ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲಿ ಭೀಕರ ಅಪಘಾತ; ಟ್ರಕ್​ ಹರಿದು ಮೂವರು ರೈತ ಮಹಿಳೆಯರ ದುರ್ಮರಣ

| Updated By: Lakshmi Hegde

Updated on: Oct 28, 2021 | 9:44 AM

ಇಂದು ಮುಂಜಾನೆ 6.30ರ ದೆಹಲಿ-ಹರಿಯಾಣ ಗಡಿಯ ಝಜ್ಜರ್​ ರಸ್ತೆಯಲ್ಲಿ ಘಟನೆ ನಡೆದಿದೆ.  ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಚಾಲಕ ಪರಾರಿಯಾಗಿದ್ದಾನೆ. ಅವನನ್ನು ಪತ್ತೆ ಮಾಡುವ ಕಾರ್ಯಾಚರಣೆಯನ್ನು ಪೊಲೀಸರು ಶುರು ಮಾಡಿದ್ದಾರೆ.

ರೈತರು ಪ್ರತಿಭಟನೆ ನಡೆಸುತ್ತಿದ್ದ ಜಾಗದಲ್ಲಿ ಭೀಕರ ಅಪಘಾತ; ಟ್ರಕ್​ ಹರಿದು ಮೂವರು ರೈತ ಮಹಿಳೆಯರ ದುರ್ಮರಣ
ಅಪಘಾತಕ್ಕೆ ಕಾರಣವಾದ ಟ್ರಕ್​
Follow us on

ದೆಹಲಿ-ಹರಿಯಾಣ ಹೆದ್ದಾರಿಯ ಬಹದ್ದೂರ್​ಗಡ್​​ ಬಳಿ ಇಂದು ಮುಂಜಾನೆ ಭಯಾನಕ ಅಪಘಾತ ಆಗಿದೆ. ಗಡಿಯಲ್ಲಿ ರೈತರು ಪ್ರತಿಭಟನೆ (Farmers Protest) ನಡೆಸುತ್ತಿದ್ದ ಸ್ಥಳದ ಬಳಿ ಮಹಿಳಾ ರೈತರ ಮೇಲೆ ಟ್ರಕ್​ ಹರಿದು ಮೂವರು ಹಿರಿಯ ರೈತ ಮಹಿಳೆಯರು ಮೃತಪಟ್ಟಿದ್ದಾರೆ. ಇನ್ನೂ ಮೂವರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಭೇಟಿ ಕೊಟ್ಟಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತರಾದ ಮೂವರು ಮಹಿಳೆಯರೂ ಪಂಜಾಬ್​ನ ಮಾನ್ಸಾ ಜಿಲ್ಲೆಯವರು ಎಂದು ಹೇಳಲಾಗಿದೆ.

ಇಲ್ಲಿ ಮಹಿಳೆಯರು ರೊಟೇಶನ್​ ಮೇಲೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದು, ಇಂದು ಮುಂಜಾನೆ ಇವರ ಅವಧಿ ಮುಗಿದಿತ್ತು. ಇವರೆಲ್ಲ ನಿನ್ನೆ ರಾತ್ರಿಯೆಲ್ಲ ಪ್ರತಿಭಟನೆ ನಡೆಸಿ, ಇಂದು ಮನೆಗೆ ಹೋಗಲು ಡಿವೈಡರ್​ ಮೇಲೆ ಕುಳಿತು ರಿಕ್ಷಾಕ್ಕೆ ಕಾಯುತ್ತಿದ್ದರು. ಆದರೆ ಅಷ್ಟರಲ್ಲಿ ಅತ್ಯಂತ ವೇಗವಾಗಿ ಬಂದ ಟ್ರಕ್​ ಡಿವೈಡರ್​​ಗೆ ಡಿಕ್ಕಿ ಹೊಡೆದು ನಂತರ ಮಹಿಳೆಯರಿಗೆ ಡಿಕ್ಕಿಹೊಡೆದಿದೆ. ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದ ನಂತರ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಮಹಿಳೆಯರಿಗೆ ಚಿಕಿತ್ಸೆ ಮುಂದುವರಿದಿದೆ.

