
ಶ್ರೀನಗರ, ನವೆಂಬರ್ 18: ಕಳೆದ ವಾರವಷ್ಟೇ ಭದ್ರತಾ ಪಡೆಗಳ ಬಲೆಗೆ ಬಿದ್ದು ಪರಾರಿಯಾಗಿದ್ದ 22 ವರ್ಷದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಲತೀಫ್ ಭಟ್ ಇಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನ ಮಸೀದಿಯೊಂದರಲ್ಲಿ ಅಡಗಿಕೊಂಡಿದ್ದ ವೇಳೆ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ಆತನನ್ನು ಹತ್ಯೆ ಮಾಡುವ ಮುನ್ನ ಭದ್ರತಾ ಅಧಿಕಾರಿಗಳು ಆತನಿಗೆ ವಿಡಿಯೋ ಕರೆ ಮಾಡಿ ಶರಣಾಗುವಂತೆ ಮನವಿ ಮಾಡಿದ್ದರು. ಆದರೆ ಆತ ಶರಣಾಗಲು ನಿರಾಕರಿಸಿದ್ದನು.
ದೀರ್ಘಕಾಲದ ವಿಡಿಯೋ ಕರೆ, ಶರಣಾಗುವಂತೆ ಪದೇ ಪದೇ ಮಾಡಿದ ಮನವಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರೆ ಬದುಕುಳಿಯುವ ಭರವಸೆ ಮೂಲಕ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಕಮಾಂಡರ್ ಲತೀಫ್ ಭಟ್‌ನನ್ನು ಶರಣಾಗುವಂತೆ ಮನವೊಲಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿದವು. ಆದರೆ ಕುಲ್ಗಾಮ್‌ನ ಮಸೀದಿಯೊಂದರ ಒಳಗೆ ಅಡಗಿಕೊಂಡಿದ್ದ ಲತೀಫ್ ಭಟ್ ಶರಣಾಗಲು ನಿರಾಕರಿಸಿದನು. “ನನ್ನೊಂದಿಗೆ ಅಲ್ಲಾನನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ” ಎಂದು ಭದ್ರತಾ ಪಡೆಗಳಿಗೆ ಹೇಳುವ ಮೂಲಕ ಆತ ತನ್ನ ಶರಣಾಗತಿಯ ಕೊನೆಯ ಅವಕಾಶವನ್ನೂ ತಿರಸ್ಕರಿಸಿದನು.
ಕಾಶ್ಮೀರ ಕಣಿವೆಯ ಕೊನೆಯ ಉಗ್ರ:
ಕಳೆದ ವರ್ಷ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ್ದ ಕುಲ್ಗಾಮ್‌ನ ಖ್ರೇವಾನ್ ನಿವಾಸಿ ಲತೀಫ್ ಭಟ್, ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರನಾಗಿದ್ದನು. ನವೆಂಬರ್ 11ರಂದು ಕುಲ್ಗಾಮ್‌ನ ಮೀರ್ ಬಜಾರ್ ಬಳಿಯ ಅಖ್ರಾನ್ ಗ್ರಾಮದಲ್ಲಿ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ದಾಳಿ ಸೇರಿದಂತೆ ಮೂರ್ನಾಲ್ಕು ಭೀಕರ ದಾಳಿಗಳಲ್ಲಿ ಈತ ಭಾಗಿಯಾಗಿದ್ದನು. 2 ದಿನಗಳ ಹಿಂದೆ ಕುಲ್ಗಾಮ್‌ನ ಲಾರೂ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಈತನ ಸಹಚರ ಉಮರ್ ನಾಸಿರ್ ಹತನಾಗಿದ್ದ, ಲತೀಫ್ ಪರಾರಿಯಾಗಿದ್ದನು.
