ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್

ಫಲಿತಾಂಶ ವಿಶ್ಲೇಷಣೆ: 40 ವರ್ಷಗಳ ನಂತರ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್

Kerala Election Results 2021: ಇದು ಕೋಮುವಾದದ ವಿರುದ್ಧದ ಗೆಲುವು. ಜನರು ತನ್ನ ಮೇಲಿರಿಸಿದ ನಂಬಿಕೆಗೆ ಧನ್ಯವಾದಗಳು ಎನ್ನುವ ಮುೂಲಕ  ಪಿಣರಾಯಿ ವಿಜಯನ್ ಈಗ ಮತ್ತೊಮ್ಮೆ ಕೇರಳದ ಮುಖ್ಯಮಂತ್ರಿ ಗಾದಿಗೇರಲು ಸಜ್ಜಾಗಿದ್ದಾರೆ.

Rashmi Kallakatta

|

May 02, 2021 | 9:44 PM

ಮೂರು ತಿಂಗಳ ಹಿಂದೆ ಕೇರಳದ ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರಿಸಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಈ ಕೈಗಳು ಶುದ್ಧವಾಗಿವೆ ಎಂದು ಹೇಳುವುದು ಶುದ್ಧವಾಗಿರುವ ಕಾರಣ, ಸುಮ್ಮನೆ ಹೇಳುತ್ತಿಲ್ಲ ಎಂದಿದ್ದರು. ಈಗ ಕೇರಳ ಜನತೆ ಪಿಣರಾಯಿ ವಿಜಯನ್ ನೇತೃತ್ವದ ಎಲ್​ಡಿಎಫ್​ನ ಕೈ ಹಿಡಿದಿದೆ. ಕಮ್ಯೂನಿಸ್ಟ್ ಕಾರ್ಯಕರ್ತರು ‘ಕ್ಯಾಪ್ಟನ್’ ಎಂದು ಕರೆಯುವ ಪಿಣರಾಯಿ ವಿಜಯನ್ ಮತ್ತೊಮ್ಮೆ ಅಧಿಕಾರಕ್ಕೇರಲಿದ್ದಾರೆ. LDF for Sure ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಕಣಕ್ಕಿಳಿದ ಎಲ್ ಡಿಎಫ್ ಕೇರಳ ವಿಧಾನಸಭಾ ಚುನಾವಣೆಯಲ್ಲಿ 99 ಸೀಟುಗಳ ಮನ್ನಡೆ ಸಾಧಿಸಿ ಬಹುಮತಗಳೊಂದಿಗೆ ಸರ್ಕಾರ ರಚಿಸಲು ಸಿದ್ದವಾಗಿದೆ.

ಕೇರಳದಲ್ಲಿ 5 ವರ್ಷಗಳ ಅಂತರದಲ್ಲಿ ಒಮ್ಮೆ ಎಲ್​ಡಿಎಫ್ ಸರ್ಕಾರ ಬಂದರೆ ಮತ್ತೊಮ್ಮೆ ಯುಡಿಎಫ್ ಎಂಬ ರೀತಿಯಲ್ಲಿ ಅಧಿಕಾರ ಬದಲಾಗುತ್ತಿತ್ತು. ಈ ಬಾರಿ ಎಲ್​ಡಿಎಫ್ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೇರುವ ಮೂಲಕ 40 ವರ್ಷಗಳ ನಂತರ ಕೇರಳ ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ವಿಜಯಕ್ಕೆ ಕಾರಣವಾಗಿದ್ದು ಪಿಣರಾಯಿ ವಿಜಯನ್ ಎಂಬ ಕಮ್ಯೂನಿಸ್ಟ್ ನಾಯಕನ ಕಾರ್ಯತಂತ್ರ ಮತ್ತು ಜನಪ್ರಿಯತೆ ಎಂದರೆ ಅತಿಶಯೋಕ್ತಿ ಅಲ್ಲ.

