
ಬೀಜಿಂಗ್, ನವೆಂಬರ್ 19: ಚೀನಾದ ಶೆನ್‌ಜೆನ್‌ನಲ್ಲಿ ನಡೆಯುತ್ತಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಐತಿಹಾಸಿಕ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಿದರು. ಉಕ್ರೇನ್ ಸಂಘರ್ಷ, ಇರಾನ್ ಬಿಕ್ಕಟ್ಟು, ಅಣ್ವಸ್ತ್ರ ನಿಯಂತ್ರಣ, ಇಂಧನ ಪೂರೈಕೆ ಮತ್ತು ವಿಶ್ವಸಂಸ್ಥೆಯ ಸುಧಾರಣೆಗಳ ಕುರಿತು ಮೂರು ರಾಷ್ಟ್ರಗಳ ನಾಯಕರು ಚರ್ಚೆ ನಡೆಸಿರುವುದು ತಿಳಿದುಬಂದಿದೆ. ಈ ಭೇಟಿ ಬಳಿಕ ಟ್ರಂಪ್ ಅವರು ಚೀನಾ ತೊರೆದು ತಮ್ಮ ದೇಶಕ್ಕೆ ಮರಳಿದ್ದಾರೆ. ಈ ನಡುವೆ ಟ್ರಂಪ್ ಅವರು ಭಾರತದ ವಿರುದ್ಧ ತಳೆದ ನಿಲುವು ಮತ್ತು ಈಗಿನ ಬೆಳವಣಿಗೆಯು ಅವರ ವಿರೋಧಾಭಾಸ ಧೋರಣೆಯನ್ನು ತೋರಿಸುತ್ತದೆ.
ಕಳೆದ ವರ್ಷ (2025) ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ವೇಳೆ ಭಾರತ ಮತ್ತು ರಷ್ಯಾ ನಾಯಕರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಕಾಣಿಸಿಕೊಂಡಿದ್ದಾಗ ಟ್ರಂಪ್ ತಗಾದೆ ಎತ್ತಿದ್ದರು. ಭಾರತ ಮತ್ತು ರಷ್ಯಾ ಚೀನಾದ ಪ್ರಭಾವಕ್ಕೆ ಸಿಲುಕಿವೆ (“lost to China”) ಎಂದು ಅಮೆರಿಕ ಅಧ್ಯಕ್ಷ ಅವರು ತೀಕ್ಷ್ಣವಾಗಿ ಟೀಕಿಸಿದ್ದರು. ಆದರೆ, ಇದೀಗ ಸ್ವತಃ ಟ್ರಂಪ್ ಅವರೇ ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಅವರೊಂದಿಗೆ ಚೀನಾದಲ್ಲಿ ವೇದಿಕೆ ಹಂಚಿಕೊಂಡು, ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ಮಾತುಕತೆಗಳಲ್ಲಿ ತೊಡಗಿರುವುದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಗಮನ ಸೆಳೆದಿದೆ.
ಅಮೆರಿಕದ ರಾಜಕೀಯ ವಿಶ್ಲೇಷಕ ಮತ್ತು ದಕ್ಷಿಣ ಏಷ್ಯಾ ರಾಜಕೀಯ ವಿಚಾರಗಳ ಪರಿಣಿತರೆನಿಸಿರುವ ಮೈಕೇಲ್ ಕುಜೆಲ್ಮನ್ ಅವರು ಟ್ರಂಪ್ರ ರಾಜಕೀಯ ವಿರೋಧಾಭಾಸದ ಸಂಗತಿಯನ್ನು ಎತ್ತಿ ತೋರಿಸಿ ಕುಟುಕಿದ್ದಾರೆ.
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಟ್ರಂಪ್, ಷಿ ಜಿನ್‌ಪಿಂಗ್, ಪುಟಿನ್: ಜಾಗತಿಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
‘2025ರಲ್ಲಿ ಮೋದಿ, ಷಿ ಮತ್ತು ಪುಟಿನ್ ಚೀನಾದಲ್ಲಿ ಸಭೆ ಸೇರಿದ್ದಾಗ ಟ್ರಂಪ್ ಟೀಕಿಸಿದ್ದರು. ಗುರುವಾರ ಷಿ ಮತ್ತು ಪುಟಿನ್ ಅವರನ್ನು ಚೀನಾದಲ್ಲಿ ಖುದ್ದಾಗಿ ಭೇಟಿಯಾಗುತ್ತಿದ್ದಾರೆ. ಈ ಸಭೆಯು ಭಾರತಕ್ಕೆ ಶಂಕೆ ಮೂಡಿಸುವಂಥದ್ದು’ ಎಂದು ಮೈಕೇಲ್ ಕುಗೆಲ್ಮನ್ ಎಕ್ಸ್ ಪೋಸ್ಟ್ವೊಂದರಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಪ್ ಕಳ್ಳಸಾಗಣೆ ವಿವಾದದಲ್ಲಿ ಎನ್‌ವಿಡಿಯಾದ ಮಾಜಿ ಉನ್ನತ ಅಧಿಕಾರಿ ಜಯ್ ಪುರಿ ಪತ್ನಿ ಹೆಸರು
ಕೆಲ ವಿಶ್ಲೇಷಣೆಗಳ ಪ್ರಕಾರ, ಅಮೆರಿಕ, ಚೀನಾ ಮತ್ತು ರಷ್ಯಾ ನಾಯಕರ ಈ ಭೇಟಿಯಿಂದ ಯಾವ ಮಹತ್ತರ ಫಲವೂ ಬರುವುದಿಲ್ಲ. ಇದೆಲ್ಲಾ ಸುಮ್ಮನೆ ತೋರಿಕೆಗೆ ಎಂಬಂತೆ ಕಾಣುತ್ತದೆ. 90 ನಿಮಿಷಗಳ ಕಾಲ ನಡೆದ ಈ ಮಾತುಕತೆಯಿಂದ ಏನು ಪರಿಣಾಮ ಆಗಬಹುದು ಎನ್ನುವ ಸುಳಿವು ಮುಂದಿನ ದಿನಗಳಲ್ಲಿ ಸಿಗಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