Kerala Assembly Elections 2021: ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಪಿಣರಾಯಿ ವಿಜಯನ್ ವಿರುದ್ಧ ಸ್ಪರ್ಧೆಗಿಳಿದ ವಾಳಯಾರ್ ಸಂತ್ರಸ್ತೆಯ ಅಮ್ಮ
Dharmadam Constituency: ತ್ರಿಶ್ಶೂರ್ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂತ್ರಸ್ತೆಯ ಅಮ್ಮ ಪಿಣರಾಯಿ ವಿಜಯನ್ ವಿರುದ್ಧ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ನನಗೆ ಸಂಘ ಪರಿವಾರ ಸಂಘಟನೆಗಳ ಬೆಂಬಲ ಬೇಡ ಎಂದು ಹೇಳಿದ್ದಾರೆ.
ತ್ರಿಶ್ಶೂರ್: ಕೇರಳದ ಪಾಲಕ್ಕಾಡ್ ಜಿಲ್ಲೆಯ ವಾಳಯಾರ್ನಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಸಾವಿಗೀಡಾದ ಬಾಲಕಿಯರ ಅಮ್ಮ ಕಣ್ಣೂರು ಜಿಲ್ಲೆಯ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲಿದ್ದಾರೆ. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಧರ್ಮಡಂನಲ್ಲಿ ತಾನು ಸ್ಪರ್ಧಿಸುತ್ತಿದ್ದೇನೆ ಎಂದು ಸಂತ್ರಸ್ತೆಯ ಅಮ್ಮ ತ್ರಿಶ್ಶೂರ್ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ನನಗೆ ಸಂಘ ಪರಿವಾರ ಸಂಘಟನೆಗಳ ಬೆಂಬಲ ಬೇಡ ಎಂದು ಹೇಳಿದ್ದಾರೆ. ನನ್ನ ಮಗಳಿಗೆ ನ್ಯಾಯ ಸಿಗಬೇಕು. ಅದಕ್ಕಾಗಿ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ನನ್ನನ್ನು ಬೀದಿಗೆ ತಳ್ಳಿದ ಡಿವೈಎಸ್ಪಿ ಸೋಜನ್ ನನ್ನಿಂದ ಕೆಳಗಿನ ದರ್ಜೆಯಲ್ಲಿ, ತಲೆಯಲ್ಲಿ ಪೊಲೀಸ್ ಟೋಪಿ ಇಲ್ಲದೆ ನಿಲ್ಲುವುದನ್ನು ನಾನು ನೋಡಬೇಕು. ಸೋಜನ್ನಂತೆ ಹಲವಾರು ಪೊಲೀಸರು ನಮ್ಮಂಥಾ ಬಡವರ ಹೆಣ್ಣು ಮಕ್ಕಳ ಪ್ರಕರಣಗಳನ್ನು ಸರಿಯಾಗಿ ತನಿಖೆ ಮಾಡದೆ ಕೂರುತ್ತಾರೆ. ಈ ಕಾರಣದಿಂದಾಗಿಯೇ ನಾನು ಚುನಾವಣೆ ಕಣಕ್ಕಿಳಿದಿರುವುದು. ನಮ್ಮ ಕುಟುಂಬದವರಿಗೆ ಆದಂತೆಯೇ ಹಲವಾರು ಕುಟುಂಬಗಳಿಗೆ ಇದೇ ರೀತಿ ಅನ್ಯಾಯ ಆಗಿದೆ. ಆದರೆ ಅವರು ಮನೆಯಲ್ಲಿಯೇ ಕುಳಿತು ಅಳುತ್ತಿದ್ದಾರೆ. ನೊಂದ ಕುಟುಂಬ ಮತ್ತು ಅವರ ಮಕ್ಕಳಿಗಾಗಿಯೇ ನಾನು ಈ ನಿರ್ಧಾರ ಕೈಗೊಂಡಿರುವುದು ಎಂದಿದ್ದಾರೆ ಸಂತ್ರಸ್ತೆಯ ಅಮ್ಮ.
ಸಹೋದರಿಯರಿಬ್ಬರು ಲೈಂಗಿಕ ದೌರ್ಜನ್ಯಕ್ಕೊಳಗಾಗಿ ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸದೆ ಮುಚ್ಚಿ ಹಾಕಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರಕ್ಕೆ ಧಿಕ್ಕಾರ ಕೂಗಿ ಈಕೆ ತಲೆ ಕೂದಲು ಬೋಳಿಸಿದ್ದರು. ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಇವರು ಜನವರಿ 26ರಿಂದ ಪಾಲಕ್ಕಾಡ್ ಬೀದಿಯಲ್ಲಿ ಸತ್ಯಾಗ್ರಹ ಹೋರಾಟ ಮಾಡುತ್ತಿದ್ದಾರೆ.