ಎರಡು ಬಾರಿ ಪ್ರವಾಹ, ನಿಫಾ ವೈರಸ್, ಓಖಿ ಬಿರುಗಾಳಿ ಇದೀಗ ಕೊರೊನಾ ವೈರಸ್… ಒಂದಾದ ನಂತರ ಮತ್ತೊಂದು ಎಂಬಂತೆ ಸಮಸ್ಯೆಗಳು ಎದುರಾದಾಗ ನಾವು ಒಗ್ಗಟ್ಟಾಗಿ ಎಲ್ಲವನ್ನೂ ಎದುರಿಸೋಣ ಎಂದು ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ ಪಿಣರಾಯಿ ಜನರ ಪರವಾಗಿ ನಿಂತರು, ಜನರ ಬಗ್ಗೆ ಕಾಳಜಿ ವಹಿಸಿ ಜನನಾಯಕರಾದರು.

ನೈಸರ್ಗಿಕ ವಿಪತ್ತುಗಳು ಒಂದೆಡೆಯಾದರೆ ರಾಜಕೀಯ ವಿವಾದಗಳೂ ಪಿಣರಾಯಿ ವಿಜಯನ್ ಅವರನ್ನು ಸುತ್ತಿಕೊಂಡಿತ್ತು. ಪಿಎಸ್ ಸಿ ಪರೀಕ್ಷೆ, ಸರ್ಕಾರಿ ಹುದ್ದೆಗಳಲ್ಲಿ ಸಂಬಂಧಿಕರ ನೇಮಕ ಸೇರಿದಂತೆ ನೇಮಕಾತಿ ವಿವಾದ, ಜತೆ ಚಿನ್ನ ಕಳ್ಳ ಸಾಗಣಿಕೆ, ಲೈಫ್ ಮಿಷನ್ , ಸಮುದ್ರದಾಳದಲ್ಲಿ ಮೀನುಗಾರಿಕೆ ಒಪ್ಪಂದ ಮೊದಲಾದ ಆರೋಪಗಳ ಜತೆ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಾನುಮತಿ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿತ್ತು.

ಕಳೆದ ಐದು ವರ್ಷಗಳು ಪಿಣರಾಯಿ ವಿಜಯನ್ ವಿರುದ್ಧ ಎಷ್ಟೇ ಟೀಕೆಗಳು ಕೇಳಿಬಂದರೂ ಅದಕ್ಕಿಂತ ದುಪ್ಪಟ್ಟು ಶ್ಲಾಘನೆಗಳು ಕೇಳಿ ಬಂದ ವರ್ಷವಾಗಿದೆ. ಉತ್ತಮ ಅಧಿಕಾರ ನೀಡುವಲ್ಲಿ ಎಲ್​ಡಿಎಫ್ ಸರ್ಕಾರ ಪರಾಭವಗೊಂಡಿದೆ ಎಂದು ವಿಪಕ್ಷಗಳು ಟೀಕಿಸಿದಾಗಲೆಲ್ಲ ಜನಪರ ನೀತಿಗಳೊಂದಿಗೆ ಪಿಣರಾಯಿ ಸರ್ಕಾರ ಮುಂದೆ ಬರುತ್ತಿತ್ತು. ಕೇರಳದಲ್ಲಿ ಪ್ರವಾಹ ಬಂದಾಗ ಮಲಯಾಳಿಗಳೆಲ್ಲರೂ ಒಗ್ಗಟ್ಟಾಗಿ ಇದನ್ನು ಎದುರಿಸೋಣ ಎಂಬ ಪಿಣರಾಯಿ ವಿಜಯನ್ ಕರೆಗೆ ವಿಪಕ್ಷ ಯುಡಿಎಫ್ ಕೂಡಾ ಓಗೊಟ್ಟಿತ್ತು. ಪ್ರವಾಹ, ಕೊವಿಡ್ ಲಾಕ್​ಡೌನ್​ನಿಂದಾಗಿ ರಾಜ್ಯ ಆರ್ಥಿಕ ಬಿಕ್ಕಟ್ಟು ಅನುಭವಿಸಿದಾಗಲೂ ಯಾರೂ ಹೆದರಬೇಕಾಗಿಲ್ಲ ಎಲ್​ಡಿಎಫ್ ಸರ್ಕಾರ ಜನರೊಂದಿಗೆ ಇರುತ್ತದೆ ಎಂಬ ಭರವಸೆ ನೀಡಿದ್ದರು ಪಿಣರಾಯಿ. ಇದು ಕೇವಲ ಬಾಯಿ ಮಾತು ಆಗಿರಲಿಲ್ಲ. ಜನರಿಗಾಗಿ ಉಚಿತ ಆಹಾರ ಕಿಟ್ ಗಳನ್ನು ವಿತರಿಸುವ ಮೂಲಕ ಹೆಚ್ಚುವರಿ ಪಡಿತರ, ಹಸಿದವರಿಗೆ ಅನ್ನ ನೀಡುನ ಕಮ್ಯೂನಿಟಿ ಕಿಚನ್ ಗಳನ್ನು ಸ್ಥಾಪಿಸಿ ‘ಜನರಿಂದಲೇ ಸರ್ಕಾರ’ ಎಂಬ ಧ್ಯೇಯವನ್ನು ಅಕ್ಷರಶಃ ಪಾಲಿಸಿದರು.

