ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಭರತ ಉಪಖಂಡದಲ್ಲಿ ಅದೇನೋ ಸಂಚಲನ. ಅಮೆರಿಕ ಅಧ್ಯಕ್ಷರಿಗೆ ಸ್ವಾಗತ ಕೋರಲು ಅದೇನೋ ಕೌತುಕ. ಅಂದಹಾಗೆ ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಎಂಟ್ರಿ ಕೊಡಲಿದ್ದಾರೆ. ಹೀಗಾಗಿ ಜಗತ್ತಿನ ಶಕ್ತಿಶಾಲಿ ರಾಷ್ಟ್ರದ, ಶಕ್ತಿಶಾಲಿ ನಾಯಕನ ಸ್ವಾಗತಕ್ಕೆ ವೇದಿಕೆ ಸಿದ್ಧಗೊಂಡಿದೆ.
ಅಮೆರಿಕ ಅನ್ನೋ ಹೆಸರಿನಲ್ಲೇ ಅದ್ಭುತ ಶಕ್ತಿ ಇದೆ. ಇಡೀ ಜಗತ್ತನ್ನ ಆಳುವ ತಾಕತ್ತು ಆ ದೇಶಕ್ಕಿದೆ. ಶತಮಾನ ಉರುಳಿದರೂ ಅಮೆರಿಕ ದೈತ್ಯ ಶಕ್ತಿಯಾಗಿ ಉಳಿದಿದೆ. ಇದೇ ಕಾರಣಕ್ಕೆ ವಿಶ್ವದ ದೊಡ್ಡಣ್ಣನ ಬಗ್ಗೆ ಇನ್ನೂ ಭಯ, ಭಕ್ತಿ ಜಗತ್ತಿನ ರಾಷ್ಟ್ರಗಳಲ್ಲಿ ಬೇರೂರಿದೆ. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವ್ರ ಚೊಚ್ಚಲ ಭೇಟಿ ಇಡೀ ಜಗತ್ತಿನ ಗಮನ ಸೆಳೆದಿದೆ. ಸದ್ಯದ ಬೆಳವಣಿಗೆಗಳು ಇಡೀ ಜಗತ್ತು ಭಾರತದ ಕಡೆ ಮುಖ ಮಾಡುವಂತೆ ಮಾಡಿದೆ.
‘ಭರತ ಖಂಡದಲ್ಲಿ’ ಡೊನಾಲ್ಡ್ ಟ್ರಂಪ್ ಹವಾ..!
ಯೆಸ್ ಇಡೀ ಭಾರತದ ತುಂಬಾ ಇದೀಗ ಡೊನಾಲ್ಡ್ ಟ್ರಂಪ್ ಅವರದ್ದೇ ಮಾತು. ಭಾರತಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿರೋ ಟ್ರಂಪ್, ಇಡೀ ಭಾರತದ ಗಮನ ಸೆಳೆದಿದ್ದಾರೆ. ಹೀಗಾಗಿ ಭರತ ಖಂಡದಲ್ಲಿ ಡೊನಾಲ್ಡ್ ಟ್ರಂಪ್ ಹವಾ ಸೃಷ್ಟಿಯಾಗಿದೆ. ಅಂದಹಾಗೆ ವಿಶ್ವದ ದೊಡ್ಡಣ್ಣ ಭಾರತಕ್ಕೆ ವಿಸಿಟ್ ಕೊಡ್ತಿದ್ರೆ ಸಾಮಾನ್ಯವಾಗಿ ತೆಗೆದುಕೊಳ್ಳೋದಕ್ಕೆ ಸಾಧ್ಯವಾಗೋದಿಲ್ಲ. ಇದೇ ಕಾರಣಕ್ಕೆ ಟ್ರಂಪ್ ಭೇಟಿಗೆ ವಿಶೇಷ ವ್ಯವಸ್ಥೆಗಳನ್ನ ಕೈಗೊಳ್ಳಲಾಗಿದೆ. 2 ದಿನಗಳಲ್ಲಿ ಟ್ರಂಪ್ ಎಲ್ಲೆಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ, ಅದರ ವೇಳಾಪಟ್ಟಿ ಹೇಗಿದೆ ಅನ್ನೋದನ್ನ ನೋಡೋದಾದ್ರೆ.