ಚುನಾವಣಾ ದಿನಾಂಕ ಘೋಷಣೆಗೆ ಮುನ್ನ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಮರುದಿನವೇ ತಲೆಕೂದಲು ಬೋಳಿಸುವುದಾಗಿ ಎಂದು ಇವರು ಹೇಳಿದ್ದರು. ಆಮೇಲೆ ಇವರು ಪಾಲಕ್ಕಾಡ್ನಲ್ಲಿ ಪ್ರತಿಭಟನಾ ವೇದಿಕೆಯಲ್ಲಿ ತಲೆಕೂದಲು ಬೋಳಿಸಿದ್ದರು. ಕೇರಳದ 14 ಜಿಲ್ಲೆಗಳಲ್ಲಿ ಸುತ್ತಾಡಿ ಸರ್ಕಾರದ ಕಡೆಗಣನೆ ಬಗ್ಗೆ ವಿವರಿಸುವೆ. ನನ್ನ ಮಕ್ಕಳಿಗೆ ಸಾವಿನ ನಂತರವೂ ನ್ಯಾಯ ಸಿಗದಂತೆ ಕೇರಳ ಸರ್ಕಾರ ಮಾಡಿದೆ ಎಂದು ಇವರು ಆರೋಪಿಸಿದ್ದಾರೆ. 2017ರಲ್ಲಿ 13 ಮತ್ತು 9 ವಯಸ್ಸಿನ ಇಬ್ಬರು ಬಾಲಕಿಯರ ಮೃತದೇಹ ವಾಳಯಾರ್ನಲ್ಲಿರುವ ಮನೆಯಲ್ಲಿ ನಿಗೂಢ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಏನಿದು ವಾಳಯಾರ್ ಪ್ರಕರಣ? ವಾಳಯಾರ್ನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳು ನಿಗೂಢ ಸಾವಿಗೀಡಾದ ಪ್ರಕರಣವಾಗಿದೆ ಇದು. 2017 ಜನವರಿ 13ರಂದು 13ರ ಹರೆಯದ ಬಾಲಕಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆ ದಿನ ಇಬ್ಬರು ವ್ಯಕ್ತಿಗಳು ನಮ್ಮ ಮನೆಯಿಂದ ಹೊರಗೆ ಹೋಗುವುದನ್ನು ನೋಡಿದ್ದೇನೆ. ಅವರಿಬ್ಬರು ಮುಖ ಮುಚ್ಚಿದ್ದರು ಎಂದು ಮೃತ ಬಾಲಕಿಯ ಸಹೋದರಿ ಪೊಲೀಸರಿಗೆ ಹೇಳಿದ್ದಳು. ಮಗಳ ಹತ್ಯೆ ನಡೆದಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದಾಗಿ ಎರಡು ತಿಂಗಳ ನಂತರ ಮಾರ್ಚ್ 4ರಂದು ಕಿರಿಯ ಮಗಳು 9 ವರ್ಷದ ಬಾಲಕಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ವಾಳಯಾರ್ ಸಹೋದರಿಯರ ಹತ್ಯೆ ಖಂಡಿಸಿ ಪ್ರತಿಭಟನೆಗಳು ಭುಗಿಲೆದ್ದ ಬೆನ್ನಲ್ಲೇ ಪೊಲೀಸರು ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು. ಹಿರಿಯ ಮಧು, ಕಿರಿಯ ಮಧು, ಶಿಬು, ಪ್ರದೀಪ್ ಅವರ ವಿರುದ್ಧ 6 ಪ್ರಕರಣ ದಾಖಲಾಗಿದೆ. ಇಬ್ಬರು ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ ಆರೋಪಿ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದನು. ಹಿರಿಯ ಮಧು ಇಬ್ಬರು ಬಾಲಕಿಯ ಮೇಲೆ ದೌರ್ಜನ್ಯವೆಸಗಿದ ಆರೋಪಿಯಾಗಿದ್ದು, ಕಿರಿಯ ಮಧು, ಶಿಬು ಹಿರಿಯ ಬಾಲಕಿಯ ಮೇಲೆ ದೌರ್ಜನ್ಯವೆಸಗಿದ ಆರೋಪಿಗಳಾಗಿದ್ದಾರೆ.