Kerala Assembly Elections 2021: ಕೇರಳ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಸಿಪಿಎಂ, ಯುವ ನಾಯಕರಿಗೆ ಮಣೆ
CPM Candidate Lists : ಅಭ್ಯರ್ಥಿಗಳ ಪಟ್ಟಿಯಲ್ಲಿ 13 ಮಂದಿ ಯುವ ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರಾಗಿದ್ದಾರೆ. ಹಾಲಿ 33 ಶಾಸಕರು, 5 ಮಾಜಿ ಸಚಿವರು ಈ ಬಾರಿ ಕಣಕ್ಕಿಳಿಯುವುದಿಲ್ಲ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಅಭ್ಯರ್ಥಿಗಳಿದ್ದಾರೆ.
ತಿರುವನಂತಪುರಂ: ಕೇರಳ ವಿಧಾನಸಭೆ ಚುನಾವಣೆಗೆ ಸಿಪಿಎಂ ಪಕ್ಷ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದೆ. 85 ಸೀಟುಗಳ ಪೈಕಿ 83 ಅಭ್ಯರ್ಥಿಗಳ ಹೆಸರನ್ನು ಸಿಪಿಎಂ ಪಕ್ಷದ ಹಂಗಾಮಿ ಕಾರ್ಯದರ್ಶಿ ಎಂ.ವಿಜಯರಾಘವನ್ ಬುಧವಾರ ಪ್ರಕಟಿಸಿದ್ದಾರೆ.ಇದರಲ್ಲಿ 74 ಮಂದಿ ಪಕ್ಷದ ಅಭ್ಯರ್ಥಿಗಳಾಗಿದ್ದು, 9 ಮಂದಿ ಸಿಪಿಎಂ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳಾಗಿದ್ದಾರೆ. ಇಬ್ಬರು ಅಭ್ಯರ್ಥಿಗಳ ಹೆಸರನ್ನು ನಂತರ ಬಿಡುಗಡೆ ಮಾಡಲಾಗುವುದು ಎಂದು ಸಿಪಿಎಂ ಹೇಳಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ 13 ಮಂದಿ ಯುವ ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದವರಾಗಿದ್ದಾರೆ. ಹಾಲಿ 33 ಶಾಸಕರು, 5 ಮಾಜಿ ಸಚಿವರು ಈ ಬಾರಿ ಕಣಕ್ಕಿಳಿಯುವುದಿಲ್ಲ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಅಭ್ಯರ್ಥಿಗಳಿದ್ದಾರೆ.
ಸಿಪಿಎಂ ನಾಯಕರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೆ.ಕೆ.ಶೈಲಜಾ, ಟಿ.ಪಿ. ರಾಮಕೃಷ್ಣನ್, ಎಂ.ಎಂ. ಮಣಿ, ಎಂ.ವಿ. ಗೋವಿಂದನ್, ಕೆ.ರಾಧಾಕೃಷ್ಣನ್, ಪಿ.ರಾಜೀವ್, ಕೆ.ಎನ್, ಬಾಲಗೋಪಾಲ್ ಸ್ಪರ್ಧಿಸಲಿದ್ದಾರೆ. ಪದವೀಧರರಾದ 42 ಮಂದಿ, ವಕೀಲ ವೃತ್ತಿಯಲ್ಲಿರುವ 28 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ 8 ಮಂದಿ, ಸ್ನಾತಕೋತ್ತರ ಪದವಿ ಇರುವ 14 ಮಂದಿ, ಪಿಹೆಚ್ಡಿ ಪಡೆದವರು- 2, ವಾಸ್ತು ಶಿಲ್ಪಿ-1 ಮತ್ತು ಎಂಬಿಬಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇಬ್ಬರು ಇದ್ದಾರೆ. 12 ಸೀಟುಗಳಲ್ಲಿ ಮಹಿಳೆಯರು ಸ್ಪರ್ಧಿಸುತ್ತಿದ್ದಾರೆ.
ಇತ್ತೀಚೆಗೆ ಎಲ್ಡಿಎಫ್ ಮೈತ್ರಿಕೂಟಕ್ಕೆ ಸೇರಿದ ಕೇರಳ ಕಾಂಗ್ರೆಸ್ ಎಂ ಮತ್ತು ಎಲ್ಜೆಡಿಗೆ ಸೀಟು ಕೊಡಬೇಕಾಗಿ ಬರುವುದರಿಂದ 2016ರಲ್ಲಿ ಸಿಪಿಎಂ ಪಕ್ಷಕ್ಕೆ ನೀಡಿದ್ದ ಸೀಟುಗಳಷ್ಟೇ ಸೀಟುಗಳು ಈ ಬಾರಿ ಲಭಿಸುವುದಿಲ್ಲ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅವರ ಸಂಸದೀಯ ಕಾರ್ಯಗಳು ಮಾತ್ರವಲ್ಲ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಹೊಸಬರಿಗೆ ಅವಕಾಶ ನೀಡುವುದಕ್ಕೆ ಒತ್ತು ನೀಡಲಾಗಿದೆ ಎಂದು ವಿಜಯರಾಘವನ್ ಹೇಳಿದ್ದಾರೆ.
