಳಿದೆ. ಜಿಯೋ ಎದುರಿಸುತ್ತಿರುವ ಯಾವುದೇ ಸಮಸ್ಯೆಗಳೊಂದಿಗೆ ಏರ್ಟೆಲ್ ಸಂಬಂಧ ಹೊಂದಿಲ್ಲ. ಹಾಗಾಗಿ, ದೂರನ್ನು ತಿರಸ್ಕರಿಸಬೇಕು ಎಂದು ಏರ್ಟೆಲ್ ತಿಳಿಸಿದೆ.
ಏರ್ಟೆಲ್, ಟೆಲಿಕಾಂ ಕಾರ್ಯದರ್ಶಿ ಅನ್ಶು ಪ್ರಕಾಶ್ಗೆ ಬರೆದಿರುವ ಪತ್ರದಲ್ಲಿ, ರಿಲಯನ್ಸ್ ಜಿಯೋ, ಡಿಸೆಂಬರ್ 28ರಂದು ಪತ್ರದ ಮೂಲಕ ಮಾಡಿರುವ ಆರೋಪದ ಬಗ್ಗೆ ಅರಿವಿದೆ. ಅಂಥದ್ದೇ ಆರೋಪವನ್ನು ಜಿಯೋ ಡಿಸೆಂಬರ್ ಮೊದಲ ವಾರದಲ್ಲೂ ಮಾಡಿತ್ತು. ಅದಕ್ಕೆ ಏರ್ಟೆಲ್ ಪ್ರತಿಕ್ರಿಯಿಸಿತ್ತು ಎಂದು ವಿವರಿಸಿದೆ.
ಕೇಂದ್ರದ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಜಿಯೋ ಈ ದೂರು ನೀಡಿತ್ತು. ಜಿಯೋ ಆರೋಪಕ್ಕೆ ಏರ್ಟೆಲ್ ಮುಖ್ಯ ನಿಯಂತ್ರಕ ಅಧಿಕಾರಿ ರಾಹುಲ್ ವಾಟ್ಸ್ ಟೆಲಿಕಾಂ ವಿಭಾಗಕ್ಕೆ ಬರೆದ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜಿಯೋ ಸಿಮ್ ತಿರಸ್ಕರಿಸುವ ರೈತರ ಆಂದೋಲನದಲ್ಲಿ ಏರ್ಟೆಲ್ ಪಾತ್ರವಹಿಸಿದೆ ಎಂಬ ಆರೋಪ ಆಧಾರ ರಹಿತವಾಗಿದೆ. ಮಾತ್ರವಲ್ಲ, ಇದು ಅತಿರೇಕದ ಆರೋಪವಾಗಿದೆ ಎಂದು ಹೇಳಿದ್ದಾರೆ.
ಗ್ರಾಹಕರನ್ನು ಜಿಯೋನಿಂದ ಪೋರ್ಟ್ ಮಾಡುವಂತೆ ಏರ್ಟೆಲ್ ಬಲವಂತ ಮಾಡಿದೆ ಎಂದು ಜಿಯೋ ಸಂಸ್ಥೆ ನಂಬಿರುವ ಬಗ್ಗೆ ಏರ್ಟೆಲ್ ಆಶ್ಚರ್ಯ ವ್ಯಕ್ತಪಡಿಸಿದೆ. ಏರ್ಟೆಲ್ ಅಷ್ಟು ಸರ್ವಶಕ್ತವಾಗಿದ್ದರೆ, ಮೂರು ವರ್ಷಗಳ ಹಿಂದೆ ಗ್ರಾಹಕರ ಮೇಲೆ ಜಿಯೋ ಪ್ರಭಾವ ಹೆಚ್ಚುತ್ತಿದ್ದಾಗಲೇ ಏರ್ಟೆಲ್ ಕ್ರಮ ಕೈಗೊಳ್ಳುತ್ತಿತ್ತು ಎಂದು ಸಂಸ್ಥೆ ಹೇಳಿದೆ.
ಹರ್ಯಾಣ ಹಾಗೂ ಪಂಜಾಬ್ ಭಾಗಗಳಲ್ಲಿ ನಡೆದ ಜಿಯೋ ಮೇಲಿನ ಹಾನಿಗೆ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಲಿಮಿಟೆಡ್ ಸಂಸ್ಥೆಯ ಹಂಚಿಕೆದಾರರು, ಚಾನಲ್ ಪಾರ್ಟ್ನರ್ಗಳು ಕಾರಣ ಎಂದು ಜಿಯೋ ಆರೋಪಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಪ್ರತಿಸ್ಪರ್ಧಿ ಕಂಪೆನಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿವೆ ಎಂದು ಜಿಯೋ ತಿಳಿಸಿತ್ತು.
Published On - 1:39 pm, Sun, 3 January 21