Tamil Nadu Assembly Elections 2021: ತಮಿಳುನಾಡು ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಎಎಂಎಂಕೆ
AMMK Candidates List: ಮಾಜಿ ಸಚಿವರಾದ ಜಿ.ಸೆಂಥಮಿಳನ್ ಮತ್ತು ಪಳನಿಯಪ್ಪನ್ ಅವರು ಸೈದಪೇಟ್ ಮತ್ತು ಪಾಪಿರೆಡ್ಡಿಪಟ್ಟಿಯಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಸಿ.ಷಣ್ಮುಗವೇಲು ಅವರು ಮಾಜತುಲಗಂ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಚೆನ್ನೈ: ಎಎಂಎಂಕೆ (AMMK) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮಾಜಿ ಶಾಸಕ ಮತ್ತು ಸಂಸದರ ಹೆಸರು ಇದೆ. ಮಾಜಿ ಸಚಿವರಾದ ಜಿ.ಸೆಂಥಮಿಳನ್ ಮತ್ತು ಪಳನಿಯಪ್ಪನ್ ಅವರು ಸೈದಪೇಟ್ ಮತ್ತು ಪಾಪಿರೆಡ್ಡಿಪಟ್ಟಿಯಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಸಚಿವ ಸಿ.ಷಣ್ಮುಗವೇಲು ಅವರು ಮಾಜತುಲಗಂ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಪ್ರಮುಖ ರಾಜಕಾರಣಿಗಳಾದ ಶಾಸಕ ಎನ್.ಜಿ. ಪಾರ್ಥಿಬನ್ (ಶೋಲಿಂಗೂರು), ಎಂ.ರಂಗಸ್ವಾಮಿ (ಪಾಪನಾಶನಂ), ಕೆ.ಕೆ. ಉಮದೇವನ್ (ತಿರುಪತ್ತೂರು) ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಡಿಎಂಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಇಂದು ಸಾಧ್ಯತೆ
ದ್ರಾವಿಡ ಮುನ್ನೇಟ್ರ ಕಳಗಂ (DMK) ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಏಪ್ರಿಲ್ 6ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು 243 ವಿಧಾನಸಭೆ ಸೀಟುಗಳಿರುವ ತಮಿಳುನಾಡಿನಲ್ಲಿ 186 ಸೀಟುಗಳಲ್ಲಿ ಡಿಎಂಕೆ ಸ್ಪರ್ಧಿಸಲಿದೆ. ಮಂಗಳವಾರ ಎಂ.ಕೆ.ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಕೊಂಗನಾಡು ಮಕ್ಕಳು ದೇಶೀಯ ಕಟ್ಚಿ ಜತೆ ಮೈತ್ರಿ ಮಾಡಿಕೊಂಡಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ತನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್ಗೆ 25 ಸೀಟುಗಳನ್ನು ನೀಡಿದೆ. 25 ವಿಧಾನಸಭೆ ಸೀಟು ಮತ್ತು ಕನ್ಯಾಕುಮಾರಿಯಲ್ಲಿ ಒಂದು ಲೋಕಸಭಾ ಸ್ಥಾನದಲ್ಲಿ ಕಾಂಗ್ರೆಸ್ ಸ್ಪರ್ಧೆಗಿಳಿಯಲಿದೆ. ಇಲ್ಲಿಯವರೆಗೆ ದ್ರಾವಿಡ ಮುನ್ನೇತ್ರ ಕಳಗಂ (DMK) ಒಟ್ಟು 54 ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. CPM, CPI, MDMK ಹಾಗೂ VCK ಪಕ್ಷಕ್ಕೆ ತಲಾ 6 ಕ್ಷೇತ್ರಗಳು, ಕಾಂಗ್ರೆಸ್ಗೆ 25 ಕ್ಷೇತ್ರಗಳು, IUMLಗೆ 3 ಮತ್ತು MMKಗೆ 2 ಸೀಟ್ಗಳನ್ನು ನೀಡಿದೆ.