ನಿಫಾ ವೈರಸ್, ಕೊರೊನಾ ವೈರಸ್ ವಿರುದ್ಧ ಕೇರಳ ಸರ್ಕಾರ ನಡೆಸಿದ ಹೋರಾಟವನ್ನು ಇಡೀ ಜಗತ್ತೇ ಶ್ಲಾಘಿಸಿತು. ಕೊವಿಡ್ ರೋಗ ಹರಡುವಿಕೆಯ ಬಗ್ಗೆ ಜಾಗೃತಿ ಮೂಡಿಸಿದ್ದು ಮಾತ್ರವಲ್ಲದೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿಯೂ ಕೇರಳ ಕ್ರಮ ಕೈಗೊಂಡಿತ್ತು .ಕೊವಿಡ್ ಮೊದಲನೇ ಅಲೆ, ಈಗ ಎರಡನೇ ಅಲೆಯ ಸಂಕಷ್ಟದಲ್ಲಿರುವ ಹೊತ್ತಲ್ಲಿಯೂ ಸಂಜೆ ಪಿಣರಾಯಿ ವಿಜಯನ್ ಸುದ್ದಿಗೋಷ್ಠಿ ನಡೆಸಿ ಆ ದಿನದ ವಿವರಗಳನ್ನು ಸಲ್ಲಿಸುತ್ತಾರೆ. ಅವರ ಮಾತುಗಳಲ್ಲಿನ ಕಾಳಜಿ ರಾಜ್ಯದ ಜನರಿಗೆ ಧೈರ್ಯ ತುಂಬಿದೆ.

ಇದನ್ನೂ ಓದಿ: Karnataka By-Elections ಫಲಿತಾಂಶ ವಿಶ್ಲೇಷಣೆ: ಉಪಚುನಾವಣೆಯ ಗೆಲುವು ಬಿಜೆಪಿ ಕಣ್ಣು ತೆರೆಸಲು ಸಾಧ್ಯವೇ?

Pinarayi vijayan

ಪಿಣರಾಯಿ ವಿಜಯನ್ (ಕೃಪೆ: ಪಿಣರಾಯಿ ವಿಜಯನ್ ಅವರ ಫೇಸ್​ಬುಕ್ ಖಾತೆ )