ಚುನಾವಣಾ ಕಣದಲ್ಲಿರುವ ಪ್ರಮುಖರು ಮಾಜಿ ರಾಜ್ಯಸಭಾ ಸಂಸದ ಪಿ. ರಾಜೀವ್ (ಕಳಮಶ್ಶೇರಿ) ತಿರುವನಂತಪುರಂ ಮಾಜಿ ಮೇಯರ್ ವಿ.ಕೆ .ಪ್ರಶಾಂತ್ (ವಟ್ಟಿಯೂರ್ ಕಾವ್) ಅಬಕಾರಿ ಸಚಿವ ಟಿಪಿ ರಾಮಕೃಷ್ಣನ್ (ಪೆರಂಬ್ರ ) ಆರೋಗ್ಯ ಸಚಿವೆ ಕೆ.ಕೆ.ಶೈಲಜಾ (ಮಟ್ಟನ್ನೂರ್) ಡಿವೈಎಫ್ಐ ನಾಯಕ ಪಿ.ಎ ಮುಹಮ್ಮದ್ ರಿಯಾಸ್ (ಬೇಪೂರ್) ಪಾಲಕ್ಕಾಡ್ ಮಾಜಿ ಸಂಸದ ಎಂಬಿ ರಾಜೇಶ್ (ತ್ರಿತಲ) ಕಾರ್ಮಿಕ ಸಚಿವ ಎ.ಸಿ. ಮೊಯಿದ್ದೀನ್ (ಕುನ್ನಂಕುಳಂ) ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ (ಕಳಕ್ಕೂಟ್ಟಂ) ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ (ತಾವನೂರ್) ಮೀನುಗಾರಿಕೆ ಇಲಾಖೆ ಸಚಿವೆ ಜೆ.ಮೆರ್ಸಿ ಕುಟ್ಟಿ ಅಮ್ಮ (ಕುಂಡರಾ)
ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಅಭ್ಯರ್ಥಿ ಘೋಷಿಸಿಲ್ಲ ಕೇರಳದ 14 ಜಿಲ್ಲೆಗಳಲ್ಲಿನ ವಿಧಾನಸಭೆಕ್ಷೇತ್ರಗಳಲ್ಲಿ ಚುನಾವಣೆ ಕಣಕ್ಕಿಳಿಯಲಿರುವ ಸಿಪಿಎಂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು, ಕಾಸರಗೋಡಿನ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ. ಇಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಯ ಹೆಸರು ಆಮೇಲೆ ಘೋಷಿಸುವುದಾಗಿ ವಿಜಯರಾಘವನ್ ಹೇಳಿದ್ದಾರೆ. ಕಾಸರಗೋಡು ಜಿಲ್ಲೆಯ ಉದುಮದಲ್ಲಿ ಸಿ.ಎಚ್.ಕುಂಞಂಬು, ತೃಕರೀಪುರದಲ್ಲಿ ಎ. ರಾಜಗೋಪಾಲ್ ಸ್ಪರ್ಧಿಸಲಿದ್ದಾರೆ.
ಕಣ್ಣೂರ್ ಜಿಲ್ಲೆ ಧರ್ಮಡಂ – ಪಿಣರಾಯಿ ವಿಜಯನ್ ತಲಶ್ಶೇರಿ- ಎ.ಎನ್.ಶಂಸೀರ್ ಪಯ್ಯನ್ನೂರ್- ಟಿ.ಎ. ಮಧುಸೂದನ್ ಕಲ್ಯಾಶ್ಶೇರಿ- ಎಂ.ವಿಜಿನ ಅಳಿಕ್ಕೋಡ್- ಕೆ.ವಿ.ಸುಮೇಶ್ ಪೆರಾವೂರ್- ಜಕೀರ್ ಹುಸೇನ್ ಮಟ್ಟನ್ನೂರ್- ಶೈಲಜಾ ತಳಿಪರಂಬ್- ಎಂ.ವಿ.ಗೋವಿಂದನ್
ಚುನಾವಣೆ ಕಣದಲ್ಲಿ 12 ಮಹಿಳೆಯರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಗಳಾಗಿ 12ಮಂದಿ ಮಹಿಳೆಯರು ಕಣಕ್ಕಿಳಿದಿದ್ದಾರೆ. ಒ.ಎಸ್. ಅಂಬಿಕಾ, ಮೆರ್ಸಿ ಕುಟ್ಟಿಯಮ್ಮ, ವೀಣಾ ಜಾರ್ಜ್, ಯು.ಪ್ರತಿಭಾ, ದಲೀಮಾ ಜೊಜೊ, ಶೆಲ್ನಾ ನಿಷಾದ್, ಆ. ಬಿಂದು, ಕಾನತ್ತಿಲ್ ಜಮೀಲಾ, ಪಿ.ಮಿಥುನಾ, ಕೆ.ಶಾಂತಾಕುಮಾರಿ, ಕೆ.ಕೆ.ಶೈಲಜಾ, ಪಿ.ಜಿಜಿ – ಚುನಾವಣಾ ಕಣದಲ್ಲಿದ್ದಾರೆ.
ಕೇರಳದಲ್ಲಿ ಮತ್ತೊಮ್ಮೆ ಎಲ್ಡಿಎಫ್ ಎಂದ ಸಮೀಕ್ಷೆ
ಕೇರಳದಲ್ಲಿ ಈಗ ಆಡಳಿತದಲ್ಲಿರುವ ಎಡಪಕ್ಷ ಮತ್ತೆ ಅಧಿಕಾರ ಗಳಿಸಲಿದೆ. ಕೇರಳದಲ್ಲಿ ಆಡಳಿತ ವಹಿಸಿರುವ ಎಲ್ಡಿಎಫ್ 140ರಲ್ಲಿ 82 ಸ್ಥಾನ ಪಡೆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ 56 ಸೀಟ್ ಪಡೆಯಬಹುದು. ಬಿಜೆಪಿ 1 ಸೀಟು ಗೆಲ್ಲಬಹುದು ಎಂಬ ನಿರೀಕ್ಷೆ ಇದೆ ಟೈಮ್ಸ್ ನೌ ಹಾಗೂ ಸಿ-ವೋಟರ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ವರದಿ ತಿಳಿಸಿದೆ.
Published On - 1:06 pm, Wed, 10 March 21