ದೆಹಲಿ: ರಾಷ್ಟ್ರ ರಾಜಧಾನಿಯ ಆಸ್ಪತ್ರೆಗಳಲ್ಲಿ ಖಾಲಿ ಬೆಡ್ಗಳ ಸಂಖ್ಯೆ ಹೆಚ್ಚಾಗಿರುವುದು ಕೊವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದನ್ನು ತಿಳಿಸುತ್ತಿದೆ. ಪ್ರತಿನಿತ್ಯ ಕೊರೊನಾ ಸೋಂಕಿಗೆ ಬಲಿಯಾಗುತ್ತಿರುವರು ಮತ್ತು ಸಕಾರಾತ್ಮಕ ಪ್ರಕರಣಗಳಿಂದ ನರಳುತ್ತಿರುವವರನ್ನು ನೋಡುತ್ತಿದ್ದ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಕೊಂಚ ಬಿಡುವು ಸಿಕ್ಕಂತಾಗಿದೆ. ನಿನ್ನೆ ಮಂಗಳವಾರ ಲಭ್ಯವಿರುವ ಆಸ್ಪತ್ರೆಯ ಒಟ್ಟು 14,805 ಬೆಡ್ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಉಳಿದ 12,907 ಬೆಡ್ಗಳು ಖಾಲಿ ಇವೆ.
ದೆಹಲಿಯಲ್ಲಿ ಕಳೆದ ದೆಲವು ದಿನಗಳಿಂದ ಕೊವಿಡ್-19 ಪ್ರಕರಣಗಳು ಅಥವಾ ಕೊವಿಡ್ ಪಾಸಿಟಿವ್ ವರದಿಯ ಪ್ರಮಾಣವು ಇಳಿಕೆ ಕಂಡು ಬಂದಿದ್ದು, ದೆಹಲಿಯ ಪರಿಸ್ಥಿತಿ ಸುಧಾರಣೆಯತ್ತ ಸಾಗುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದೆ. ರಾಷ್ಟ್ರ ರಾಜಧಾನಿ ಮಂಗಳವಾರ 4,482 ಕೊವಿಡ್-19 ಪ್ರಕರಣಗಳನ್ನು ವರದಿ ಮಾಡಿದೆ. ಏಪ್ರಿಲ್ 5ರಿಂದೀಚೆಗೆ ಅತಿ ಕಡಿಮೆ ಪ್ರಕರಣಗಳ ಸಂಖ್ಯೆ ದಾಖಲಿಸಿದ ದಿನ ಇದಾಗಿದೆ. ಪರಿಶೀಲನೆಯ ಪ್ರಕಾರ ಸಕಾರಾತ್ಮಕ ಪ್ರಮಾಣವು ಶೇ. 6.89 ರಷ್ಟು ಇಳಿಕೆಯಾಗಿದೆ.
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ರೋಗಿಗಳಿಗೆ ಐಸಿಯು ಹಾಸಿಗೆ ಬೇಕೆಂದು ಕರೆ ಮಾಡುತ್ತಿದ್ದ ಪ್ರಮಾಣವೂ ಕೂಡಾ ಇಳಿಕೆ ಕಂಡಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗಳು ಲಭ್ಯವಿದೆ. ದೆಹಲಿಯಲ್ಲಿ ಚೇತರಿಕೆಯ ಪ್ರಮಾಣವನ್ನು ನೋಡಬಹುದು. ಕೊವಿಡ್ ಆರೈಕೆ ಸೌಲಭ್ಯಗಳಲ್ಲಿ ಖಾಲಿ ಹುದ್ದೆಗಳ ಪ್ರಮಾಣವು ಹೆಚ್ಚುತ್ತಿರುವುದನ್ನು ಕಾಣಬಹುದು ಎಂದು ಹಿರಿಯ ಅಧಿಕಾರಿಯೋರ್ವರು ಎನ್ಡಿಟಿವಿ ಸುದ್ದಿ ಸಂಸ್ಥೆಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನಿನ್ನೆ ಮಂಗಳವಾರ, ಚೇತರಿಕೆಯ ಪ್ರಮಾಣ ಶೇ. 94.37ರಷ್ಟಿತ್ತು. ಕಳೆದ ಒಂದು ದಿನದಲ್ಲಿ 9,403 ರೋಗಿಗಳು ಗುಣಮುಖರಾಗಿದ್ದಾರೆ. ಇದೀಗ ಪ್ರಸ್ತುತದಲ್ಲಿ 50,863 ಕೊವಿಡ್ ಪ್ರಕರಣಗಳಿವೆ.
ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಈ ಮೊದಲು ಪ್ರತಿನಿತ್ಯ 2,000 ದೂರವಾಣಿ ಕರೆಗಳು ಬರುತ್ತಿದ್ದವು. ಆದರೆ ಇದೀಗ ಪ್ರತಿನಿತ್ಯ 500-600 ಕರೆಗಳು ಬರುತ್ತವೆ. ಅವುಗಳಲ್ಲಿ ಹೆಚ್ಚಿನ ಕರೆಗಳು ಐಸಿಯು ಬೆಡ್ಗಳ ಬೇಡಿಕೆಯ ಕರೆಗಳಾಗಿವೆ ಎಂದು ಕೊವಿಡ್ ಆರೈಕೆ ಸೌಲಭ್ಯದ ಉಸ್ತುವಾರಿ ಅಧಿಕಾರಿಯೊಬ್ಬರು ಮಾಹಿತಿ ತಿಳಿಸಿದ್ದಾರೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್ಡಿಒ) ಮೊದಲಿಗಿಂತ ಇದೀಗ ಖಾಲಿ ಇರುವ ಬೆಡ್ಗಳು ಹೆಚ್ಚಿವೆ. ಈ ಮೊದಲು ಬೆಡ್ಗಳ ಸಂಖ್ಯೆಯನ್ನು ಹೆಚ್ಚಿಸುವುದರ ಕುರಿತಾಗಿ ಯೋಚಿಸಿದ್ದೆವು. ಆದರೆ ಇದೀಗ ಚೇತರಿಕೆ ಕಂಡು ಬಂದಿರುವುದರಿಂದ ಆ ಯೋಚನೆ ನಮಗಿಲ್ಲ. ಸೌಲಭ್ಯವಿದ್ದ ಒಟ್ಟು 500 ಬೆಡ್ಗಳಲ್ಲಿ 269 ಬೆಡ್ಗಳು ಖಾಲಿಯೇ ಇವೆ ಎಂದು ರಕ್ಷಣಾ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇನ್ನು, ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕೊವಿಡ್ ಕೇರ್ ಸೆಂಟರ್ನಲ್ಲಿ, ಒಟ್ಟು ಇದ್ದ 800 ಬೆಡ್ಗಳಲ್ಲಿ, ಇದೀಗ 62 ಬೆಡ್ಗಳಲ್ಲಿ ಸೋಂಕಿಗೆ ತುತ್ತಾದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಷ್ಟೂ ಬೆಡ್ಗಳು ಖಾಲಿ ಇವೆ. ಈ ಮೊದಲು ಸಾಕಷ್ಟು ಪ್ರಶ್ನೆಗಳಿದ್ದವು, ಆದರೆ ಅವೆಲ್ಲವೂ ಕಡಿಮೆ ಆಗಿದೆ ಎಂದು ಕೊವಿಡ್ ಸೆಂಟರ್ ಸೌಲಭ್ಯದ ಉಸ್ತುವಾರಿ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನು, ಕಾಮನ್ ವೆಲ್ತ್ ಗೇಮ್ಸ್ ವಿಲೇಜ್ ಕೊವಿಡ್ ಕೇರ್ ಸೆಂಟರ್ನಲ್ಲಿ, ಈ ಮೊದಲಿ ಪ್ರತಿನಿತ್ಯ 25 ಸಾವಿರ ಕೊರೊನಾ ಸೋಂಕು ಪ್ರಕರಣ ವರದಿಯಾಗುತ್ತಿದ್ದ ಸಮಯದಲ್ಲಿ 450ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಲಾಗಿದೆ. ಇದೀಗ 61 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೇರ್ ಸೆಂಟರ್ ಉಸ್ತುವಾರಿ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊವಿಡ್ ಪ್ರಕರಣಗಳ ಸಮಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೊವಿಡ್ ಕೇರ್ ಸೆಂಟರ್ಗಳನ್ನು ಹೆಚ್ಚು ತೆರೆಯುವತ್ತ ಸರ್ಕಾರ ಗಮನಹರಿಸಿತು. ಜತೆಗೆ ಜಾರಿಯಲ್ಲಿರುವ ಲಾಕ್ಡೌನ್ನಿಂದಾಗಿ ಕೊರೊನಾ ಸೋಂಕು ಪ್ರಕರಣಗಳು ನಿಧಾನವಾಗಿ ಇಳಿಕೆಯತ್ತ ಸಾಗುತ್ತಿದೆ.
ಇದನ್ನೂ ಓದಿ: Coronavirus Cases in India: ಒಂದೇ ದಿನ 4529 ಕೊವಿಡ್ ರೋಗಿಗಳು ಸಾವು, 200 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಇಳಿಕೆ
Published On - 11:04 am, Wed, 19 May 21