
ಲಖನೌ, ಸೆಪ್ಟೆಂಬರ್ 14: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ನಕಲಿ ನಾಣ್ಯ ತಯಾರಿಕೆ ಗ್ಯಾಂಗ್ನ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಹಾರನ್‌ಪುರದ ಟಿಟಾವಾ ಪ್ರದೇಶದಲ್ಲಿ ಹೊಸ ಘಟಕ ಸ್ಥಾಪಿಸಲು ಯಂತ್ರೋಪಕರಣಗಳನ್ನು ಸಾಗಿಸುತ್ತಿದ್ದ ವೇಳೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಬಿಹಾರದಲ್ಲಿ ಈ ಜಾಲ ಕಾರ್ಯಾಚರಿಸುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. 2001ರಿಂದಲೇ ನಕಲಿ ನಾಣ್ಯ ತಯಾರಿಕೆಯಲ್ಲಿ ಆರೋಪಿಗಳು ತೊಡಗಿದ್ದರು ಎನ್ನಲಾಗಿದೆ.
ಪೊಲೀಸರು 20 ರೂ. ಮೌಲ್ಯದ 6,400 ನಕಲಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮುಖಬೆಲೆ 1.28 ಲಕ್ಷವಾಗಿದೆ. ಇದರ ಜೊತೆಗೆ ಸುಮಾರು 5 ಲಕ್ಷ ಮೌಲ್ಯದ ಅರೆ-ಸಿದ್ಧ ನಾಣ್ಯಗಳು ಹಾಗೂ ಆರು ನಾಣ್ಯ ತಯಾರಿಕಾ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರಲ್ಲಿ ಜಾಲದ ಪ್ರಮುಖ ಆರೋಪಿ ಎನ್ನಲಾದ ಉಪ್ಕರ್ ಲುತ್ರಾ ಅಲಿಯಾಸ್ ಅಭಯ್ ಪ್ರತಾಪ್ ಸಿಂಗ್ ಕೂಡ ಇದ್ದಾನೆ. 50ರ ಹರೆಯದ ಲುತ್ರಾ ಮೊಹಾಲಿಯ ಮಾಜಿ ಚಿನ್ನದ ಕೆಲಸಗಾರನಾಗಿದ್ದು, 2001ರಿಂದ ನಕಲಿ ನಾಣ್ಯಗಳ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಾಗಿರುವ ಇತರ ನಾಲ್ವರನ್ನು ಸಹಾರನ್‌ಪುರದ ಹಿಮಾಂಶು ಅಲಿಯಾಸ್ ಗುಲ್ಲು, ಮುಜಫರ್‌ನಗರದ ಕುಲದೀಪ್, ಭದೋಹಿಯ ಅನುರಾಗ್ ಪಾಲ್ ಅಲಿಯಾಸ್ ಲಂಕೇಶ್ ಮತ್ತು ಬಿಹಾರದ ಸಂತೋಷ್ ಚೌರಾಸಿಯಾ ಅಲಿಯಾಸ್ ಜನಾರ್ದನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಬೀದಿಗೆ ಬಂದ ಪೆಟ್ ಡಾಗ್ ಜಗಳ: ಲಿಫ್ಟ್ ಒಳಗೆ ಮಹಿಳೆಯರ ನಡುವೆ ಜಗಳ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
ಈವರೆಗೆ ಬರೋಬ್ಬರಿ 3.5 ಕೋಟಿ ನಕಲಿ ನಾಣ್ಯಗಳನ್ನು ತಯಾರಿ ಮಾಡಿರುವ ಗ್ಯಾಂಗ್ ಇವುಗಳ ತಯಾರಿಕೆಗಾಗಿ ಸುಮಾರು 17.50 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆರೋಪಿಗಳು ನಕಲಿ ನಾಣ್ಯಗಳ ಮೂಲಕ 52.50 ಕೋಟಿ ಲಾಭ ಗಳಿಸಿರುವ ಆರೋಪವಿದ್ದು, ಈ ನಾಣ್ಯಗಳನ್ನು ಕಮಿಷನ್ ಆಧಾರದ ಮೇಲೆ ಮದ್ಯದಂಗಡಿಗಳು, ಟೋಲ್ ಪ್ಲಾಜಾಗಳು ಮತ್ತು ಕಿರಾಣಿ ಅಂಗಡಿಗಳ ಮೂಲಕ ಚಲಾವಣೆಗೆ ಬಿಡಲಾಗುತ್ತಿತ್ತು. ಈ ಪೈಕಿ ಮದ್ಯದಂಗಡಿಗಳೇ ಜಾಲದ ಪ್ರಮುಖ ಮಾರುಕಟ್ಟೆಯಾಗಿದ್ದವು ಎಂಬುದು ತನಿಖೆ ವೇಳೆ ಬಯಲಾಗಿದೆ.