ಇದನ್ನೂ ಓದಿ: ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆ, ಲಷ್ಕರ್ ಕಮಾಂಡರ್ ಲತೀಫ್ ಭಟ್ ಸೇರಿ ಇಬ್ಬರು ಉಗ್ರರ ಹತ್ಯೆ
ಮಸೀದಿಯೊಳಗೆ ಅಡಗಿಕೊಂಡಿದ್ದ ಉಗ್ರನಿಗೆ ವಿಡಿಯೋ ಕರೆ:
ಇಂದು ಮುಂಜಾನೆ ಭದ್ರತಾ ಪಡೆಗಳು ಕುಲ್ಗಾಮ್‌ನಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದಾಗ, ಲತೀಫ್ ಸ್ಥಳೀಯ ಮಸೀದಿಯೊಂದರ ಒಳಗೆ ಪ್ರವೇಶಿಸಿ ಮುಂಜಾನೆ 2.45ರ ಸುಮಾರಿಗೆ ಗುಂಡಿನ ದಾಳಿ ಆರಂಭಿಸಿದನು. ಆತನ ಪ್ರಾಣ ಉಳಿಸುವ ಉದ್ದೇಶದಿಂದ ಕುಲ್ಗಾಮ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನಾಯತ್ ಅಲಿ ಅವರು ಖುದ್ದಾಗಿ ವಿಡಿಯೋ ಕರೆ ಮಾಡಿ ದೀರ್ಘಕಾಲ ಮಾತನಾಡಿದರು. “ನೀನು ಇನ್ನೂ ಚಿಕ್ಕವನು, ನಿನ್ನ ಮುಂದೆ ಇಡೀ ಜೀವನವಿದೆ. ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗು, ನಾವು ನಿನ್ನೊಂದಿಗಿದ್ದೇವೆ” ಎಂದು ಅಧಿಕಾರಿಗಳು ಭರವಸೆ ನೀಡಿದರು.
‘ನನ್ನೊಂದಿಗೆ ಅಲ್ಲಾ ಇದ್ದಾನೆ’ ಎಂದ ಉಗ್ರ:
ಆದರೆ, ಪೊಲೀಸ್ ಅಧಿಕಾರಿಗಳ ಸತತ ಮನವೊಲಿಕೆಯ ಹೊರತಾಗಿಯೂ ಲತೀಫ್ ಶರಣಾಗಲು ಒಪ್ಪಲಿಲ್ಲ. ವಿಡಿಯೋ ಕರೆಯಲ್ಲಿ ಮಾತನಾಡಿದ ಆತ, “ನಾನು ಅಲ್ಲಾನನ್ನು ಭೇಟಿಯಾಗಲು ಹೋಗುತ್ತಿದ್ದೇನೆ, ನನಗೆ ತುಂಬಾ ಸಂತೋಷವಾಗಿದೆ. ನನ್ನೊಂದಿಗೆ ಸರ್ವಶಕ್ತನಾದ ಅಲ್ಲಾ ಮಾತ್ರ ಇದ್ದಾನೆ” ಎಂದು ಹೇಳುವ ಮೂಲಕ ತನ್ನ ಜೀವ ಉಳಿಸಿಕೊಳ್ಳುವ ಕೊನೆಯ ಅವಕಾಶವನ್ನೂ ತಿರಸ್ಕರಿಸಿದನು.
ಇದನ್ನೂ ಓದಿ: ಲಷ್ಕರ್ ಸೇರಿ ಸರಿಯಾಗಿ ಒಂದು ವರ್ಷಕ್ಕೆ ಅಂತ್ಯ, ಕುಲ್ಗಾಮ್ ಎನ್‌ಕೌಂಟರ್‌ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಲತೀಫ್ ಭಟ್ ಹತ್ಯೆ
ಕೊನೆಗೆ, ಬೇರೆ ದಾರಿಯಿಲ್ಲದೆ ಧಾರ್ಮಿಕ ಸ್ಥಳವಾದ ಮಸೀದಿಯ ಪಾವಿತ್ರ್ಯತೆ ಮತ್ತು ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ಉಗ್ರನನ್ನು ಹತ್ತಿಕ್ಕುವುದು ಭದ್ರತಾ ಪಡೆಗಳಿಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ಭದ್ರತಾ ಪಡೆಗಳು ಅತ್ಯಂತ ಸಂಯಮ ವಹಿಸಿ, ಪ್ರಮಾಣಿತ ಕಾರ್ಯಾಚರಣಾ ವಿಧಾನಗಳಿಗೆ ಅನುಗುಣವಾಗಿ ಮಸೀದಿಯೊಳಗೆ ಅಶ್ರುವಾಯು ಪ್ರಯೋಗಿಸಿದವು. ಹೊಗೆ ಮತ್ತು ಅಶ್ರುವಾಯುವಿನ ತೀವ್ರತೆ ತಾಳಲಾರದೆ ಲತೀಫ್ ಮಸೀದಿಯಿಂದ ಹೊರಗೆ ಓಡಿಬಂದನು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದರು. ಇಂದು ಬೆಳಿಗ್ಗೆ 11 ಗಂಟೆಯ ನಂತರ ಆತನ ಮೃತದೇಹ ಹಾಗೂ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