ಅಹಮದಾಬಾದ್ಗೆ ಟ್ರಂಪ್ ಎಂಟ್ರಿ
ಇಂದು ಗುಜರಾತ್ನ ಅಹಮದಾಬಾದ್ಗೆ ಟ್ರಂಪ್ ದಂಪತಿ ಆಗಮಿಸಲಿದ್ದು, ಮಧ್ಯಾಹ್ನ 12 ಗಂಟೆಗೆ ಅಮೆರಿಕ ಅಧ್ಯಕ್ಷರ ಏರ್ಫೋರ್ಸ್-1 ವಿಮಾನ ಲ್ಯಾಂಡ್ ಆಗಲಿದೆ. ಇನ್ನು ಸ್ವತಃ ಪಿಎಂ ಮೋದಿ ಅವರೇ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಸ್ವಾಗತವನ್ನು ಕೋರಲಿದ್ದಾರೆ. ಬಳಿಕ ಇಬ್ಬರೂ ನಾಯಕರು ವಿಮಾನ ನಿಲ್ದಾಣದಿಂದ ಸಬರಮತಿಗೆ ರೋಡ್ ಶೋ ಮೂಲಕ ತೆರಳಲಿದ್ದಾರೆ. 22 ಕಿಲೋಮೀಟರ್ ಮೋದಿ-ಟ್ರಂಪ್ ರೋಡ್ ಶೋ ನಡೆಯಲಿದೆ. ರಸ್ತೆ ಇಕ್ಕೆಲಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕಾಗಿ ರಸ್ತೆ ಬದಿ 50 ವೇದಿಕೆ ನಿರ್ಮಿಸಲಾಗಿದೆ.
ಮಹಾತ್ಮ ಗಾಂಧಿಗೆ ಟ್ರಂಪ್ ನಮನ..!
ಇನ್ನು ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿರೋ ಟ್ರಂಪ್, ಮಹಾತ್ಮ ಗಾಂಧಿ ಪುತ್ಥಳಿಗೆ ನಮನ ಸಲ್ಲಿಸಲಿದ್ದಾರೆ. ಆಶ್ರಮದ ವಸ್ತು ಸಂಗ್ರಹಾಲಯ ವೀಕ್ಷಿಸಲಿದ್ದಾರೆ.ಈ ವೇಳೆ ಪಿಎಂ ಮೋದಿ ಅಮೆರಿಕ ಅಧ್ಯಕ್ಷರಿಗೆ ಉಡುಗೊರೆಯಾಗಿ ಚರಕ ನೀಡಲಿದ್ದಾರೆ.
ಅತೀ ದೊಡ್ಡ ಸ್ಟೇಡಿಯಂನಲ್ಲಿ ಟ್ರಂಪ್ – ಮೋದಿ ಮೋಡಿ..!
ಸರ್ದಾರ್ ವಲ್ಲಭಾಯ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ. ಮೊಟೆರಾದಲ್ಲಿ ನಿರ್ಮಿಸಲಾಗಿರೋ ಈ ಕ್ರೀಡಾಂಗಣ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ. ಇಲ್ಲಿಗೆ ಮೋದಿ ಮತ್ತು ಟ್ರಂಪ್ ಜತೆಯಾಗಿ ಪ್ರಯಾಣಿಸಲಿದ್ದು, ಈ ವೇಳೆ ನೂತನ ಸ್ಟೇಡಿಯಂ ಅನ್ನ ಟ್ರಂಪ್ ಉದ್ಘಾಟಿಸಲಿದ್ದಾರೆ. ಬಳಿಕ 1 ಲಕ್ಷ 10 ಸಾವಿರಕ್ಕೂ ಅಧಿಕ ಮಂದಿ ಉಪಸ್ಥಿತಿಯಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಭಾಗಿಯಾಗಲಿದ್ದಾರೆ. ಈ ವೇಳೆ ಜನಸಾಗರವನ್ನುದ್ದೇಶಿಸಿ ಮೋದಿ, ಟ್ರಂಪ್ ಭಾಷಣ ಮಾಡಲಿದ್ದಾರೆ. ಇದಕ್ಕೂ ಮುನ್ನ ಬಾಲಿವುಡ್ ಸ್ಟಾರ್ಸ್ ಹಾಗೂ ಕಲಾವಿದರಿಂದ ಕಾರ್ಯಕ್ರಮವನ್ನ ಆಯೋಜನೆ ಮಾಡಲಾಗಿದೆ.
India looks forward to welcoming @POTUS @realDonaldTrump.
It is an honour that he will be with us tomorrow, starting with the historic programme in Ahmedabad! https://t.co/fAVx9OUu1j
— Narendra Modi (@narendramodi) February 23, 2020
‘ಪ್ರೇಮಸೌಧ’ದ ಸೌಂದರ್ಯ ಸವಿಯಲಿರುವ ಟ್ರಂಪ್..!