ರೇಷನ್ ಕಾರ್ಡ್ ಹೊಂದಿದ ಗೃಹಿಣಿಯರಿಗೆ ಮಾಸಿಕ 1,000 ರೂ. ವಿತರಣೆ ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷ ಅಧಿಕಾರಕ್ಕೆ ಬಂದರೆ, ರೇಷನ್ ಕಾರ್ಡ್ ಹೊಂದಿದ ಗೃಹಿಣಿಯರಿಗೆ ಪ್ರತಿ ತಿಂಗಳು 1,000 ರೂಪಾಯಿ ನೀಡುವುದಾಗಿ DMK ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಘೋಷಣೆ ಮಾಡಿದ್ದಾರೆ. ಇದರಿಂದ ಎಲ್ಲಾ ಮಹಿಳೆಯರು ಆಹಾರ, ಅಗತ್ಯ ಸಾಮಾಗ್ರಿಗಳನ್ನು ಪಡೆಯುವಂತಾಗಲಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ತಮಿಳುನಾಡು ಚುನಾವಣೆಯಲ್ಲಿ 154 ಸೀಟುಗಳಲ್ಲಿ ಸ್ಪರ್ಧಿಸಲಿದೆ ಮಕ್ಕಳ್ ನೀಧಿ ಮಯ್ಯಂ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ( MNM), ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಟ್ಚಿ (AISMK) ಮತ್ತು ಇಂದಿಯಾ ಜನನಾಯಕ ಕಟ್ಚಿ(IJK) ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಂಡಿವೆ. ತಮಿಳುನಾಡಿನಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ತರುತ್ತೇವೆ ಎಂದು ಈ ಪಕ್ಷಗಳು ಜನರಿಗೆ ಭರವಸೆ ನೀಡಿವೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಈ ಪೈಕಿ 154 ಸೀಟುಗಳಲ್ಲಿ ಎಂಎನ್ಎಂ ಸ್ಪರ್ಧಿಸಲಿದೆ. ಅದೇ ವೇಳೆ ಎಐಎಸ್ ಎಂಕೆ ಮತ್ತು ಐಜೆಕೆ 40 ಸೀಟುಗಳಲ್ಲಿ ಕಣಕ್ಕಿಳಿಯಲಿದೆ.
ಅಸಾದುದ್ದೀನ್ ಓವೈಸಿ ಅವರ ಮಜಲಿಸ್- ಇ-ಇತ್ತೆಹಾದ್- ಉಲ್- ಮುಸ್ಲಿಮೀನ್ (AIMIM) ಪಕ್ಷವು ಟಿಟಿವಿ ದಿನಕರನ್ ಅವರ ಪಕ್ಷವಾದ ಅಮ್ಮ ಮಕ್ಕಳ್ ಮುನ್ನೇಟ್ರ ಕಳಗಂ (AMMK) ಜತೆ ಭಾನುವಾರ ಮೈತ್ರಿ ಮಾಡಿಕೊಂಡಿದೆ. ವನಿಯಂಬಾಡಿ, ಕೃಷ್ಣಗರಿ ಮತ್ತು ಸಂಕರಾಪುರಂನಲ್ಲಿ ಎಐಎಂಐಎ ಸ್ಪರ್ಧಿಸಲಿದೆ. ವಿ.ಕೆ.ಶಶಿಕಲಾ ಇತ್ತೀಚೆಗಷ್ಟೇ ತಮ್ಮ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಹಾಗಾಗಿ, ಸದ್ಯ ಒಬ್ಬಂಟಿಯಾಗಿದ್ದ ಟಿಟಿವಿ ದಿನಕರನ್ಗೆ ಓವೈಸಿ ಬಲ ಜತೆಯಾಗಿದೆ. ಟಿಟಿವಿ ದಿನಕರನ್ರ AMMK ಪಕ್ಷವನ್ನು ಜತೆ ಸೇರಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು.
ಇದನ್ನೂ ಓದಿ: Tamil Nadu Assembly Elections 2021: ಸೀಟು ಹಂಚಿಕೆ ವಿಚಾರ; ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದಿಂದ ಹೊರನಡೆದ ಡಿಎಂಡಿಕೆ
Published On - 2:13 pm, Wed, 10 March 21