ಕೃಷಿ ಕಾಯ್ದೆಗಳ ರದ್ದತಿ ಮಸೂದೆಯನ್ನು ಚಳಿಗಾಲದ ಅಧಿವೇಶನದ ಕಾರ್ಯಸೂಚಿಯಲ್ಲಿ ಸೇರಿಸಿದ ಕೇಂದ್ರ ಸರ್ಕಾರ
ಕಳೆದ ವರ್ಷ ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾಯ್ದೆಯಾಗಿ ಬದಲಾದ ಕೃಷಿ ಮಸೂದೆಗಳು ದೊಡ್ಡ ವಿವಾದ ಸೃಷ್ಟಿಸಿವೆ. ದೆಹಲಿಯ ಗಡಿಗಳಲ್ಲಿ ರೈತರು ಒಂದು ವರ್ಷಗಳ ಕಾಲ ಹೋರಾಟ ಮಾಡಿದರು.
ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈಗಾಗಲೇ ವಾಪಸ್ ಪಡೆದಿದ್ದಾರೆ. ಆದರೆ ಅದು ಸಂಸತ್ತಿನಲ್ಲಿ ರದ್ದಾಗುವವರೆಗೂ ನಾವು ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಕುಳಿತಿದ್ದಾರೆ. ಈ ಮಧ್ಯೆ ನವೆಂಬರ್ 29ರಿಂದ ಶುರುವಾಗುವ ಚಳಿಗಾಲದ ಅಧಿವೇಶನದ ಕಾರ್ಯಸೂಚಿಯಲ್ಲಿ ಕೃಷಿ ಕಾಯ್ದೆಗಳ ರದ್ದತಿ ಮಸೂದೆ 2021 (The Farm Laws Repeal Bill-2021)ನ್ನು ಕೂಡ ಕೇಂದ್ರ ಸರ್ಕಾರ ಪಟ್ಟಿ ಮಾಡಿದೆ. ಹಾಗೇ, ಅಧಿವೇಶನದಲ್ಲಿ ಈ ಮೂರು ಕಾನೂನುಗಳ ಬಗ್ಗೆ ಚರ್ಚಿಸಲೆಂದೇ ನಿಖರವಾದ ದಿನವನ್ನು ನಿಗದಿಪಡಿಸಲು ಕೃಷಿ ಸಚಿವಾಲಯ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಸಂಸತ್ತಿನಲ್ಲಿ ಅನುಮೋದನೆಗೊಂಡು ಕಾಯ್ದೆಯಾಗಿ ಬದಲಾದ ಕೃಷಿ ಮಸೂದೆಗಳು ದೊಡ್ಡ ವಿವಾದ ಸೃಷ್ಟಿಸಿವೆ. ದೆಹಲಿಯ ಗಡಿಗಳಲ್ಲಿ ರೈತರು ಒಂದು ವರ್ಷಗಳ ಕಾಲ ಹೋರಾಟ ಮಾಡಿದರು. 700ಕ್ಕೂ ಹೆಚ್ಚು ಅನ್ನದಾತರು ಪ್ರಾಣ ಕಳೆದುಕೊಂಡರು. ಹಿಂಸಾಚಾರ ನಡೆದು ಅಪಾರ ನಷ್ಟವಾಯಿತು. ರೈತರ ಹೋರಾಟದ ಬಗ್ಗೆ ಸುಪ್ರೀಂಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಒತ್ತಡ ತರುತ್ತಲೇ ಇತ್ತು. ಅದೇನೇ ಇರಲಿ ಪ್ರಧಾನಿ ಮೋದಿ ಗುರುನಾನಕ ಜಯಂತಿಯಂದೇ ದೇಶವನ್ನು ಉದ್ದೇಶಿಸಿ ಮಾತನಾಡಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಭರವಸೆ ನೀಡಿದ್ದಾರೆ. ಹಾಗೇ ದೇಶದ ಜನರ ಕ್ಷಮೆ ಕೋರಿದ್ದಾರೆ. ಅಂದು ರೈತರಿಗಾಗಿ ಈ ಕಾಯ್ದೆ ತಂದೆವು, ಈಗ ದೇಶಕ್ಕಾಗಿ ವಾಪಸ್ ಪಡೆಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಸಂಸತ್ತಿನಲ್ಲಿ ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ಸಂಬಂಧ ಇಂದು ಸಭೆ ನಡೆಯಲಿದೆ. ಇದರಲ್ಲಿ ಅಧಿಕೃತ ಅನುಮೋದನೆ ದೊರೆಯಲಿದೆ ಎಂದೂ ಮೂಲಗಳಿಂದ ಮಾಹಿತಿ ಸಿಕ್ಕಿದೆ. ನವೆಂಬರ್ 29ರಿಂದ ಶುರುವಾಗಲಿರುವ ಅಧಿವೇಶನದಲ್ಲಿ ಒಟ್ಟು 26 ಹೊಸ ಮಸೂದೆಗಳ ಪರಿಚಯ ಮತ್ತು ಅಂಗೀಕಾರದ ಬಗ್ಗೆ ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕಾರ್ಯಸೂಚಿ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ), ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020ನ್ನು ಹಿಂಪಡೆಯುವುದನ್ನೂ ಒಳಗೊಂಡಿದೆ.
ಇದನ್ನೂ ಓದಿ: Life Certificate: ಈ ತಿಂಗಳೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಮುಂದಿನ ತಿಂಗಳಿಂದ ಪಿಂಚಣಿ ಬರಲ್ಲ