Farm Laws Repeal ಕೃಷಿ ಕಾನೂನುಗಳ ರದ್ದತಿಗೆ ಇಂದು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ

| Updated By: ರಶ್ಮಿ ಕಲ್ಲಕಟ್ಟ

Updated on: Nov 24, 2021 | 11:36 AM

ನವೆಂಬರ್ 29ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರವು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದರು.

Farm Laws Repeal ಕೃಷಿ ಕಾನೂನುಗಳ ರದ್ದತಿಗೆ ಇಂದು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡುವ ಸಾಧ್ಯತೆ
ನರೇಂದ್ರ ಮೋದಿ
Follow us on

ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು(farm laws) ಹಿಂಪಡೆಯಲು ಕೇಂದ್ರ ಸಚಿವ ಸಂಪುಟ ಬುಧವಾರ ತನ್ನ ಒಪ್ಪಿಗೆಯನ್ನು ನೀಡುವ ಸಾಧ್ಯತೆಯಿದೆ. ನವೆಂಬರ್ 19 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi )ಅವರು ಸರ್ಕಾರ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದರು.ಒಂದು ವರ್ಷಕ್ಕೂ ಹೆಚ್ಚು ಕಾಲ ಹಲವಾರು ರಾಜ್ಯಗಳಲ್ಲಿ ರೈತರು ಪ್ರತಿಭಟನೆ ನಡೆಸಿದ್ದು ಕೃಷಿ ಕಾನೂನನ್ನು ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೂರು ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರವು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಕೃಷಿ ಕಾನೂನು ವಿರುದ್ಧ ತಮ್ಮ ಆಂದೋಲನವನ್ನು ಕೈಬಿಟ್ಟು ಹೊಸ ಆರಂಭಕ್ಕಾಗಿ ರೈತರು ಮನೆಗೆ ಮರಳುವಂತೆ ಪ್ರತಿಭಟನಾ ನಿರತ ರೈತರಿಗೆ ಪ್ರಧಾನಿ ಮೋದಿ ಮನವಿ ಮಾಡಿದರು.ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸತ್ ಅಂಗೀಕರಿಸಿದ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ) ಕಾಯಿದೆ, 2020 (Farmers’ Produce Trade and Commerce (Promotion and Facilitation) Act, 2020) ಅನ್ನು ಹಿಂಪಡೆಯಲು ಇಂದು ಸಚಿವ ಸಂಪುಟ ಸಭೆ ನಡೆಯುವ ನಿರೀಕ್ಷೆಯಿದೆ. ಅದೇ ವೇಳೆ ಸಚಿವ ಸಂಪುಟ ಅನುಮೋದನೆಗಾಗಿ ಕೃಷಿ ಕಾನೂನುಗಳ ರದ್ದತಿ ಮಸೂದೆ 2021(The Farm Laws Repeal Bill, 2021) ಅನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.

ಸಿಂಘು ಸೇರಿದಂತೆ ದೆಹಲಿಯ ಹಲವು ಗಡಿ ಭಾಗಗಳಲ್ಲಿ ರೈತರ ಪ್ರತಿಭಟನೆಯ ಮೊದಲ ವಾರ್ಷಿಕೋತ್ಸವಕ್ಕೆ ಸುಮಾರು ಒಂದು ವಾರದ ಮೊದಲು ಪ್ರಧಾನಿ ಮೋದಿಯವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ರೈತ ಸಂಘಗಳು ಈ ಘೋಷಣೆಯನ್ನು ಬಹುದೊಡ್ಡ ಗೆಲುವು ಎಂದು ಶ್ಲಾಘಿಸಿದರೆ, ಬೃಹತ್ ರೈತರನ್ನು ಹೊಂದಿರುವ ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವಿರೋಧ ಪಕ್ಷಗಳು ಹೇಳಿಕೊಂಡಿವೆ.
ಆದಾಗ್ಯೂ ಸಂಸತ್ತಿನಲ್ಲಿ ಕಾನೂನುಗಳನ್ನು ಔಪಚಾರಿಕವಾಗಿ ರದ್ದುಪಡಿಸುವವರೆಗೆ ದೆಹಲಿ ಗಡಿಯಲ್ಲಿ ತಮ್ಮ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದಾರೆ.

ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕಾನೂನು ಖಾತರಿ ಸೇರಿದಂತೆ ಕೇಂದ್ರ ಸರ್ಕಾರದ ಮುಂದೆ ಎತ್ತಿರುವ ಆರು ಬೇಡಿಕೆಗಳನ್ನೊಡ್ಡಿದ್ದು ಅದು ಈಡೇರುವವರೆಗೂ ತನ್ನ ಆಂದೋಲನವನ್ನು ಮುಂದುವರಿಸುವುದಾಗಿ ಹೇಳಿದೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳ ರದ್ದತಿ ಮಸೂದೆಯನ್ನು ಚಳಿಗಾಲದ ಅಧಿವೇಶನದ ಕಾರ್ಯಸೂಚಿಯಲ್ಲಿ ಸೇರಿಸಿದ ಕೇಂದ್ರ ಸರ್ಕಾರ

 

Published On - 11:29 am, Wed, 24 November 21