ತನ್ನ 13ನೇ ದಿನದ ತಿಥಿ ಕಾರ್ಯಕ್ಕೆ ಬಂದ ನೆಂಟರನ್ನು ತಾನೇ ಬರಮಾಡಿಕೊಂಡ ವೃದ್ಧ

ಉತ್ತರ ಪ್ರದೇಶದ ಬಾಗ್‌ಪತ್‌ನ ಚೌಧರಿ ಬಲ್ಜೋರ್ ಸಿಂಗ್ ಬದುಕಿರುವಾಗಲೇ ತಮ್ಮ 13ನೇ ದಿನದ ತಿಥಿ ಕಾರ್ಯ ನಡೆಸಿದ್ದಾರೆ. ಸಾವಿನ ನಂತರ ಕುಟುಂಬಕ್ಕೆ ಹೊರೆಯಾಗಬಾರದೆಂಬ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, 900ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಮೊಮ್ಮಗನಿಗೆ ಪಗಡಿ ತೊಡಿಸಿ ಕುಟುಂಬದ ಜವಾಬ್ದಾರಿ ಹಸ್ತಾಂತರಿಸಿದರು. ಈ ಅಪರೂಪದ ನಿರ್ಧಾರ ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದೆ.

ತನ್ನ 13ನೇ ದಿನದ ತಿಥಿ ಕಾರ್ಯಕ್ಕೆ ಬಂದ ನೆಂಟರನ್ನು ತಾನೇ ಬರಮಾಡಿಕೊಂಡ ವೃದ್ಧ
ತನ್ನ ತಿಥಿ ಕಾರ್ಯ ಆಚರಿಸಿಕೊಂಡ ವೃದ್ಧ
Image Credit source: India TV

Updated on: Nov 16, 2026 | 8:27 AM

ಬಾಗ್​ಪತ್, ನವೆಂಬರ್ 16: ಸಾವಿನ ಬಳಿಕ 13ನೇ ದಿನದ ಕಾರ್ಯವನ್ನು ಪ್ರೇತದಿಂದ ಪಿತೃತ್ವಕ್ಕೆ ಪರಿವರ್ತನೆಯಾಗುವ ಸಮಯ ಎಂದು ಹೇಳಲಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತಾವು ಬದುಕಿರುವಾಗಲೇ ತನ್ನ 13ನೇ ದಿನದ ತಿಥಿ ಕಾರ್ಯವನ್ನು ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಟುಂಬದವರು, ಊರಿನವರು ಸೇರಿ 900ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಎಲ್ಲರನ್ನು ಖುದ್ದಾಗಿ ತಾವೇ ಬರಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಜೋಹ್ರಿ ಗ್ರಾಮದ ಚೌಧರಿ ಬಲ್ಜೋರ್ ಸಿಂಗ್ ಈ ವಿಭಿನ್ನ ನಿರ್ಧಾರ ತೆಗೆದುಕೊಂಡ ವ್ಯಕ್ತಿ. ಭಾನುವಾರ ತಮ್ಮ ಮನೆಯಲ್ಲೇ 13ನೇ ದಿನದ ಕಾರ್ಯಕ್ರಮ ಆಯೋಜಿಸಿದ್ದರು. ವಿಶೇಷವೆಂದರೆ, ಈ ಕಾರ್ಯಕ್ರಮದಲ್ಲಿ ಅವರೇ ಖುದ್ದಾಗಿ ಭಾಗವಹಿಸಿ ಅತಿಥಿಗಳನ್ನು ಸ್ವಾಗತಿಸಿದ್ದಾರೆ. ಬರೋಬ್ಬರಿ 900ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೋಜನ ಸವಿದಿದ್ದಾರೆ.

Loading...

ಬದುಕಿರುವಾಗಲೇ ತಿಥಿ ಮಾಡಿಕೊಳ್ಳಲು ಕಾರಣವೇನು?

ತಮ್ಮ ಸಾವಿನ ನಂತರ ಕುಟುಂಬದವರು 13ನೇ ದಿನದ ಕಾರ್ಯವನ್ನು ಆಯೋಜಿಸುವ ಬದಲು, ತಾವು ಬದುಕಿರುವಾಗ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಸಂಭ್ರಮಿಸಬೇಕು ಎಂಬುದು ಬಲ್ಜೋರ್ ಸಿಂಗ್ ಅವರ ಆಸೆಯಾಗಿತ್ತು. ತಮ್ಮ ಮರಣದ ನಂತರ ಕಾರ್ಯಕ್ರಮದ ವ್ಯವಸ್ಥೆ ಬಗ್ಗೆ ಕುಟುಂಬದವರು ಯಾವುದೇ ಟೀಕೆ ಅಥವಾ ಆರೋಪಗಳನ್ನು ಎದುರಿಸಬಾರದು ಎಂಬ ಉದ್ದೇಶವೂ ಅವರಿಗಿತ್ತು. ಹೀಗಾಗಿ ಎಲ್ಲ ವ್ಯವಸ್ಥೆಗಳನ್ನು ತಾವೇ ಮುಂದೆ ನಿಂತು ಮಾಡಿಸಿದ್ದಾರೆ.

