ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಜನರ ದಾರಿತಪ್ಪಿಸುವ ಜಾಹೀರಾತು: ಎರಡು ಕೋಚಿಂಗ್ ಸಂಸ್ಥೆಗೆ 7 ಲಕ್ಷ ರೂ. ದಂಡ

ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ದಾರಿತಪ್ಪಿಸುವ ಜಾಹೀರಾತು ನೀಡಿದ 'ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್‌'ಗೆ 7 ಲಕ್ಷ ರೂ. ದಂಡ ವಿಧಿಸಿದೆ. ಉಚಿತ ಸಂದರ್ಶನ ಮಾರ್ಗದರ್ಶನ ಪಡೆದವರನ್ನು ಪೂರ್ಣಾವಧಿ ವಿದ್ಯಾರ್ಥಿಗಳೆಂದು ಬಿಂಬಿಸಿ, ಪ್ರಮುಖ ಮಾಹಿತಿ ಮರೆಮಾಚಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಸಿಸಿಪಿಎ 60ಕ್ಕೂ ಹೆಚ್ಚು ಕೋಚಿಂಗ್ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಿದೆ.

ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಜನರ ದಾರಿತಪ್ಪಿಸುವ ಜಾಹೀರಾತು: ಎರಡು ಕೋಚಿಂಗ್ ಸಂಸ್ಥೆಗೆ 7 ಲಕ್ಷ ರೂ. ದಂಡ
ಯುಪಿಎಸ್​ಸಿ
Image Credit source: NDTV

Updated on: May 30, 2026 | 3:17 PM

ನವದೆಹಲಿ, ಮೇ 30: ಯುಪಿಎಸ್‌ಸಿ (UPSC) ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ದಾರಿತಪ್ಪಿಸುವ ಜಾಹೀರಾತು ನೀಡಿದ ಪ್ರಮುಖ ಕೋಚಿಂಗ್ ಸಂಸ್ಥೆ ‘ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್’ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 7 ಲಕ್ಷ ರೂ. ದಂಡ ವಿಧಿಸಿದೆ. ಗ್ರಾಹಕ ರಕ್ಷಣಾ ಕಾಯ್ದೆ 2019ರ ಉಲ್ಲಂಘನೆ ಮತ್ತು ಉದ್ದೇಶಪೂರ್ವಕವಾಗಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ನೇತೃತ್ವದ ಪೀಠವು ಈ ಆದೇಶವನ್ನು ಹೊರಡಿಸಿದೆ.

ದಂಡ ವಿಧಿಸಲು ಮುಖ್ಯ ಕಾರಣಗಳೇನು?
ಮಾಹಿತಿ ಮರೆಮಾಚುವಿಕೆ: 2023ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಹೆಸರು ಮತ್ತು ಫೋಟೋಗಳನ್ನು ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ದೊಡ್ಡದಾಗಿ ಪ್ರದರ್ಶಿಸಿತ್ತು. ಆದರೆ, ಆ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಯಾವ ಕೋರ್ಸ್ ಪಡೆದಿದ್ದರು ಎಂಬ ನಿಖರ ಮಾಹಿತಿಯನ್ನು ಮರೆಮಾಚಿತ್ತು.

ದಾರಿತಪ್ಪಿಸುವ ತಂತ್ರ: ಅಭ್ಯರ್ಥಿಗಳು ಕೇವಲ ಉಚಿತ ಸಂದರ್ಶನ ಮಾರ್ಗದರ್ಶನ (IGP)ಪಡೆದಿದ್ದರೂ, ಅವರು ಸಂಸ್ಥೆಯಲ್ಲೇ ಪೂರ್ಣಾವಧಿ ಹಣ ಪಾವತಿಸಿ ಓದಿದ ವಿದ್ಯಾರ್ಥಿಗಳು ಎನ್ನುವಂತೆ ಬಿಂಬಿಸಿ ಗ್ರಾಹಕರನ್ನು ದಾರಿತಪ್ಪಿಸಲಾಗಿತ್ತು.

ಹಕ್ಕುಗಳ ಉಲ್ಲಂಘನೆ: ಎರಡು ಕಠಿಣ ಹಂತಗಳನ್ನು ಸ್ವಂತವಾಗಿ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಕೇವಲ ಸಂದರ್ಶನದ ವೇಳೆ ಮಾರ್ಗದರ್ಶನ ನೀಡಿ, ಇಡೀ ಯಶಸ್ಸು ತಮ್ಮದೇ ಎಂದು ತೋರಿಸಿಕೊಳ್ಳುವುದು ಕಾನೂನುಬಾಹಿರ. ಇದು ವಿದ್ಯಾರ್ಥಿಗಳಿಗೆ ‘ಮಾಹಿತಿ ಪಡೆಯುವ ಹಕ್ಕಿನ’ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಸಿಪಿಎ ಹೇಳಿದೆ.

ಮತ್ತಷ್ಟು ಓದಿ: ಮಿಡಲ್ ಕ್ಲಾಸ್ ಹುಡುಗ UPSC ಪರೀಕ್ಷೆ ಪಾಸ್ ಮಾಡಿದ್ಹೇಗೆ? ಟಿವಿ9 ಜತೆ ಮನದಾಳ ಬಿಚ್ಚಿಟ್ಟ ಟಾಪರ್

60ಕ್ಕೂ ಹೆಚ್ಚು ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದ ಸಿಸಿಪಿಎ
ತರಬೇತಿ ವಲಯದಲ್ಲಿ ಪಾರದರ್ಶಕತೆ ತರಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಲು ಸಿಸಿಪಿಎ ದೇಶಾದ್ಯಂತ ಭಾರಿ ಕಾರ್ಯಾಚರಣೆ ನಡೆಸುತ್ತಿದೆ.

ದಾರಿತಪ್ಪಿಸುವ ಜಾಹೀರಾತು ನೀಡಿದ ಐಐಟಿ-ಜೆಇಇ (IIT-JEE), ನೀಟ್ (NEET), ಆರ್‌ಬಿಐ (RBI) ಮತ್ತು ಯುಪಿಎಸ್‌ಸಿ ತರಬೇತಿ ನೀಡುವ 60 ಕ್ಕೂ ಹೆಚ್ಚು ಕೋಚಿಂಗ್ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಇದುವರೆಗೆ ಇಂತಹ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಒಟ್ಟು 1.46 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದೆ.

ಸಿಸಿಪಿಎ ಸಂದೇಶ: ಯಾವುದೇ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಅಲ್ಲಿನ ಕೋರ್ಸ್‌ಗಳ ಬಗ್ಗೆ ನಿಖರ ಮತ್ತು ಪಾರದರ್ಶಕ ಮಾಹಿತಿ ಪಡೆಯುವ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us