ಮಲೇಷ್ಯಾ ಎಂಜಿನಿಯರ್ ಸಾವಿನ ಪ್ರಕರಣದ ತನಿಖೆಗೆ ಕೇರಳ ಆದೇಶ: ಜ್ಞಾನೇಶ್ ಕುಮಾರ್‌ಗೆ ಹೊಸ ಸಂಕಷ್ಟ

ಕೇರಳ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಯಾಗಿದ್ದಾಗ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಮಲೇಷ್ಯಾ ಎಂಜಿನಿಯರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ವಿಜಿಲೆನ್ಸ್ ತನಿಖೆಗೆ ಕೇರಳ ಸರ್ಕಾರ ಆದೇಶಿಸಿದೆ. ಮೂಲ ತನಿಖೆಯನ್ನು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ತನಿಖೆ ಆರಂಭಿಸಲಾಗುತ್ತಿದೆ ಎನ್ನಲಾಗಿದೆ.

ಮಲೇಷ್ಯಾ ಎಂಜಿನಿಯರ್ ಸಾವಿನ ಪ್ರಕರಣದ ತನಿಖೆಗೆ ಕೇರಳ ಆದೇಶ: ಜ್ಞಾನೇಶ್ ಕುಮಾರ್‌ಗೆ ಹೊಸ ಸಂಕಷ್ಟ
ಜ್ಞಾನೇಶ್ ಕುಮಾರ್‌
Image Credit source: PTI

Updated on: Oct 04, 2026 | 1:12 PM

ತಿರುವನಂತಪುರಂ, ಅಕ್ಟೋಬರ್​​ 04: ಕೇರಳದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು, ಹಾಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇರಳದ ಲೋಕೋಪಯೋಗಿ ಇಲಾಖೆ (PWD) ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ನಡೆದಿರುವುದಾಗಿ ಆರೋಪಿಸಲಾದ ಅಕ್ರಮಗಳಿಗೆ ಸಂಬಂಧಿಸಿ ವಿಜಿಲೆನ್ಸ್ ತನಿಖೆಗೆ ಆದೇಶಿಸಿದ್ದಾರೆ. ಭ್ರಷ್ಟಾಚಾರದ ಆರೋಪಗಳ ಜೊತೆಗೆ, ಈ ಪ್ರಕರಣವು 2006ರಲ್ಲಿ ಮಲೇಷ್ಯಾದ ಸಿವಿಲ್ ಎಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆಗೂ ಸಂಬಂಧಿಸಿದೆ ಎನ್ನಲಾಗಿದೆ.

ಪ್ರಕರಣ ಏನು?

ಬೀನ್ ಅವರು ಇಂಡೋ-ಮಲೇಷ್ಯಾ ಜಂಟಿ ಉದ್ಯಮ PATI-BELನೊಂದಿಗೆ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯು ಕೇರಳ ಸ್ಟೇಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್ (KSTP) ಅಡಿಯಲ್ಲಿ ತಿರುವನಂತಪುರಂನಿಂದ ಅಂಗಮಾಲಿವರೆಗೆ ಸಂಪರ್ಕಿಸುವ 240 ಕಿ.ಮೀ ಉದ್ದದ ರಾಜ್ಯ ಹೆದ್ದಾರಿ MC ರಸ್ತೆಯ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿತ್ತು. PATI-BELನ ಮುಖ್ಯ ಯೋಜನಾ ವ್ಯವಸ್ಥಾಪಕರಾಗಿದ್ದ ಬೀನ್ ಅವರು ಬರೆದಿಟ್ಟಿದ್ದ ಪತ್ರದಲ್ಲಿ, ಆ ಸಮಯದಲ್ಲಿ ಕೇರಳ PWDಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜ್ಞಾನೇಶ್ ಕುಮಾರ್ ಅವರ ಹೆಸರನ್ನು ಉಲ್ಲೇಖಿಸಲಾಗಿತ್ತು ಎಂದು ಚೆನ್ನಿತ್ತಲ ಹೇಳಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್​ಗೆ ಬಿದ್ದ ನಾವಿಕ; ಪಾಕಿಸ್ತಾನಕ್ಕೆ ಭಾರತೀಯ ಸೇನಾ ರಹಸ್ಯ ರವಾನಿಸುತ್ತಿದ್ದ ಆಂಧ್ರಪ್ರದೇಶ ಮೂಲದ ರಾಜೇಶ್ ಬಂಧನ!

ಮೂಲ ತನಿಖೆಯನ್ನು ಉದ್ದೇಶಪೂರ್ವಕವಾಗಿ ದಿಕ್ಕು ತಪ್ಪಿಸಲಾಗಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ತನಿಖೆ ಆರಂಭಿಸಲಾಗುತ್ತಿದೆ. ಕಾಂಗ್ರೆಸ್ ನಾಯಕ ಮಲಯಂಕೀಝು ವೇಣುಗೋಪಾಲ್ ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗಿದೆ. ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕುಮಾರ್ ವಿರುದ್ಧ ಕಾಂಗ್ರೆಸ್, ಇತರ ಪ್ರತಿಪಕ್ಷಗಳು ಹಾಗೂ ಯುವಜನರ ನೇತೃತ್ವದ ‘ಕಾಕ್ರೋಚ್​​ ಜನತಾ ಪಾರ್ಟಿ’ (CJP) ನಡೆಸುತ್ತಿರುವ ವ್ಯಾಪಕ ಪ್ರತಿಭಟನೆಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರದ ಪ್ರಕಾರ, ಜ್ಞಾನೇಶ್ ಕುಮಾರ್ ಅವರು PWD ಕಾರ್ಯದರ್ಶಿಯಾಗಿದ್ದ ವೇಳೆ ಗುತ್ತಿಗೆದಾರರಿಗೆ ಸಾರ್ವಜನಿಕ ಕಾಮಗಾರಿಗಳನ್ನು ವಹಿಸುವಲ್ಲಿ ಕ್ರಿಮಿನಲ್ ದುರ್ವರ್ತನೆ ಎಸಗಿದ್ದಾರೆ ಎಂಬ ಆರೋಪಗಳೂ ಅವರ ವಿರುದ್ಧ ಕೇಳಿಬಂದಿವೆ. ಈ ಹಿಂದೆ VACB ಈ ಆರೋಪಗಳ ಕುರಿತು ತನಿಖೆ ನಡೆಸಿತ್ತು. ಆದರೆ, ದೂರುದಾರರ ಪ್ರಕಾರ, ಆ ತನಿಖೆಗಳನ್ನು ಏಕಾಏಕಿ ಸ್ಥಗಿತಗೊಳಿಸಲಾಗಿತ್ತು. ಆ ಸಮಯದಲ್ಲಿ ತಮ್ಮ ಪ್ರಭಾವ ಬಳಸಿಕೊಂಡು ಕುಮಾರ್ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ದೂರುದಾರರು, ಅವರ ವಿರುದ್ಧದ ಎಲ್ಲಾ ಆರೋಪಗಳ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:11 pm, Sun, 4 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us