ಅಗರ್ತಲಾ: ತ್ರಿಪುರಾದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆ ಪಕ್ಷದ ಶಾಸಕರು ತಿರುಗಿಬಿದ್ದಿದ್ದಾರೆ. ಅಲ್ಲಿ ಸ್ಥಳೀಯ ಆಡಳಿತದ ಚುನಾವಣೆಗಳು ಸಮೀಪಿಸುತ್ತಿದೆ. ಆದರೆ ತ್ರಿಪುರದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯ ಇಬ್ಬರು ಶಾಸಕರು ಸ್ಥಳೀಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಇಬ್ಬರು ಶಾಸಕರಾದ ಸುದೀಪ್ ರಾಯ್ ಬರ್ಮನ್ ಮತ್ತು ಆಶೀಶ್ ಸಹಾ ಮಂಗಳವಾರ ಸುದ್ದಿಗೋಷ್ಠಿ ನಡೆಸಿ, ಇತ್ತೀಚೆಗೆ ತ್ರಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ದೇಶದ ಸರ್ವೋಚ್ಛ ನ್ಯಾಯಾಲಯ, ತ್ರಿಪುರಾ ಹೈಕೋರ್ಟ್ ಅಷ್ಟೇ ಅಲ್ಲ, ಕೇಂದ್ರ ಗೃಹ ಸಚಿವರೂ ಕೂಡ ಇಲ್ಲಿನ ಹಿಂಸಾಚಾರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತಾಯ್ತು ಎಂದಿದ್ದಾರೆ.
ಹಿಂದೆ ಸಿಪಿಐ (ಎಂ) ಆಡಳಿತದ ಅವಧಿಯಲ್ಲಿ ರಾಜಕೀಯ ಹಿಂಸಾಚಾರದ ಸಂಸ್ಕೃತಿ ಇತ್ತು. ಅದೀಗ ರಾಜ್ಯದ ಪಾಲಿಗೆ ಪ್ರಜಾಪ್ರಭುತ್ವ ವಿರೋಧಿ ಬೆದರಿಕೆಯಾಗಿ ಮಾರ್ಪಟ್ಟಿದೆ. ಸಾಮಾನ್ಯ ಜನರು ಮತ್ತು ಅಭ್ಯರ್ಥಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸುದೀಪ್ ರಾಯ್ ಬರ್ಮನ್ ತಿಳಿಸಿದ್ದಾರೆ. ತ್ರಿಪುರದಲ್ಲಿ ಯಾವಾಗಲೂ ಚುನಾವಣೆಗಳು ಎಂಬುದು ಉತ್ಸವಗಳಂತೆ ನಡೆಯುತ್ತವೆ. ಆದರೆ ಈ ಬಾರಿ ಪ್ರಾದೇಶಿಕ ಭಯೋತ್ಪಾದನೆ ನಡೆಯುತ್ತಿದೆ. ಈ ರಾಜ್ಯದ ಜನರೇ ಮುಂದಾಗಿ ಇದನ್ನು ಹಿಮ್ಮೆಟ್ಟಿಸಬೇಕು. ಗೂಂಡಾಗಳನ್ನು ಧೈರ್ಯದಿಂದ ಎದುರಿಸಿ, ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಹೇಳಿದರು.
ಮುಖ್ಯಮಂತ್ರಿ ಯಾಕೆ ಮೌನವಾಗಿದ್ದಾರೆ?
ಇಷ್ಟೆಲ್ಲ ಹಿಂಸಾಚಾರ ನಡೆದು ಟಿಎಂಸಿ ಕಾರ್ಯಕರ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಪರಿಸ್ಥಿತಿ ಕೈಮೀರಿದರೂ ತ್ರಿಪುರ ಸಿಎಂ ಬಿಪ್ಲಬ್ ದೇಬ್ ಮಾತ್ರ ಯಾಕಿನ್ನೂ ಮೌನವಾಗಿದ್ದಾರೆ ಎಂದು ಬಿಜೆಪಿಯ ಇಬ್ಬರೂ ಶಾಸಕರು ಪ್ರಶ್ನಿಸಿದ್ದಾರೆ. ಒಂದು ನಗರಾಡಳಿತದ ಚುನಾವಣೆಗಾಗಿ ಇಷ್ಟೆಲ್ಲ ಹಿಂಸಾಚಾರ ನಡೆಯುವ ಅಗತ್ಯವಿದೆಯಾ ಎಂಬುದು ನಮ್ಮ ಪ್ರಶ್ನೆ. ಈ 44 ತಿಂಗಳುಗಳ ಆಡಳಿತದ ಅವಧಿಯಲ್ಲಿ ಬಿಜೆಪಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ, ಒಳ್ಳೆಯ ಆಡಳಿತ ಕೊಟ್ಟಿದೆ ಅಂದ ಮೇಲೆ ಹಿಂಸಾಚಾರದಲ್ಲಿ ಪಾಲ್ಗೊಳ್ಳುವ ಅವಶ್ಯಕತೆಯಾದರೂ ಏನು? ಎಂದು ಪ್ರಶ್ನಿಸಿದ್ದಾರೆ.
ಇಲ್ಲಿ ನಮ್ಮ ಮುಖ್ಯಮಂತ್ರಿಗಳೇ ರಾಜ್ಯದ ಗೃಹ ಸಚಿವರೂ ಆಗಿದ್ದಾರೆ. ಇಷ್ಟು ಪ್ರಮಾಣದಲ್ಲಿ ರಾಜಕೀಯ ಹಿಂಸಾಚಾರ ನಡೆದರೂ ಇದಕ್ಕೆ ಸಂಬಂಧಪಟ್ಟಂತೆ ಒಂದೇ ಒಂದು ಹೇಳಿಕೆಯನ್ನೂ ಅವರು ನೀಡಲಿಲ್ಲ. ಪೊಲೀಸರೂ ಕೂಡ ಮೂಕ ಪ್ರೇಕ್ಷಕರಾಗಿದ್ದಾರೆ. ಸಿಪಿಐ(ಎಂ)ನಿಂದ ನಮ್ಮ ಪಕ್ಷಕ್ಕೆ ಸೇರ್ಪಡೆಯಾದವರನ್ನು ಸಂಕುಚಿತ ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಇಬ್ಬರೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತ್ರಿಪುರಾದಲ್ಲಿ ತೃಣಮೂಲ ನಾಯಕಿ ಬಂಧನ; ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಟಿಎಂಸಿ ಆರೋಪ