
ಅಹಮದಾಬಾದ್, ಜೂನ್ 17: ಗುಜರಾತ್ನ ಏರ್ ಇಂಡಿಯಾ(Air India) ಅಪಘಾತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಘೋಷಣೆ ಮಾಡುವ ಮೂಲಕ ಭಾರತ ಮೂಲದ ಯುಎಇಯಲ್ಲಿರುವ ವೈದ್ಯ ಶಂಶೀರ್ ಉದಾರತೆ ಮೆರೆದಿದ್ದಾರೆ. ಗುಜರಾತ್ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 270 ಮಂದಿ ಮೃತಪಟ್ಟಿದ್ದರು. ವಿಮಾನವು ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಅಪ್ಪಳಿಸಿದ ಪರಿಣಾಮ 30ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.
ಅದರಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರೂ ಇದ್ದರು. ಹಲವು ಮಂದಿ ಗಾಯಗೊಂಡಿದ್ದಾರೆ. ಕೇವಲ ಮೃತರ ಕುಟುಂಬಕ್ಕೆ ಮಾತ್ರವಲ್ಲ ಗಾಯಾಳುಗಳಿಗೂ ಸಹಾಯ ಮಾಡುವುದಾಗಿ ಘೋಷಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಐದು ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ತಲಾ 20 ಲಕ್ಷ ರೂ.ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಕ್ಷಣದ ನೆರವು ಸಿಗುವಂತೆ ನೋಡಿಕೊಳ್ಳಲು ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ವೈದ್ಯರ ಸಂಘದ ಸಮನ್ವಯದ ಸಹಾಯದಿಂದ ಆರ್ಥಿಕ ಸಹಾಯವನ್ನು ವಿತರಿಸಲಾಗುವುದು ಎಂದು ಶಂಶೀರ್ ಅವರ ಹೇಳಿಕೆ ತಿಳಿಸಿದೆ.
ಅಬುಧಾಬಿಯಿಂದ ಪರಿಹಾರವನ್ನು ಘೋಷಿಸಿದ ಬುರ್ಜೀಲ್ ಹೋಲ್ಡಿಂಗ್ಸ್‌ನ ಸಂಸ್ಥಾಪಕ ಮತ್ತು ವಿಪಿಎಸ್ ಹೆಲ್ತ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಶೀರ್, ಅಪಘಾತದ ನಂತರದ ಪರಿಣಾಮಗಳನ್ನು ನೋಡಿ ತೀವ್ರ ದುಃಖಿತನಾಗಿದ್ದೇನೆ ಎಂದು ಹೇಳಿದರು.
ಮತ್ತಷ್ಟು ಓದಿ: ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತ, ಕೊನೆಗೂ ಎರಡನೇ ಬ್ಲ್ಯಾಕ್ಬಾಕ್ಸ್ ಪತ್ತೆ
ಅಹಮದಾಬಾದ್‌ನ ಕಾಲೇಜಿನ ಅತುಲ್ಯಂ ಹಾಸ್ಟೆಲ್ ಮೇಲೆ ವಿಮಾನ ಅಪಘಾತಕ್ಕೀಡಾಯಿತು. ಈ ವಿಮಾನ ಅಪಘಾತಕ್ಕೀಡಾದಾಗ ವೈದ್ಯಕೀಯ ಕಾಲೇಜಿನಲ್ಲಿ ಊಟದ ಸಮಯವಾಗಿತ್ತು. ವಿಮಾನದ ಒಂದು ಭಾಗ ಹಾಸ್ಟೆಲ್ ಮೇಲೆ ಬಿದ್ದಾಗ ಇಡೀ ಪ್ರದೇಶವು ಅವಶೇಷಗಳಾಗಿ ಮಾರ್ಪಟ್ಟಿತು.
ಶಂಶೀರ್ 2010ರಲ್ಲಿ ಮಂಗಳೂರು ವಿಮಾನ ಅಪಘಾತ ಸಂಭವಿಸಿದಾಗ ಕೂಡ ಸಾಕಷ್ಟು ಮಂದಿಗೆ ಆರ್ಥಿಕ ನೆರವು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿದ್ದರು.
ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI 171, ಮಧ್ಯಾಹ್ನ 1. 40 ರ ಸುಮಾರಿಗೆ ಟೇಕ್ ಆಫ್ ಆದ ಕೆಲವು ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಯಿತು. ವಿಮಾನ ನಿಲ್ದಾಣದ ಬಳಿ ಇರುವ ಬಿಜೆ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ವಿಮಾನ ಡಿಕ್ಕಿ ಹೊಡೆದಿದೆ.ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಇಲ್ಲಿಯವರೆಗೆ 270 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ವಿಮಾನದಲ್ಲಿ 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳು ಸೇರಿದಂತೆ ಒಟ್ಟು 242 ಜನರಿದ್ದರು. ಒಬ್ಬ ಪ್ರಯಾಣಿಕನನ್ನು ಹೊರತುಪಡಿಸಿ ವಿಮಾನದಲ್ಲಿದ್ದ ಎಲ್ಲಾ ಜನರು ಸಾವನ್ನಪ್ಪಿದ್ದಾರೆ. ಕೆಲವು ಕಾಲೇಜು ವಿದ್ಯಾರ್ಥಿಗಳು ಮತ್ತು ವೈದ್ಯರು ಸಹ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಅಹಮದಾಬಾದ್ ವಿಮಾನ ಅಪಘಾತ ಪ್ರಕರಣದ ಕುರಿತು ರಚಿಸಲಾದ ಉನ್ನತ ಮಟ್ಟದ ಸಮಿತಿಯ ಮೊದಲ ಸಭೆ ಸೋಮವಾರ ನಡೆಯಿತು. ಸಭೆಯಲ್ಲಿ ಗೃಹ ಸಚಿವಾಲಯದ ಗೃಹ ಕಾರ್ಯದರ್ಶಿ, ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ, ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ/ಜಂಟಿ ಕಾರ್ಯದರ್ಶಿ, ಗುಜರಾತ್ ಸರ್ಕಾರದ ರಾಜ್ಯ ಗೃಹ ಇಲಾಖೆಯ ಪ್ರತಿನಿಧಿಗಳು, ಗುಜರಾತ್ ಸರ್ಕಾರದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಹಮದಾಬಾದ್ ಪೊಲೀಸ್ ಆಯುಕ್ತರು, ಭಾರತೀಯ ವಾಯುಪಡೆಯ ತಪಾಸಣೆ ಮತ್ತು ಭದ್ರತಾ ಇಲಾಖೆಯ ಮಹಾನಿರ್ದೇಶಕರು, ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದ ಮಹಾನಿರ್ದೇಶಕರು, ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮಹಾನಿರ್ದೇಶಕರು, ಗುಪ್ತಚರ ಬ್ಯೂರೋದ ವಿಶೇಷ ನಿರ್ದೇಶಕರು ಮತ್ತು ವಿಧಿವಿಜ್ಞಾನ ವಿಜ್ಞಾನ ಸೇವೆಗಳ ನಿರ್ದೇಶನಾಲಯದ ನಿರ್ದೇಶಕರು ಭಾಗವಹಿಸಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Tue, 17 June 25