ಉತ್ತರಪ್ರದೇಶದಲ್ಲಿ ವಿಧಾನಸಭೆ ಚುನಾವಣೆ (Uttar Pradesh Assembly Election 2022) ಮುಂದಿನ ವರ್ಷ ನಡೆಯಲಿದೆ. 2022ರ ಚುನಾವಣೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath ತಮ್ಮ ಹೋಂ ಟೌನ್ ಆದ ಗೋರಖ್ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಅವರು ಗೋರಖ್ಪುರದಿಂದ ಸ್ಪರ್ಧೆಗೆ ನಿಲ್ಲುತ್ತಿಲ್ಲ. ಬದಲಿಗೆ ಅಯೋಧ್ಯೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಭಾನುವಾರ ಮಾತನಾಡಿದ ಅಯೋಧ್ಯೆ ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ, ನಾನು ಮುಖ್ಯಮಂತ್ರಿಯವರಿಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದೂ ಹೇಳಿದ್ದಾರೆ.
ಒಂದೊಮ್ಮೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸಲು ಮುಂದಾದರೆ ಖಂಡಿತ ಕ್ಷೇತ್ರವನ್ನು ಬಿಟ್ಟುಕೊಡುತ್ತೇನೆ. ಇದು ನನಗೆ ಮತ್ತು ಅಯೋಧ್ಯೆ ಜನರ ಪಾಲಿಗೆ ಹೆಮ್ಮೆ ಮತ್ತು ಅದೃಷ್ಟದ ವಿಷಯ. ಯಾರು, ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಆದರೆ ಅಯೋಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರ ಪ್ರಥಮ ಆದ್ಯತೆ ಎಂದು ಹೇಳಿದ್ದಾರೆ.
ಒಂದೊಮ್ಮೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸುವುದಾದರೆ ನಾವೆಲ್ಲ ಸೇರಿ ಅವರ ಪರವಾಗಿ ಪ್ರಚಾರ ನಡೆಸುತ್ತೇವೆ. ಖಂಡಿತ ಮುಂದಿನ ಬಾರಿಯೂ ಉತ್ತರಪ್ರದೇಶದಲ್ಲಿ ಬಿಜೆಪಿಯೇ ಆಡಳಿತ ಹಿಡಿಯುತ್ತದೆ ಎಂದಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಕ್ಷಗಳ ಪ್ರತಿಕ್ರಿಯೆ
ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷಗಳು ಪ್ರತಿಕ್ರಿಯಿಸಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಯೋಧ್ಯೆಯಿಂದ ಸ್ಪರ್ಧಿಸಲಿ ಎಂದು ಬಯಸುತ್ತಿರುವ ಬಿಜೆಪಿ ಶಾಸಕರು ನಮ್ಮ ಪ್ರಶ್ನೆಗೆ ಉತ್ತರಿಸಬೇಕು. ಕಳೆದ ನಾಲ್ಕು ವರ್ಷಗಳಲ್ಲಿ ಯೋಗಿ ಜೀ ಅವರು ಅಯೋಧ್ಯೆ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂಬುದನ್ನು ಹೇಳಬೇಕು ಎಂದು ಕಾಂಗ್ರೆಸ್ ವಕ್ತಾರ ಸುರೇಂದ್ರ ರಜಪೂತ್ ಕೇಳಿದ್ದಾರೆ. ಅಯೋಧ್ಯೆಯಲ್ಲಿ ಎಷ್ಟು ಜನರಿಗೆ ಉದ್ಯೋಗ ನೀಡಲಾಗಿದೆ? ಇಲ್ಲಿನ ಅದೆಷ್ಟು ಹಳ್ಳಿಗಳಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗಿದೆ? ಇಲ್ಲಿನ ಹಳ್ಳಿಗಳಲ್ಲಿ ಅದೆಷ್ಟು ಜನರು ಕೊವಿಡ್ 19ನಿಂದ ಮೃತಪಟ್ಟಿದ್ದಾರೆ? ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಏನೆಲ್ಲ ಕ್ರಮ ಕೈಗೊಳ್ಳಲಾಗಿದೆ? ಎಂದೂ ಪ್ರಶ್ನಿಸಿದ್ದಾರೆ.
ಹಾಗೇ, ಸಮಾಜವಾದಿ ಪಕ್ಷದ ವಕ್ತಾರ ಜೂಹಿ ಸಿಂಗ್ ಕೂಡ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. 2017ರಿಂದಲೂ ಇಲ್ಲಿಯವರೆಗೆ ಪ್ರಸ್ತುತ ಸರ್ಕಾರವನ್ನು ಸೂಕ್ಷ್ಮವಾಗಿ ಜನರು ಗಮನಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಿರುದ್ಯೋಗ ಹೆಚ್ಚಿದೆ. ಉತ್ತರಪ್ರದೇಶದಾದ್ಯಂತ ಅತ್ಯಾಚಾರ ಹೆಚ್ಚುತ್ತಿದ್ದರೂ ಅದರ ವಿರುದ್ಧ ಯೋಗಿ ಆದಿತ್ಯನಾಥ್ ಕ್ರಮ ಕೈಗೊಂಡಿಲ್ಲ ಏಕೆ ಎಂಬ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.
ಇದನ್ನೂ ಓದಿ: Healthy Heart: ಹೃದಯ ಬಡಿತದ ಮೇಲೆ ನಮ್ಮ ಆರೋಗ್ಯ ನಿಂತಿದೆ; ಈ ರೋಗ ಲಕ್ಷಣಗಳ ಬಗ್ಗೆ ಸದಾ ಎಚ್ಚರ ವಹಿಸಿ
Uttar Pradesh Assembly Election 2022 CM Yogi Adityanath may contest from Ayodhya