ಇಂದು ಮುಂಜಾನೆ 6.30ರ ದೆಹಲಿ-ಹರಿಯಾಣ ಗಡಿಯ ಝಜ್ಜರ್​ ರಸ್ತೆಯಲ್ಲಿ ಘಟನೆ ನಡೆದಿದೆ.  ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಚಾಲಕ ಪರಾರಿಯಾಗಿದ್ದಾನೆ. ಅವನನ್ನು ಪತ್ತೆ ಮಾಡುವ ಕಾರ್ಯಾಚರಣೆಯನ್ನು ಪೊಲೀಸರು ಶುರು ಮಾಡಿದ್ದಾರೆ. ಅಂದಹಾಗೆ ದೆಹಲಿಯ ಗಡಿಭಾಗಗಳಲ್ಲಿ ಕಳೆದ ವರ್ಷ ನವೆಂಬರ್​​ನಿಂದಲೂ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ.  ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳನ್ನು ವಾಪಸ್​ ಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯ ಗಡಿಭಾಗಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಹೋರಾಟ ನಡೆಸುತ್ತಲೇ ಇದ್ದಾರೆ.  ಇದೀಗ ಮೃತಪಟ್ಟ ಮಹಿಳೆಯರೂ ಕೂಡ ರೈತ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದವರೇ ಆಗಿದ್ದರು.

ಉದ್ದೇಶಪೂರ್ವಕ ಹತ್ಯೆ ನಡೆದಿತ್ತು..!
ದೆಹಲಿ ಗಡಿಭಾಗಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಆದರೆ ಈಗೀಗ ಅಲ್ಲಿಂದ ಸಾವಿನ ವರದಿಯೂ ಹೆಚ್ಚುತ್ತಿದೆ. ಇತ್ತೀಚೆಗೆ ಪ್ರತಿಭಟನಾ ನಿರತ ಸಿಖ್​ ಗುಂಪೊಂದು 32 ವರ್ಷದ ಕೃಷಿ ಕಾರ್ಮಿಕನನ್ನು ಭೀಕರವಾಗಿ ಹತ್ಯೆ ಮಾಡಿತ್ತು. ಆತನ ಎಡಗೈ ಕತ್ತರಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯ ಸಮೀಪ ಒಂದು ಲೋಹದ ಬ್ಯಾರಿಕೇಡ್​​ಗೆ ಅವನ ಮೃತದೇಹವನ್ನು ನೇತುಹಾಕಲಾಗಿತ್ತು. ಈ ವ್ಯಕ್ತಿ ಸಿಖ್​​ರ ಪವಿತ್ರ ಗ್ರಂಥ  ಗುರು ಗ್ರಂಥ ಸಾಹೀಬ್​​ನ್ನು ಅಪವಿತ್ರಗೊಳಿಸಿದ್ದಕ್ಕಾಗಿ ಅವನನ್ನು ಕೊಲ್ಲಲಾಗಿದೆ ಎಂದು ಸಿಖ್​​ ಗುಂಪು ಹೇಳಿಕೊಂಡಿತ್ತು. ಈ ಹತ್ಯೆ ಉದ್ದೇಶಪೂರ್ವಕವಾಗಿಯೇ ನಡೆದಿತ್ತು ಮತ್ತು ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದೆ. ಅದರ ಬೆನ್ನಲ್ಲೇ ಈಗ ಟ್ರಕ್​ ಹರಿದು ಮೂವರು ಮಹಿಳೆಯರು ಮೃತಪಟ್ಟಿದ್ದಾರೆ. ಇದು ಕೂಡ ಆಕಸ್ಮಿಕವೋ, ಉದ್ದೇಶಪೂರ್ವಕವೋ ಎಂಬ ಅನುಮಾನ ಸಹಜವಾಗಿಯೇ ಮೂಡುತ್ತದೆ.

ಇದನ್ನೂ ಓದಿ: ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣವರ್ ಮತ್ತೊಂದು ಸಾಹಸ, ಡ್ರಗ್ಸ್ ವಿರುದ್ಧ ಅಭಿಯಾನಕ್ಕೆ ಸೈಕಲ್ ಏರಿ ಕಾಶ್ಮೀರ ಟು ಕನ್ಯಾಕುಮಾರಿ ಪ್ರಯಾಣ

ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಇಬ್ಬರು ಆರೋಪಿಗಳು ಅರೆಸ್ಟ್!

Published On - 9:25 am, Thu, 28 October 21