ನಾಸಿಕ್: ಭಾರತಕ್ಕೆ ಸ್ವಾತಂತ್ರ್ಯ ಬಂದ ವರ್ಷವನ್ನೇ ತಪ್ಪಾಗಿ ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯ ಕಪಾಳಕ್ಕೆ ಹೊಡೆಯಬೇಕು ಎನ್ನಿಸಿತ್ತು ಎಂದು ಏಕವಚನದಲ್ಲಿ, ಬಹಿರಂಗವಾಗಿ ಬೈದಿದ್ದ ಬಿಜೆಪಿ ನಾಯಕ, ಕೇಂದ್ರ ಸಚಿವ ನಾರಾಯಣ್ ರಾಣೆ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ರತ್ನಗಿರಿ ಜಿಲ್ಲೆಯ ಚಿಪ್ಲುನ್ ನಗರದಲ್ಲಿದ್ದ ನಾರಾಯಣ್ ರಾಣೆಯವರನ್ನು ನಾಸಿಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರ ವಿರುದ್ಧ ಅದಾಗಲೇ ಪುಣೆ, ನಾಸಿಕ್, ಮತ್ತು ರಾಯ್ಗಡ್ನ ಮಹಾದ್ನಲ್ಲಿ ಎಫ್ಐಆರ್ ದಾಖಲಾಗಿದೆ. ಈ ಮಧ್ಯೆ ಬಂಧನ ಅಥವಾ ಇನ್ಯಾವುದೇ ಬಲವಂತವಾಗಿ ತೆಗೆದುಕೊಳ್ಳಲಾಗುವ ಕ್ರಮಗಳಿಂದ ರಕ್ಷಣೆ ಕೊಡುವಂತೆ ನಾರಾಯಣ ರಾಣೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿ ವಿಚಾರಣೆ ಮಾಡಲು ಜಸ್ಟೀಸ್ ಎಸ್ಎಸ್ ಶಿಂಧೆ ಮತ್ತು ಎನ್ಜೆ ಜಮ್ದಾರ್ ಅವರಿದ್ದ ಪೀಠ ನಿರಾಕರಿಸಿದೆ.
ಉದ್ಧವ್ ಠಾಕ್ರೆಯವರಿಗೆ ಸ್ವಾತಂತ್ರ್ಯ ಬಂದ ವರ್ಷವೇ ಗೊತ್ತಿಲ್ಲ. ಇದು ನಾಚಿಕೆಗೇಡಿನ ವಿಷಯ. ಈ ಬಾರಿ ಎಷ್ಟನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ ಎಂಬುದು ಗೊತ್ತಿಲ್ಲದೆ, ಅದನ್ನು ಕೇಳಲು ಭಾಷಣದ ಮಧ್ಯೆಯೇ ಹಿಂದೆ ಬಾಗಿದ್ದಾರೆ. ನಾನೇ ಅಲ್ಲಿದ್ದಿದ್ದರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂದು ನಾರಾಯಣ ರಾಣೆ ಹೇಳಿದ್ದರು. ಆದರೆ ಈ ಮಾತು ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಶಿವಸೇನೆ ಕಾರ್ಯಕರ್ತರೂ ಪ್ರತಿಭಟನೆ ಶುರು ಮಾಡಿದ್ದರು. ನಾಸಿಕ್ನಲ್ಲಿರುವ ಬಿಜೆಪಿ ಕಚೇರಿಗೆ ಕಲ್ಲು ಎಸೆದು, ರಾಣೆ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಅಷ್ಟೇ ಅಲ್ಲ, ಶಿವಸೇನೆ ಸಂಸದ ವಿನಾಯಕ್ ರಾವತ್, ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ರಾಣೆಯನ್ನು ಕೇಂದ್ರ ಸಂಪುಟದಿಂದ ತೆಗೆದುಹಾಕಬೇಕು ಎಂದೂ ಆಗ್ರಹಿಸಿದ್ದಾರೆ.
Shiv Sena MP Vinayak Raut writes to PM Narendra Modi, requesting him to remove minister Narayan Rane from Union Cabinet over a comment against Shiv Sena chief and Maharashtra CM Uddhav Thackeray pic.twitter.com/g72NZXBZJD
— ANI (@ANI) August 24, 2021
ಇನ್ನು ತಮ್ಮ ವಿರುದ್ಧ ಮೂರು ಕಡೆಗಳಲ್ಲಿ ಎಫ್ಐಆರ್ ದಾಖಲಾದಾಗಲೂ ರಾಣೆ ತಾವೇನೂ ಅಪರಾಧ ಮಾಡಿಲ್ಲ ಎಂದೇ ಪ್ರತಿಕ್ರಿಯೆ ನೀಡಿದ್ದರು. ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಗೊತ್ತಿಲ್ಲ. ನಾನು ಸಾಮಾನ್ಯ ವ್ಯಕ್ತಿಯಲ್ಲ..ಅಷ್ಟಕ್ಕೂ ನಾನು ಯಾವುದೇ ಅಪರಾಧ ಮಾಡಿಲ್ಲ. ಹಾಗೇ ಹೇಳುವುದಾದರೆ, ಆಗಸ್ಟ್ 15, ನಮ್ಮ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಗೊತ್ತಿಲ್ಲದೆ ಇರುವುದೂ ಅಪರಾಧವೇ ಅಲ್ಲವೇ? ನಾನು ಹೊಡೆಯುತ್ತಿದ್ದೆ ಎಂದು ಹೇಳಿದ್ದೇನೆ ಅಷ್ಟೇ..ಇವು ಶಬ್ದಗಳೇ ಹೊರತು ಅಪರಾಧವಲ್ಲ ಎಂದು ರಾಣೆ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿ: ಕೋವಿಡ್-19 ಮೂರನೇ ಅಲೆ ವಿರುದ್ಧ ಮಕ್ಕಳನ್ನು ರಕ್ಷಿಸಲು ಸರ್ಕಾರಗಳು ಮಾಡಿಕೊಂಡಿರುವ ಏರ್ಪಾಟುಗಳು ಯಾವುದಕ್ಕೂ ಸಾಲದು: ವರದಿ
ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೊರೆ ಹೊಕ್ಕ ವಕೀಲರು
Published On - 4:00 pm, Tue, 24 August 21