ಗುಜರಾತ್ನಲ್ಲಿ ಮೋದಿ ಜತೆ ಮಧ್ಯಾಹ್ನ ಭೋಜನ ಸವಿದು ಬಳಿಕ ಟ್ರಂಪ್ ನೇರವಾಗಿ ಉತ್ತರಪ್ರದೇಶದಲ್ಲಿದ ಆಗ್ರಾಗೆ ತೆರಳಲಿದ್ದಾರೆ. ಆಗ್ರಾದಲ್ಲಿ ಸಿಎಂ ಯೋಗಿಆದಿತ್ಯನಾಥ್ ಟ್ರಂಪ್ ದಂತಿಯನ್ನ ಬರಮಾಡಿಕೊಳ್ಳಲಿದ್ದಾರೆ. ಬಳಿಕ 45 ನಿಮಿಷಗಳ ಕಾಲ ಟ್ರಂಪ್ ದಂಪತಿ ತಾಜ್ಮಹಲ್ ಸೌಂದರ್ಯ ಸವಿಯಲಿದ್ದಾರೆ. ಆಗ್ರಾದಿಂದ ದೆಹಲಿಗೆ ತೆರಲಿರೋ ಟ್ರಂಪ್ ಐಷಾರಾಮಿ ಹೋಟೆಲ್ನಲ್ಲಿ ತಂಗಲಿದ್ದಾರೆ. ಇದಿಷ್ಟೂ ಇಂದಿನ ಕಾರ್ಯಕ್ರಮಗಳಾದ್ರೆ, ಇನ್ನು ನಾಳೆಯ ಪ್ರೋಗ್ರಾಮ್ನ ಲಿಸ್ಟ್ ನೋಡೋದಾದ್ರೆ.
ನಾಳೆ ಸಾಂಪ್ರದಾಯಿಕ ಸ್ವಾಗತ:
ಫೆಬ್ರವರಿ 25 ಅಂದ್ರೆ ನಾಳೆ ಬೆಳಗ್ಗೆ ಅಮೆರಿಕ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತ ನೀಡಲಾಗುತ್ತದೆ. ಬಳಿಕ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸಮಾಧಿಗೆ ಟ್ರಂಪ್ ನಮನ ಸಲ್ಲಿಸಲಿದ್ದಾರೆ. ನಂತರ ಹೈದರಾಬಾದ್ ಹೌಸ್ಗೆ ಆಗಮಿಸಲಿರೋ ಟ್ರಂಪ್ ಪ್ರಧಾನಿ ಮೋದಿ ಜತೆ ದ್ವಿಪಕ್ಷೀಯ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಇಬ್ಬರೂ ನಾಯಕರ ಉಪಸ್ಥಿತಿಯಲ್ಲಿ ಭಾರತ-ಅಮೆರಿಕ ನಿಯೋಗ ಮಟ್ಟದ ಮಾತುಕತೆ ನಡೆಯಲಿದೆ. ಇದೇ ಸಂದರ್ಭದಲ್ಲಿ 24 MH -60R ಸೀಹಾಕ್ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಹಿ ಹಾಕೋ ಸಾಧ್ಯತೆ ಇದೆ. ವ್ಯಾಪಾರ ವಹಿವಾಟು, ರಕ್ಷಣೆ ಕರಿತು ಚರ್ಚೆ ನಡೆಯಲಿದೆ. ನಂತರ ದೆಹಲಿಯ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಅಮೆರಿಕ ಮತ್ತು ಭಾರತೀಯ ಉದ್ಯಮಿಗಳ ಜತೆ ಟ್ರಂಪ್ ರೌಂಡ್ಟೇಬಲ್ ಮೀಟಿಂಗ್ ನಡೆಸಲಿದ್ದಾರೆ.
ದೆಹಲಿ ಶಾಲೆಗೆ ಟ್ರಂಪ್ ಪತ್ನಿ ವಿಸಿಟ್..!
ಒಂದ್ಕಡೆ ಟ್ರಂಪ್ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದರೆ. ಇತ್ತ ಅಮೆರಿಕ ಅಧ್ಯಕ್ಷರ ಪತ್ನಿ ಮೆಲಾನಿಯಾ ಟ್ರಂಪ್, ದೆಹಲಿಯ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಭಾರತೀಯ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಷ್ಟೆಲ್ಲಾ ಕಾರ್ಯಕ್ರಮಗಳ ನಂತರ ನಾಳೆ ರಾತ್ರಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಔತಣಕೂಟವನ್ನು ಮುಗಿಸಿ ಟ್ರಂಪ್ ದಂಪತಿ ಮಂಗಳವಾರ 10 ಗಂಟೆ ಸುಮಾರಿಗೆ ಮರಳಿ ಅಮೆರಿಕದತ್ತ ಪ್ರಯಾಣ ಬೆಳೆಸಲಿದ್ದಾರೆ.
ಒಟ್ನಲ್ಲಿ ವಿಶ್ವದ ದೊಡ್ಡಣ್ಣನ ಭೇಟಿ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟ್ರಂಪ್ ಭೇಟಿ ಸಂದರ್ಭ ಯಾವುದೇ ಕುಂದು ಕೊರತೆ ಉಂಟಾಗದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ. ಇಡೀ ವಿಶ್ವವೇ ಈ ಭೇಟಿಯನ್ನ ಎದುರು ನೋಡುತ್ತಿದ್ದು, ಜಗತ್ತಿನ ಗಮನ ಭಾರತದತ್ತ ನೆಟ್ಟಿದೆ.
Departing for India with Melania! pic.twitter.com/sZhb3E1AoB
— Donald J. Trump (@realDonaldTrump) February 23, 2020