
ನವದೆಹಲಿ, ಆಗಸ್ಟ್ 20: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಪ್ರತಿಷ್ಠಿತ ಯುಜಿಸಿ-ನೆಟ್ (UGC-NET) ಪರೀಕ್ಷೆಯ ಪ್ರಶ್ನೆಪತ್ರಿಕೆ(Question Papers)ಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಅನುವಾದಿಸುವಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಜಾಗರೂಕವಾಗಿ ಬಳಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಾಕಷ್ಟು ಮಾನವ ಪರಿಶೀಲನೆ ನಡೆಸದೆ ಪತ್ರಿಕೆ ಸಿದ್ಧಪಡಿಸಿದ ಪರಿಣಾಮ ಪ್ರಶ್ನೆಗಳಲ್ಲಿ ಹಾಸ್ಯಾಸ್ಪದ ತಪ್ಪುಗಳು, ವಿಚಿತ್ರ ಅನುವಾದಗಳು ಹಾಗೂ ಹಳೆಯ ಪ್ರಶ್ನೆಗಳ ಮರುಕಳಿಸುವಿಕೆ ಕಂಡುಬಂದಿದ್ದು, ವ್ಯಾಪಕ ವಿವಾದದ ನಂತರ ಎನ್‌ಟಿಎ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳನ್ನು ರದ್ದುಗೊಳಿಸಿ ಮರುಪರೀಕ್ಷೆಗೆ ಆದೇಶಿಸಿದೆ.
ಸಮಾಜಶಾಸ್ತ್ರಜ್ಞರ ಹೆಸರುಗಳು ತೀರಾ ತಪ್ಪಾಗಿ ಮುದ್ರಣಗೊಂಡಿದ್ದವು. ‘ಜಾರ್ಜ್ ರಿಟ್ಜರ್’ ಹೆಸರನ್ನು ಪುಟ್ಜರ್, ‘ಟಾಲ್ಕಾಟ್ ಪಾರ್ಸನ್ಸ್’ ಹೆಸರನ್ನು “ಪಾರ್ಸೌ” ಹಾಗೂ ಪ್ರಸಿದ್ಧ ಭಾರತೀಯ ಸಮಾಜಶಾಸ್ತ್ರಜ್ಞ ‘ಜಿ.ಎಸ್. ಘುರ್ಯೆ’ ಹೆಸರನ್ನು ಘುನ್ಯೆ ಎಂದು ತಪ್ಪಾಗಿ ಅನುವಾದಿಸಿ ಮುದ್ರಿಸಲಾಗಿತ್ತು. ಇಂಗ್ಲಿಷ್ ಪತ್ರಿಕೆಯ ಒಟ್ಟು 150 ಪ್ರಶ್ನೆಗಳಲ್ಲಿ ಬರೋಬ್ಬರಿ 67 ಪ್ರಶ್ನೆಗಳು ಹಿಂದಿನ ವರ್ಷಗಳ ಪತ್ರಿಕೆಗಳಿಂದ ನೇರವಾಗಿ ಪುನರಾವರ್ತನೆಯಾಗಿದ್ದವು.
ವಾಣಿಜ್ಯ ಪತ್ರಿಕೆಯಲ್ಲಿ ಪುನರಾವರ್ತನೆ: ತೆರಿಗೆ, ಬ್ರೇಕ್-ಈವನ್ ಅನಾಲಿಸಿಸ್ ಹಾಗೂ ಬಂಡವಾಳ ರಚನೆ ಕುರಿತ ಪ್ರಶ್ನೆಗಳು ಪದೇ ಪದೇ ಮರುಕಳಿಸಿದ್ದವು.ನೀಟ್-ಯುಜಿ (NEET-UG) ಪತ್ರಿಕೆಗಳ ಪ್ರಾದೇಶಿಕ ಭಾಷಾ ಅನುವಾದಕ್ಕೂ ಇದೇ ರೀತಿಯ ಎಐ ಟೂಲ್‌ಗಳನ್ನು ಬಳಸಲಾಗಿತ್ತು ಎಂದು ಮಾಜಿ ವಿಷಯ ತಜ್ಞರು ಆರೋಪಿಸಿದ್ದಾರೆ.
