ಮುಂಬೈ: ಸೈದ್ಧಾಂತಿಕ ವಿರೋಧಾಭಾಸಗಳು ಏನೇ ಇರ್ಲಿ. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕು ಅನ್ನೋ ಒನ್ಲೈನ್ ಅಜೆಂಡಾ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನ ಒಂದು ಮಾಡಿದೆ. ಇದೇ ಖುಷಿಯಲ್ಲಿ ಮಹಾ ಮೈತ್ರಿಕೂಟ ರಚಿಸಿಕೊಂಡಿರೋ ಮೂರು ಪಕ್ಷಗಳು ಉದ್ಧವ್ ಠಾಕ್ರೆಯನ್ನೇ ನಾಯಕನಾಗಿ ಆಯ್ಕೆ ಮಾಡಿವೆ. ಇಂಥಾ ಉದ್ಧವ್ ಠಾಕ್ರೆ ಇಂದು ಮಹಾರಾಷ್ಟ್ರ ಸಿಎಂ ಆಗಿ ಪದಗ್ರಹಣ ಮಾಡಲಿದ್ದಾರೆ.
ಅಂದ್ಹಾಗೆ ಶಿವಸೇನೆಯ ಕುಡಿ ಮಹಾರಾಷ್ಟ್ರವನ್ನ ಆಳಬೇಕು ಅನ್ನೋದು ಪಕ್ಷದ ಸಂಸ್ಥಾಪಕ ಬಾಳಾ ಠಾಕ್ರೆ ಕನಸಾಗಿತ್ತು. ಆ ಕನಸೀಗ ಅವರ ಅಗಲಿಕೆಯ ನಂತ್ರ ಈಡೇರುತ್ತಿದೆ. ಸ್ವತಃ ಬಾಳಾ ಠಾಕ್ರೆಯ ಪುತ್ರನೇ ಮಹಾರಾಷ್ಟ್ರ ಸಿಂಹಾಸನವನ್ನ ಅಲಂಕರಿಸುತ್ತಿದ್ದಾರೆ.
ಸಂಜೆ 6.40ಕ್ಕೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಉದ್ಧವ್ ಠಾಕ್ರೆ ಸಿಎಂ ಆಗಿ ಪದಗ್ರಹಣ ಮಾಡ್ತಿದ್ದಾರೆ.. ಉದ್ಧವ್ ಜೊತೆಗೆ ಕೆಲ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಪ್ರಮಾಣವಚನ ಬೋಧಿಸಲಿದ್ದಾರೆ. ಈ ಹಿನ್ನೆಲೆ ಶಿವಾಜಿ ಪಾರ್ಕ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ.
‘ಶಿವಾಜಿ’ ಪಾರ್ಕ್ ಜೊತೆಗಿನ ಲಿಂಕ್:
1966ರಲ್ಲಿ ಶಿವಸೇನೆಯ ಮೊದಲ ಸಾರ್ವಜನಿಕ ಱಲಿಯನ್ನ ಉದ್ದೇಶಿಸಿ ಬಾಳಾ ಠಾಕ್ರೆ ಭಾಷಣ ಮಾಡಿದ್ದು ಮುಂಬೈನ ಮಧ್ಯಬಾಗದಲ್ಲಿರೋ ಇದೇ ಶಿವಾಜಿ ಪಾರ್ಕ್ನಲ್ಲಿ. ಬಳಿಕ ಪ್ರತಿವರ್ಷ ದಸರಾ ಸಮಯದಲ್ಲಿ ನಡೀತಿದ್ದ ಕಾರ್ಯಕ್ರಮದಲ್ಲಿ ಬಾಳಾ ಠಾಕ್ರೆ ಮಾತನಾಡುತ್ತಿದ್ರು. 2012ರಲ್ಲಿ ಬಾಳಾ ಠಾಕ್ರೆ ಸಾವಿನ ನಂತರ ಅವರ ಅಂತ್ಯ ಸಂಸ್ಕಾರ ನಡೆದಿದ್ದು ಕೂಡ ಇದೇ ಪಾರ್ಕ್ನಲ್ಲಿ. ಅಲ್ಲದೆ ಪಾರ್ಕ್ಗೆ ಛತ್ರಪತಿ ಶಿವಾಜಿ ಮಹಾರಾಜರ ಹೆಸರಿಟ್ಟಿರೋದ್ರಿಂದ ಈ ಪಾರ್ಕ್ ಜೊತೆ ಶಿವಸೇನೆಗೆ ಭಾವನಾತ್ಮಕ ಸಂಬಂಧ ಇದೆ.
ಪ್ರಧಾನಿ ಮೋದಿ, ಸೋನಿಯಾ ಗಾಂಧಿಗೂ ಆಹ್ವಾನ:
ಇನ್ನು ಪ್ರಮಾಣವಚನ ಕಾರ್ಯಕ್ರಮಕ್ಕೆ ಘಟಾನುಘಟಿ ನಾಯಕರನ್ನೇ ಆಹ್ವಾನಿಸಲಾಗಿದೆ. ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಉದ್ಧವ್ ಠಾಕ್ರೆ ಕಾರ್ಯಕ್ರಮಕ್ಕೆ ಬರುವಂತೆ ಕೇಳಿಕೊಂಡಿದ್ದಾರೆ. ತಡರಾತ್ರಿ ಸೋನಿಯಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿವಾಸಕ್ಕೆ ಭೇಟಿ ನೀಡಿದ ಆದಿತ್ಯ ಠಾಕ್ರೆ ಕಾಂಗ್ರೆಸ್ ವರಿಷ್ಠರಿಗೆ ಆಹ್ವಾನ ನೀಡಿದ್ದಾರೆ. ಇದ್ರ ಜೊತೆಗೆ ಬಹುತೇಕ ಎಲ್ಲಾ ರಾಜ್ಯಗಳ ಸಿಎಂಗಳನ್ನ ಕೂಡ ಆಹ್ವಾನಿಸಲಾಗಿದೆ.
ಎನ್ಸಿಪಿಗೆ ಡಿಸಿಎಂ ಪಟ್ಟ.. ಕಾಂಗ್ರೆಸ್ಗೆ ಸ್ಪೀಕರ್ ಸ್ಥಾನ:
ಮೈತ್ರಿಕೂಟದಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರೋ ಎನ್ಸಿಪಿಗೆ ಮಾತ್ರ ಡಿಸಿಎಂ ಸ್ಥಾನ ನೀಡಲು ನಿನ್ನೆ ನಡೆದ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ. ಎನ್ಸಿಪಿಗೆ ಡಿಸಿಎಂ ಸ್ಥಾನ ಒಲಿದರೂ ಯಾರು ಡಿಸಿಎಂ ಆಗ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.