
ಲಕ್ನೋ, ಜನವರಿ 22: ಉತ್ತರ ಪ್ರದೇಶದ ಮೊರಾದಾಬಾದಿನಲ್ಲಿ ಮರ್ಯಾದಾ ಹತ್ಯೆ(Honor Killing)ಯೊಂದು ನಡೆದಿದೆ. ತಮ್ಮ ತಂಗಿ ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸಿದ್ದಕ್ಕೆ ಕೋಪಗೊಂಡ ಸಹೋದರರು ತಂಗಿಯಂದೂ ನೋಡದೆ ಇಬ್ಬರನ್ನೂ ಹತ್ಯೆ ಮಾಡಿದ್ದಾರೆ. 27 ವರ್ಷದ ಮುಸ್ಲಿಂ ಯುವಕ ಹಾಗೂ 22 ವರ್ಷದ ಹಿಂದೂ ಯುವತಿಯನ್ನು ಕಟ್ಟಿಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಅರ್ಮಾನ್ ಕೆಲವು ತಿಂಗಳುಗಳಿಂದ ಮೊರಾದಾಬಾದ್‌ನಲ್ಲಿ ವಾಸಿಸುತ್ತಿದ್ದರು. ಈ ಸಮಯದಲ್ಲಿ, ಅವರು ಕಾಜಲ್ ಅವರನ್ನು ಭೇಟಿಯಾದರು ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಕಾಜಲ್ ಅವರ ಸಹೋದರರು ಅಂತರ್ಧರ್ಮೀಯ ಸಂಬಂಧವನ್ನು ವಿರೋಧಿಸಿದರು ಮತ್ತು ಆತನನ್ನು ಮರೆತುಬಿಡು ಎಂದು ಕೇಳಿಕೊಂಡಿದ್ದರು.
ಸುಮಾರು ಮೂರು ದಿನಗಳ ಹಿಂದೆ, ಅರ್ಮಾನ್ ಮತ್ತು ಕಾಜಲ್ ಕಾಣೆಯಾಗಿದ್ದರು. ಅರ್ಮಾನ್ ತಂದೆ ಹನೀಫ್ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ, ಕಾಜಲ್ ಕೂಡ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿತ್ತು. ಆಕೆಯ ಸಹೋದರರನ್ನು ವಿಚಾರಣೆ ನಡೆಸಿದಾಗ, ಇಬ್ಬರನ್ನು ಕೊಂದಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.
ಮತ್ತಷ್ಟು ಓದಿ: ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ
ಆರೋಪಿಗಳು ಪೊಲೀಸರಿಗೆ ಶವಗಳನ್ನು ಹೂತಿಟ್ಟ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದರು. ಬುಧವಾರ ಸಂಜೆ ಶವಗಳನ್ನು ಹೊರತೆಗೆಯಲಾಯಿತು. ಅರ್ಮಾನ್ ಮತ್ತು ಕಾಜಲ್ ಅವರ ಕೈಕಾಲುಗಳನ್ನು ಕಟ್ಟಿಹಾಕಿ ಕೊಚ್ಚಿ ಕೊಲ್ಲಲಾಗಿದೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.
ತನಿಖೆಯ ಸಮಯದಲ್ಲಿ, ಯುವತಿಯ ಸಹೋದರರೇ ಅವರನ್ನು ಕೊಂದಿದ್ದಾರೆ ಎಂಬುದು ತಿಳಿದುಬಂದಿದೆ. ಸಹೋದರರು ತಪ್ಪೊಪ್ಪಿಕೊಂಡಿದ್ದು, ನಾವು ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಕೊಲೆಗಳಿಗೆ ಬಳಸಿದ ಗುದ್ದಲಿಯನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸತ್ಪಾಲ್ ಆಂಟಿಲ್ ಹೇಳಿದ್ದಾರೆ.
ಮಹಿಳೆಯ ಮೂವರು ಸಹೋದರರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅವರಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅರ್ಮಾನ್ ಮತ್ತು ಕಾಜಲ್ ನಡುವಿನ ಯಾವುದೇ ಸಂಬಂಧದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಅರ್ಮಾನ್ ಸಹೋದರಿ ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