ಮತ್ತಷ್ಟು ಓದಿ:ಜಾರ್ಖಂಡ್‌ನಲ್ಲಿ ಪರೀಕ್ಷಾ ಹಗರಣಕ್ಕೆ ಬ್ರೇಕ್: 39 ನೇಮಕಾತಿ ಪರೀಕ್ಷೆಗಳು ರದ್ದು, 6 ಪರೀಕ್ಷೆಗಳು ಮುಂದೂಡಿಕೆ
ಪ್ರಶ್ನೆಪತ್ರಿಕೆಗಳನ್ನು ತಜ್ಞರ ಬದಲಿಗೆ ತಾತ್ಕಾಲಿಕವಾಗಿ ಎಐ ಮೂಲಕ ಜೋಡಿಸಲಾಗಿದ್ದರಿಂದ ಅಧಿಕಾರಿಗಳ ಬಳಿಯೇ ಸರಿಯಾದ ಉತ್ತರಗಳ ಕೀಲಿ (Answer Keys) ಇರಲಿಲ್ಲ ಎಂದು ಶಿಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ. ಜೆನೆರೇಟಿವ್ ಎಐ ಬಳಕೆಯ ಆರೋಪವನ್ನು ಎನ್‌ಟಿಎ ಮಹಾನಿರ್ದೇಶಕ ಅಭಿಷೇಕ್ ಸಿಂಗ್ ನಿರಾಕರಿಸಿದ್ದು, ಪತ್ರಿಕೆಗಳ ಪರಿಶೀಲನೆಗೆ ಮಾನವ ಸಂಪನ್ಮೂಲ ಬಳಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಇಷ್ಟೊಂದು ದೋಷಗಳು ಹೇಗೆ ತಪ್ಪಿಸಿಕೊಂಡವು ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ.
ಜುಲೈ ಅಂತ್ಯದಲ್ಲೇ ದೋಷಗಳು ಪತ್ತೆಯಾಗಿದ್ದರೂ, 84 ವಿಷಯಗಳ ಕೀಲಿಗಳನ್ನು ಬಿಡುಗಡೆ ಮಾಡುವವರೆಗೆ ಸುಮಾರು 6 ವಾರಗಳ ಕಾಲ ರದ್ದತಿ ಆದೇಶವನ್ನು ವಿಳಂಬ ಮಾಡಿದ್ದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದೇಶದ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆ (Assistant Professor) ಹಾಗೂ ಕಿರಿಯ ಸಂಶೋಧನಾ ಫೆಲೋಶಿಪ್ (JRF) ಅರ್ಹತೆಯನ್ನು ನಿರ್ಧರಿಸುವ ಇಂತಹ ಉನ್ನತ ಮಟ್ಟದ ಪರೀಕ್ಷೆಯಲ್ಲೇ ಈ ರೀತಿಯ ಬೇಜವಾಬ್ದಾರಿ ಎದ್ದುಕಂಡಿರುವುದು ರಾಷ್ಟ್ರೀಯ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.
ವ್ಯವಸ್ಥಿತ ಆಡಿಟ್‌ಗೆ ಆಗ್ರಹ: ಪರೀಕ್ಷಾ ಪತ್ರಿಕೆಗಳನ್ನು ಸಿದ್ಧಪಡಿಸಲು ಎಐ ಅಳವಡಿಕೆಗೆ ಅನುಮತಿ ನೀಡಿದವರು ಯಾರು ಮತ್ತು ಪರೀಕ್ಷಾ ಮಂಡಳಿಯಲ್ಲಿದ್ದ ವಿಷಯ ತಜ್ಞರ ಪಾತ್ರವೇನು ಎಂಬುದರ ಬಗ್ಗೆ ಉನ್ನತ ಮಟ್ಟದ ಶೈಕ್ಷಣಿಕ ಆಡಿಟ್ ನಡೆಸಬೇಕೆಂದು ಜೆಎನ್‌ಯು ಸೇರಿದಂತೆ ಹಲವು ವಿವಿ ಪ್ರಾಧ್ಯಾಪಕರು ಒತ್ತಾಯಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