ಪೊಲೀಸರ ಪ್ರಕಾರ, ಈ ಜಾಲವು ಈ ಹಿಂದೆ ಹರಿಯಾಣದಲ್ಲಿ ನಕಲಿ ನಾಣ್ಯ ತಯಾರಿಕಾ ಘಟಕ ನಡೆಸುತ್ತಿತ್ತು. ಇದೀಗ ಕಾರ್ಯಾಚರಣೆಯನ್ನು ಸಹಾರನ್‌ಪುರಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಿತ್ತು. ವಶಪಡಿಸಿಕೊಂಡ ಯಂತ್ರಗಳು ಕೂಡ ಈ ಹಿಂದೆ ಬಳಸಲಾಗಿದ್ದವು. ಜಾಲದಲ್ಲಿದ್ದ ಎಂಟು ಸದಸ್ಯರಿಗೆ ವಿಭಿನ್ನ ಜವಾಬ್ದಾರಿಗಳನ್ನು ನೀಡಲಾಗಿತ್ತು. ಕೆಲವರು ಯಂತ್ರೋಪಕರಣಗಳನ್ನು ವ್ಯವಸ್ಥೆ ಮಾಡುವುದು ಹಾಗೂ ಉತ್ಪಾದನೆಯ ಮೇಲ್ವಿಚಾರಣೆ ಮಾಡುತ್ತಿದ್ದರು. ಇನ್ನು ಕೆಲವರು ಸಿದ್ಧಪಡಿಸಿದ ನಾಣ್ಯಗಳನ್ನು ಏಜೆಂಟ್‌ಗಳಿಗೆ ಪೂರೈಸಿ, ಮಾರುಕಟ್ಟೆಯಲ್ಲಿ ಚಲಾವಣೆಗೆ ಬಿಡುವ ಜವಾಬ್ದಾರಿ ಹೊಂದಿದ್ದರು. ಜಾಲದ ಯಾವುದೇ ಒಬ್ಬ ಸದಸ್ಯ ಸಿಕ್ಕಿಬಿದ್ದರೂ ಇಡೀ ಜಾಲ ಬಯಲಾಗದಂತೆ ಈ ವ್ಯವಸ್ಥೆ ಮಾಡಲಾಗಿತ್ತು .
ಆರೋಪಿಗಳ ಹೇಳಿಕೆ ಪ್ರಕಾರ, ಒಂದು ನಕಲಿ ನಾಣ್ಯ ತಯಾರಿಸಲು 5ರಿಂದ 6 ರೂ. ವೆಚ್ಚವಾಗುತ್ತಿತ್ತು. ಬಳಿಕ ಅವುಗಳನ್ನು ಏಜೆಂಟ್‌ಗಳಿಗೆ ತಲಾ 12ರಿಂದ 15ರೂ.ಗಳಿಗೆ ಪೂರೈಸಲಾಗುತ್ತಿತ್ತು. ಮತ್ತೊಂದೆಡೆಚ ಯಂತ್ರಗಳನ್ನು ಎಲ್ಲಿಂದ ಖರೀದಿಸಲಾಗಿತ್ತು ಮತ್ತು ಸಹಾರನ್‌ಪುರದಲ್ಲಿ ಯಾವ ಸ್ಥಳದಲ್ಲಿ ಹೊಸ ಘಟಕ ಸ್ಥಾಪಿಸಲು ಜಾಲ ಯೋಜಿಸಿತ್ತು ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ವಶಪಡಿಸಿಕೊಂಡ ಎಂಟು ಮೊಬೈಲ್ ಫೋನ್‌ಗಳು, ಏಳು ಖಾತೆ ನೋಂದಣಿ ಪುಸ್ತಕಗಳು ಹಾಗೂ ಇತರ ದಾಖಲೆಗಳ ಆಧಾರದ ಮೇಲೆ ಜಾಲದ ಪೂರೈಕೆ ವ್ಯವಸ್ಥೆಯನ್ನೂ ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:53 pm, Mon, 14 September 26