ಟೀಕೆ, ಆರೋಪಗಳು ಕಡಿಮೆ ಏನಿಲ್ಲ ಕಸ್ಟಡಿ ಹತ್ಯೆಗಳು, ನಕಲಿ ಎನ್‌ಕೌಂಟರ್‌ಗಳು ಮತ್ತು ತನಿಖೆಯಲ್ಲಿ ವಿಫಲವಾದದ್ದು ಸೇರಿದಂತೆ ಪೊಲೀಸರ ದುರ್ವರ್ತನೆಗಳು ಪಿಣರಾಯಿ ಸರ್ಕಾರದ ವಿರುದ್ಧ ಆಗಾಗ ಕೇಳಿ ಬಂದಿದೆ ನಿಲಂಬೂರಿನಲ್ಲಿ ಮಾವೋವಾದಿ ಕುಪ್ಪು ದೇವರಾಜು ಮತ್ತು ಅಜಿತಾ ಅವರ ನಕಲಿ ಎನ್​ಕೌಂಟರ್, ಕುಂಡರ, ವಂಡೂರ್​ನಲ್ಲಿ ನಡೆದ ಕಸ್ಟಡಿ ಸಾವುಗಳು ಮತ್ತು ಕೆವಿನ್ ಕೇಸ್ ಮತ್ತು ವಿನಾಯಕನ್ ಸಾವಿನ ವಿವಾದಗಳು ಪಿಣರಾಯಿ ಸರ್ಕಾರದಲ್ಲಿ ಪೊಲೀಸರ ಕಾರ್ಯವೈಖರಿ ವಿರುದ್ಧ ಬೆರಳು ತೋರಿಸಿದ್ದವು.

ವಾಳಯಾರ್​ನಲ್ಲಿ ನಿಗೂಢ ರೀತಿಯಲ್ಲಿ ಇಬ್ಬರು ಬಾಲಕಿಯರ ಹಿಂಸಾತ್ಮಕ ರೀತಿಯಲ್ಲಿ ಸಾವು ಸಂಭವಿಸಿದ ಘಟನೆ ಪಿಣರಾಯಿ ಸರ್ಕಾರದ ಮೇಲೆ ಕಪ್ಪು ನೆರಳಾಗಿದೆ. ವಾಳಯಾರ್​ನಲ್ಲಿ ಸಾವಿಗೀಡಾದ ಮಕ್ಕಳ ತಾಯಿ ಧರ್ಮಡ ವಿಧಾನಸಭಾ ಕ್ಷೇತ್ರದಲ್ಲಿ ಪಿಣರಾಯಿ ವಿರುದ್ಧ ಸ್ಪರ್ಧೆಗಿಳಿದಾಗ ವಾಳಯಾರ್ ವಿವಾದ ಪಿಣರಾಯಿ ಅವರನ್ನು ಚುನಾವಣೆಯಲ್ಲಿಯೂ ಕಾಡಿತು. ಆದರೆ ಪಿಣರಾಯಿಯವರ ಸಂಪುಟವನ್ನು ಅಲುಗಾಡಿಸಿದ್ದು ಅವರ ಕಚೇರಿ ಜತೆ ಸಂಬಂಧವಿದೆ ಎಂದು ಹೇಳುವ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ. ಈ ಪ್ರಕರಣದಲ್ಲಿ ತಮ್ಮ ಕಚೇರಿಯ ಪ್ರಧಾನ ಕಾರ್ಯದರ್ಶಿಯನ್ನು ವಜಾ ಮಾಡುವ ಮೂಲಕ ಮತ್ತು ಕೇಂದ್ರ ಏಜೆನ್ಸಿಯನ್ನು ವಿಚಾರಣೆಗೆ ಕರೆಸುವ ಮೂಲಕ ಪಿಣರಾಯಿ ತಮ್ಮದೇ ಧಾಟಿಯಲ್ಲಿ ಪ್ರತಿಪಕ್ಷಗಳ ಆರೋಪಗಳನ್ನು ಎದುರಿಸಿದರು.