ಮೊಮ್ಮಗನಿಗೆ ಪಗಡಿ ತೊಡಿಸಿ ಕುಟುಂಬದ ಹೊಣೆ ಹಸ್ತಾಂತರ

ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಪಗಡಿ ಸಮಾರಂಭ. ಉತ್ತರ ಭಾರತದ ಕೆಲವು ಸಮುದಾಯಗಳಲ್ಲಿ ಕುಟುಂಬದ ಹಿರಿಯ ವ್ಯಕ್ತಿ ಮೃತಪಟ್ಟ ಬಳಿಕ ಕುಟುಂಬದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ವ್ಯಕ್ತಿಗೆ ಪಗಡಿ ತೊಡಿಸುವ ಸಂಪ್ರದಾಯವಿದೆ. ಆದರೆ ಬಲ್ಜೋರ್ ಸಿಂಗ್ ಅವರು ತಾವು ಬದುಕಿರುವಾಗಲೇ ಈ ಆಚರಣೆ ನಡೆಸಿದ್ದಾರೆ. ತಮ್ಮ ಮೊಮ್ಮಗ ಮುಕುಲ್‌ಗೆ ಪಗಡಿ ಹಸ್ತಾಂತರಿಸುವ ಮೂಲಕ ಕುಟುಂಬದ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ವಹಿಸುವುದಾಗಿ ಸಾಂಕೇತಿಕವಾಗಿ ತಿಳಿಸಿದ್ದಾರೆ.

ಮುಕುಲ್‌ಗೆ ಈಗ ಸುಮಾರು 10 ವರ್ಷ ವಯಸ್ಸು. ಬಲ್ಜೋರ್ ಸಿಂಗ್ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದು, ಮೊಮ್ಮಗನಿಗೆ ಕುಟುಂಬದ ಜವಾಬ್ದಾರಿಯನ್ನು ಹಸ್ತಾಂತರಿಸುವುದು ಈ ಸಮಾರಂಭದ ಪ್ರಮುಖ ಭಾಗವಾಗಿತ್ತು.

ಇದನ್ನೂ ಓದಿ: ಒಂದು ಕ್ಷಣದ ಆತುರಕ್ಕೆ ಹೋಯ್ತು ಅಮೂಲ್ಯ ಜೀವ! ರೈಲಿಗೆ ಸಿಲುಕಿ ಪದವಿ ವಿದ್ಯಾರ್ಥಿನಿ ಸಾವು

900 ಜನರಿಗೆ ಭರ್ಜರಿ ಭೋಜನ

ಕಾರ್ಯಕ್ರಮ ಬೆಳಗ್ಗೆ ಹವನದೊಂದಿಗೆ ಆರಂಭವಾಯಿತು. ಬಳಿಕ ಪಗಡಿ ಸಮಾರಂಭ ನಡೆಯಿತು. ಮಧ್ಯಾಹ್ನ ಸುಮಾರು 900 ಜನರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಮನೆಯ ಅಂಗಳದಲ್ಲಿ ದೊಡ್ಡ ದೊಡ್ಡ ಅಡುಗೆ ಪಾತ್ರೆಗಳನ್ನು ಇಟ್ಟು ಅಡುಗೆ ಸಿದ್ಧಪಡಿಸಲಾಗಿತ್ತು. ಊಟದಲ್ಲಿ ಪೂರಿ, ರಾಯ್ತಾ, ಎರಡು ಬಗೆಯ ತರಕಾರಿಗಳು ಹಾಗೂ ಲಡ್ಡೂ ಸೇರಿದಂತೆ ವಿವಿಧ ಸಾಂಪ್ರದಾಯಿಕ ಖಾದ್ಯಗಳಿದ್ದವು.

ಗ್ರಾಮಸ್ಥರು, ಸಂಬಂಧಿಕರು ಮತ್ತು ಚೌಧರಿ ಸಮುದಾಯದ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉತ್ತರ ಪ್ರದೇಶದ ರಾಜ್ಯ ಸಚಿವ ಕೆ.ಪಿ. ಮಲಿಕ್ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದಲ್ಲಿ ಚರ್ಚೆಗೆ ಕಾರಣವಾದ ವಿಭಿನ್ನ ನಿರ್ಧಾರ

ಸಾಮಾನ್ಯವಾಗಿ ಸಾವಿನ ನಂತರ ನಡೆಯುವ ತೇರಾವಿ ಕಾರ್ಯಕ್ರಮವನ್ನು ವ್ಯಕ್ತಿಯೊಬ್ಬರು ಬದುಕಿರುವಾಗಲೇ ಆಯೋಜಿಸಿರುವುದು ಗ್ರಾಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಮ್ಮ ಜೀವನದಲ್ಲೇ ಸಂಬಂಧಿಕರು, ಸ್ನೇಹಿತರು ಮತ್ತು ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಅವರೊಂದಿಗೆ ಸಮಯ ಕಳೆಯಬೇಕು ಎಂಬ ಬಲ್ಜೋರ್ ಸಿಂಗ್ ಅವರ ಆಶಯ ಈ ಮೂಲಕ ಈಡೇರಿದೆ. ಸಾವಿನ ನಂತರದ ಆಚರಣೆಯನ್ನು ಬದುಕಿರುವಾಗಲೇ ನಡೆಸುವ ಮೂಲಕ ಅವರು ಸಂಪ್ರದಾಯಕ್ಕೆ ವಿಭಿನ್ನ ಅರ್ಥ ನೀಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us