ಕೆಎಸ್‌ಆರ್‌ಟಿಸಿ ಬಸ್ ರೂಪದಲ್ಲಿ ಬಂದ ಮೃತ್ಯು! ಭೀಕರ ಅಪಘಾತದಲ್ಲಿ ಯುವಕರಿಬ್ಬರು ಸಾವು
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾದಿಹಳ್ಳಿ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ, ಸರ್ಕಾರಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು, ನವೆಂಬರ್ 15: ಸರ್ಕಾರಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾದಿಹಳ್ಳಿ ಬಳಿ ನಡೆದಿದೆ. ಸಂಜು (23) ಹಾಗೂ ಹರ್ಷ (23) ಮೃತರು. ಇಬ್ಬರೂ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಬೈಕ್‌ನಲ್ಲಿ ವಾಪಸ್ ಬರುತ್ತಿದ್ದರು. ಈ ವೇಳೆ ತಿಪಟೂರು-ಅರಸೀಕೆರೆ ರಸ್ತೆಯ ಮಾದಿಹಳ್ಳಿ ಬಳಿ ಅಪಘಾತ ಸಂಭವಿಸಿದೆ.
ಯೂಟರ್ನ್ ತೆಗೆದುಕೊಳ್ಳುವಾಗ ಬೈಕ್‌ಗೆ ಡಿಕ್ಕಿ ಹೊಡೆದ ಬಸ್
ಅರಸೀಕೆರೆಯಿಂದ ತಿಪಟೂರಿನತ್ತ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್, ಮಾದಿಹಳ್ಳಿ ಬಳಿ ಬೈಕ್ ಸವಾರರು ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಗಂಡ-ಹೆಂಡತಿ ಜಗಳದಲ್ಲಿ ಮಗ ಬಲಿ: ಹಾರೆಯಿಂದ ಹೊಡೆದು ಪುತ್ರನನ್ನೇ ಕೊಂದ ಪಾಪಿ!
ಮೃತ ಸಂಜು ಗೆದ್ದಲೇಹಳ್ಳಿ ಗ್ರಾಮದ ದಿನೇಶ್ ಅವರ ಪುತ್ರ. ಮತ್ತೊಬ್ಬ ಮೃತ ಯುವಕ ಹರ್ಷ ಬೈರನಾಯಕನಹಳ್ಳಿ ಗ್ರಾಮದ ನಿವಾಸಿ ಆನಂದ್ ಕುಮಾರ್ ಅವರ ಪುತ್ರ. ಮದುವೆ ಕಾರ್ಯಕ್ರಮ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕರು ದುರಂತ ಅಂತ್ಯ ಕಂಡಿರುವುದರಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಟಿಟಿ ಹಾಗೂ ಕಾರು ನಡುವೆ ಭೀಕರ ಅಪಘಾತ: ಓರ್ವ ಸಾವು
ಶಿವಮೊಗ್ಗ ತಾಲೂಕಿನ ಜಾವಳ್ಳಿ ಸಮೀಪ ನಡೆದ ಟಿಟಿ ಹಾಗೂ ಕಾರು ನಡುವೆ ಭೀಕರ ಅಪಘಾತದಲ್ಲಿ ಓರ್ವ ಯುವಕ ದುರ್ಮರಣ ಹೊಂದಿರುವ ಘಟನೆ ನಡೆದಿದೆ. ಹೊಳಲ್ಕೆರೆ ಮೂಲದ ದರ್ಶನ್ (31) ಮೃತ ದುರ್ದೈವಿ. ಅಪಘಾತದಲ್ಲಿ ಕಾರು ಚಾಲಕ ಶರತ್‌ಗೆ ಗಂಭೀರ ಗಾಯವಾಗಿದ್ದು, ಕಾಲು ಸಿಲುಕಿ ಒದ್ದಾಡಿದ್ದಾರೆ. ಆತನನ್ನು ಹೊರ ತೆಗೆಯಲು ಸ್ಥಳೀಯರು ಹರಸಾಹಸ ಪಟ್ಟರು. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಇನ್ನು ಸ್ಥಳಕ್ಕೆ ಹೊಳೆಹೊನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಪಘಾತ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