ಶಬರಿಮಲೆಗೆ ಮಹಿಳೆಯರ ಪ್ರವೇಶ ಮುಟ್ಟು ನಿಲ್ಲದ ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶಿಸಲು ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪಾಲಿಸಿದ್ದು ಎಲ್​ಡಿಎಫ್​ಗೆ ಹೊಡೆತ ನೀಡಿತ್ತು. ಅಲ್ಲಿಯವರೆಗೆ ರಾಜಕೀಯ ಹೋರಾಟ, ಟೀಕೆಗಳನ್ನು ನಡೆಯುತ್ತಿದ್ದ ಕೇರಳದಲ್ಲಿ ಧಾರ್ಮಿಕ ವಿಷಯ ವಿವಾದವಾಗಿ ಮುನ್ನೆಲೆಗೆ ಬಂತು. ಹಿಂದೂ ಧರ್ಮವನ್ನು ರಕ್ಷಿಸಬೇಕು ಎಂದು ಬಿಜೆಪಿ ರಾಜ್ಯದಾದ್ಯಂತ ಹೋರಾಟದ ಕಿಡಿ ಹಚ್ಚಿಸಿತು. ಆದರೆ ವಿಪಕ್ಷ ಯುಡಿಎಫ್ ಈ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸಲಿಲ್ಲ.

ಈ ಬಾರಿಯ ಚುನಾವಣೆಯನ್ನು ಎದುರಿಸಲು ಎಲ್​ಡಿಎಫ್ ನಾಲ್ಕು ವರ್ಷಗಳ ಹಿಂದೆಯೇ ಸಿದ್ಧತೆ ನಡೆಸಿಕೊಂಡಿತ್ತು. ಸರ್ಕಾರದ ಚಟುವಟಿಕೆಗಳನ್ನು ಪಾರದರ್ಶಕವಾಗಿರಿಸುವುದು, ತಮ್ಮ ನಿಲುವುಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದು, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸುವ ಕೆಲಸಗಳನ್ನು ಎಡಪಕ್ಷ ಮಾಡಿತು. ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದು ಪಕ್ಷದ ಪ್ರಚಾರ ಮಾಡುವುದರ ಜತೆಗೆ ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕಲು ಕ್ರಮಕೊಂಡಿತು. ತಮ್ಮ ಪಕ್ಷದಲ್ಲಿ ಯುವ ಜನಾಂಗಕ್ಕೆ ಅವಕಾಶ ನೀಡಬೇಕು ಎಂದು ಚುನಾವಣೆಗಳಲ್ಲಿ ಯುವ ಜನಾಂಗಕ್ಕೆ ನೇತೃತ್ವ ವಹಿಸಿತು. ವಿಧಾನಸಭೆ ಚುನಾವಣೆಯಲ್ಲಿ ಧರ್ಮಡಂ ಚುನಾವಣಾ ಕ್ಷೇತ್ರದಲ್ಲಿ ಸ್ಪರ್ಧಿಸಿ  50,000 ಮತಗಳ ಅಂತರಗಳೊಂದಿಗೆ   ವಿಜಯನ್ ಗೆದ್ದಿದ್ದಾರೆ. ಇದು  ಕೋಮುವಾದದ ವಿರುದ್ಧದ ಗೆಲುವು. ಜನರು  ತನ್ನ ಮೇಲಿರಿಸಿದ ನಂಬಿಕೆಗೆ ಧನ್ಯವಾದಗಳು ಎನ್ನುವ ಮುೂಲಕ  ಪಿಣರಾಯಿ ವಿಜಯನ್ ಈಗ ಮತ್ತೊಮ್ಮೆ ಮುಖ್ಯಮಂತ್ರಿ ಗಾದಿಗೇರಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:  ಕೇರಳದಲ್ಲಿ ಬಿಜೆಪಿ ಮುನ್ನಡೆ ಸಾಧಿಸದೇ ಇರುವುದಕ್ಕೆ ಕಾರಣ ಅಲ್ಲಿ ಶೇ.90 ಸಾಕ್ಷರತೆ ಇದೆ: ಒ.ರಾಜಗೋಪಾಲ್

ಇದನ್ನೂ ಓದಿ: Prashant Kishore: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್​ಬೈ ಹೇಳಿದ ಪ್ರಶಾಂತ್ ಕಿಶೋರ್

(Kerala Assembly Election Analysis LDF Breaks jinx Pinarayi Vijayan Creates History)

Follow us on

Related Stories

Most Read Stories

Click on your DTH Provider to Add TV9 Kannada