ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಬಿಜೆಪಿ ಕಚೇರಿ, ಕಾರ್ಯಕರ್ತರ ಮನೆಗಳಿಗೆ ಬೆಂಕಿ: ಟಿಎಂಸಿಯೇ ಹೊಣೆ ಎಂದು ಬಿಜೆಪಿ ಆರೋಪ

|

Updated on: May 02, 2021 | 10:48 PM

ಬಿಜೆಪಿಯ ಮಹಿಳಾ ಕಾರ್ಯಕರ್ತೆಯರ ಮೇಲೆಯೂ ಟಿಎಂಸಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಆರಂಭಗಡ, ಬಿಷ್ಣುಪುರ, ಎಂಟಲಿ, ಹೌರಾ ಮತ್ತು ಬೋಲ್​ಪುರ ಪಟ್ಟಣಗಳಲ್ಲಿ ಹಿಂಸಾಚಾರ ನಡೆದಿದೆ ಎಂದು ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ, ಬಿಜೆಪಿ ಕಚೇರಿ, ಕಾರ್ಯಕರ್ತರ ಮನೆಗಳಿಗೆ ಬೆಂಕಿ: ಟಿಎಂಸಿಯೇ ಹೊಣೆ ಎಂದು ಬಿಜೆಪಿ ಆರೋಪ
ಪಶ್ಚಿಮ ಬಂಗಾಳದ ಆರಂಭಗಡದಲ್ಲಿ ಬೆಂಕಿಗೆ ಆಹುತಿಯಾದ ಟಿಎಂಸಿ ಕಚೇರಿ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಸ್ಪಷ್ಟ ಮುನ್ನಡೆ ದಾಖಲಿಸಿದ ನಂತರ ರಾಜ್ಯದಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ. ಬಿಜೆಪಿಯ ಕಚೇರಿ ಮತ್ತು ಕಾರ್ಯಕರ್ತರ ಮನೆಗಳ ಮೇಲೆ ಟಿಎಂಸಿ ಗೂಂಡಾಗಳು ದಾಳಿ ನಡೆಸಿ, ಬೆಂಕಿ ಹಚ್ಚಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇರ ಆರೋಪ ಮಾಡಿದ್ದಾರೆ.

ನಮ್ಮ ಪಕ್ಷದ ಮಹಿಳಾ ಕಾರ್ಯಕರ್ತೆಯರ ಮೇಲೆಯೂ ಟಿಎಂಸಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಆರಂಭಗಡ, ಬಿಷ್ಣುಪುರ, ಎಂಟಲಿ, ಹೌರಾ ಮತ್ತು ಬೋಲ್​ಪುರ ಪಟ್ಟಣಗಳಲ್ಲಿ ಹಿಂಸಾಚಾರ ನಡೆದಿದೆ ಎಂದು ಸಂತೋಷ್ ಆರೋಪಿಸಿದ್ದಾರೆ. ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಹಿಂಸಾಚಾರಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ. ಈ ಆರೋಪಗಳನ್ನು ಟಿಎಂಸಿ ಸಾರಾಸಗಟಾಗಿ ನಿರಾಕರಿಸಿದೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಮತ್ತು ಇತರ ಹಲವು ಹಿರಿಯ ಪ್ರಭಾವಿ ನಾಯಕರು ಪಶ್ಚಿಮ ಬಂಗಾಳದಲ್ಲಿಯೇ ವಾಸ್ತವ್ಯ ಹೂಡಿ ಬಿರುಸಿನ ಪ್ರಚಾರ ನಡೆಸಿದರೂ ಪಶ್ಚಿಮ ಬಂಗಾಳದಲ್ಲಿ ಕಮಲ ಅರಳಿಸಲು ಸಾಧ್ಯವಾಗಿರಲಿಲ್ಲ. ಪಶ್ಚಿಮ ಬಂಗಾಳದ ಚುನಾವಣೆ ಫಲಿತಾಂಶಗಳು ಪ್ರಕಟವಾದ ಬೆನ್ನಿಗೇ ಹಿಂಸಾಚಾರದ ಘಟನೆಗಳು ವರದಿಯಾಗಿವೆ.

ಬಿಜೆಪಿಯ ಪ್ರಬಲ ಸವಾಲಿನ ನಡುವೆಯೂ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ 219 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. ಬಿಜೆಪಿಯು ಕೇವಲ 71 ಸ್ಥಾನಗಳಲ್ಲಿ ಮುಂದಿದ್ದು, ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಬೇಕಾಗಿದೆ. ಚುನಾವಣಾ ಆಯೋಗವು ಗೆಲುವಿನ ಘೋಷಣೆ ಮಾಡಿದ ನಂತರ ಟಿಎಂಸಿ ಕಾರ್ಯಕರ್ತರು ಹಲವೆಡೆ ವಿಜಯೋತ್ಸವದ ಮೆರವಣಿಗೆಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಹಿಂಸಾಚಾರಗಳು ವರದಿಯಾಗಿವೆ. ದೇಶದಲ್ಲಿ ಕೊರೊನಾ 2ನೇ ಅಲೆ ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ವಿಜಯೋತ್ಸವಗಳನ್ನು ನಡೆಸುವಂತಿಲ್ಲ ಎಂದು ನಿರ್ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

(Violence Breaks out in West Bengal After Declaration of Results Bjp Alleges TMC Responsible for violence)

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: ಭಾರತದಲ್ಲಿ ಬಿಜೆಪಿ ಮೇಲುಗೈಗೆ ಕಡಿವಾಣ ಹಾಕಲು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಬಳಸಿದ ತಂತ್ರಗಳು ಮಾದರಿಯಾಗಬಲ್ಲವೇ?

ಇದನ್ನೂ ಓದಿ: ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

Published On - 10:47 pm, Sun, 2 May 21