2024ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ: ಟಿಎಂಸಿಗೆ ಬಿಜೆಪಿ ಒತ್ತಾಯ
Mamata Banerjee: ಮಮತಾ ಬ್ಯಾನರ್ಜಿಯವರು ನವೆಂಬರ್ 22ರಂದೇ ದೆಹಲಿಗೆ ತೆರಳಿದ್ದು, 25ರವರೆಗೆ ಅಲ್ಲಿಯೇ ಇರಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee)ಯವರು ದೆಹಲಿಗೆ ಹೋಗಲಿದ್ದಾರೆ. ಅಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ಮಧ್ಯೆ ಬಿಜೆಪಿ ಒಂದು ಹೇಳಿಕೆಯನ್ನು ನೀಡಿದ್ದು, ಕುತೂಹಲಕ್ಕೆ ಕಾರಣವಾಗಿದೆ. ತೃಣಮೂಲ ಕಾಂಗ್ರೆಸ್ ಪಕ್ಷ, 2024ರ ಲೋಕಸಭೆಯ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಬೇಕು ಎಂದು ಬಿಜೆಪಿ ಹೇಳಿದೆ.
ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತಾ ಮಜೂಮ್ದಾರ್ ಈ ಬಗ್ಗೆ ಮಾತನಾಡಿದ್ದು, ಮಮತಾ ಬ್ಯಾನರ್ಜಿಯವರು ಒಂದು ರಾಜ್ಯದ ಮುಖ್ಯಮಂತ್ರಿ. ಅವರು ದೆಹಲಿಗೆ ಬಂದು ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವುದು ದೊಡ್ಡ ವಿಷಯವಲ್ಲ. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ದೆಹಲಿಗೆ ಹೋಗಿ ಪ್ರಧಾನಿಯನ್ನು ಭೇಟಿ ಮಾಡುತ್ತಾರೆ. ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿ, ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸುತ್ತಾರೆ. ಇದು ತೀರ ಸಹಜವಾದ ಪ್ರಕ್ರಿಯೆ ಎಂದಿದ್ದಾರೆ.
ಹಾಗೇ, 2024ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಮತಾ ಬ್ಯಾನರ್ಜಿಯವರು ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಮಮತಾ ಬ್ಯಾನರ್ಜಿಯವರನ್ನೇ ವಿರೋಧ ಪಕ್ಷಗಳ ನಾಯಕರು ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಅವರೇ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ತೃಣಮೂಲಕ ಕಾಂಗ್ರೆಸ್ ಅಧಿಕೃತ ಘೋಷಣೆ ಮಾಡಬೇಕು. ಪ್ರತಿಪಕ್ಷಗಳು ಅವರನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕು ಎಂದು ಸವಾಲು ಹಾಕಿದ್ದಾರೆ. ಅಲ್ಲದೆ, ನಮ್ಮ ಬಿಜೆಪಿಯಿಂದ ನರೇಂದ್ರ ಮೋದಿಯವರೇ ಪ್ರಧಾನಿ ಅಭ್ಯರ್ಥಿ. ಅದನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಅಂದಹಾಗೆ ಮಮತಾ ಬ್ಯಾನರ್ಜಿಯವರು ನವೆಂಬರ್ 22ರಂದೇ ದೆಹಲಿಗೆ ತೆರಳಿದ್ದು, 25ರವರೆಗೆ ಅಲ್ಲಿಯೇ ಇರಲಿದ್ದಾರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ಅಂತಾರಾಷ್ಟ್ರೀಯ ಗಡಿಯಿಂದ ಬಿಎಸ್ಎಫ್ ಪಡೆಯ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಿದ್ದು ಸರಿಯಲ್ಲ ಎಂಬ ಬಗ್ಗೆ ಪ್ರಧಾನಿಯವರಿಗೆ ತಿಳಿಸಲಿದ್ದಾರೆ. ತ್ರಿಪುರ ಹಿಂಸಾಚಾರದ ಬಗ್ಗೆಯೂ ಧ್ವನಿ ಎತ್ತಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸೇಲಂನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ: 3 ಕಟ್ಟಡಗಳು ಕುಸಿದು 5 ಮಂದಿ ಸಾವು, ಇನ್ನೊಬ್ಬನ ಸ್ಥಿತಿ ಗಂಭೀರ