ಕಾಂಗ್ರೆಸ್ ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಪಕ್ಷ ತೊರೆದ ಕೇರಳದ ಹಿರಿಯ ನಾಯಕ ಪಿ.ಸಿ.ಚಾಕೊ
PC Chacko: ಕೇರಳದಲ್ಲಿ ಯಾವುದೇ ಕಾಂಗ್ರೆಸ್ ಪಕ್ಷ ಇಲ್ಲ. ಇಲ್ಲಿರುವುದು ಎರಡೇ ಪಕ್ಷ- ಕಾಂಗ್ರೆಸ್ (ಐ) ಮತ್ತು ಕಾಂಗ್ರೆಸ್ (ಎ) . ಕೇರಳ ಕಾಂಗ್ರೆಸ್ ಘಟಕವು ಈ ಎರಡು ಪಕ್ಷಗಳನ್ನು ನಡೆಸಿಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದಿದ್ದಾರೆ ಪಿ.ಸಿ.ಚಾಕೊ
ನವದೆಹಲಿ: ಕೇರಳದ ಕಾಂಗ್ರೆಸ್ ಹಿರಿಯ ನಾಯಕ ಪಿ.ಸಿ.ಚಾಕೊ (PC Chacko) ಬುಧವಾರ ಪಕ್ಷ ತೊರೆದಿದ್ದಾರೆ. ಪಕ್ಷ ತನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಪಿ.ಸಿ. ಚಾಕೊ ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳಿಸಿದ್ದಾರೆ. ಗುಂಪು ಆಧರಿಸಿ ಸೀಟು ಹಂಚಿಕೆ ವಿಷಯದಲ್ಲಿ ತನಗೆ ಅಸಮಾಧಾನವಿದೆ ಎಂದು ಬಹಿರಂಗವಾಗಿಯೇ ಪಿ.ಸಿ.ಚಾಕೊ ಹೇಳಿಕೊಂಡಿದ್ದರು. ರಾಜೀನಾಮೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಾಕೊ, ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯವಹಿಸುತ್ತಿಲ್ಲ. ಇಲ್ಲಿ ಎರಡು ಗುಂಪುಗಳು ಒಟ್ಟಿಗೆ ಸೇರುವ ಕಾರ್ಯ ಮಾತ್ರ ನಡೆಯುತ್ತಿದೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯುಂಟಾಗಿದೆೆ. ಗುಂಪುಗಳಲ್ಲಿ ಸೇರದೆಯೇ ಕಾಂಗ್ರೆಸ್ ಕಾರ್ಯಕರ್ತನಾಗಲು ಸಾಧ್ಯವಿಲ್ಲ. ಪಕ್ಷದ ನಿಯಮಗಳನ್ನು ಪಾಲಿಸಿ ಅಭ್ಯರ್ಥಿಗಳನ್ನು ನಿರ್ಣಯಿಸಿಲ್ಲ ಎಂದಿದ್ದಾರೆ.
ನಾನು ಕಾಂಗ್ರೆಸ್ ಪಕ್ಷ ತೊರೆದಿದ್ದೇನ. ನನ್ನ ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಅವರಿಗೆ ಕಳುಹಿಸಿಕೊಟ್ಟಿದ್ದೇನೆ. ಕಳೆದ ಕೆಲವು ದಿನಗಳಿಂದ ನಾನು ಈ ನಿರ್ಧಾರ ಕೈಗೊಳ್ಳುವುದರ ಬಗ್ಗೆ ಯೋಚಿಸುತ್ತಿದ್ದಾರೆ. ಕೇರಳದಲ್ಲಿ ಯಾವುದೇ ಕಾಂಗ್ರೆಸ್ ಪಕ್ಷ ಇಲ್ಲ. ಇಲ್ಲಿರುವುದು ಎರಡೇ ಪಕ್ಷ- ಕಾಂಗ್ರೆಸ್ (ಐ) ಮತ್ತು ಕಾಂಗ್ರೆಸ್ (ಎ). ಕೇರಳ ಕಾಂಗ್ರೆಸ್ ಘಟಕವು ಈ ಎರಡು ಪಕ್ಷಗಳನ್ನು ನಡೆಸಿಕೊಂಡು ಹೋಗುವ ಕೆಲಸ ಮಾಡುತ್ತಿದೆ.
ಕೇರಳದಲ್ಲಿ ನಿರ್ಣಾಯಕವಾದ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರಕ್ಕೇರಬೇಕು ಎಂದು ಜನರು ಬಯಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನೇತಾರರ ನಡುವೆ ಗುಂಪುಗಾರಿಕೆ ನಡೆಯುತ್ತಿದೆ. ಈ ಗುಂಪುಗಾರಿಕೆ ನಿಲ್ಲಬೇಕು ಎಂದು ನಾನು ಹೈಕಮಾಂಡ್ ಜತೆ ವಾಗ್ವಾದ ಮಾಡಿದ್ದೇನೆ. ಆದರೆ ಹೈಕಮಾಂಡ್ ಕೂಡಾ ಈ ಎರಡು ಗುಂಪುಗಳು ಮುಂದಿರಿಸಿದ ಪ್ರಸ್ತಾವಗಳನ್ನೇ ಸ್ವೀಕರಿಸಿದೆ ಎಂದು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರು ಉಲ್ಲೇಖಿಸದೆಯೇ ಚಾಕೊ ಆರೋಪಿಸಿದ್ದಾರೆ.
I have quit Congress and sent my resignation to party’s interim chief Sonia Gandhi: Senior Congress leader PC Chacko pic.twitter.com/YJsoZch1oE
— ANI (@ANI) March 10, 2021
ಉಮ್ಮನ್ ಚಾಂಡಿ, ರಮೇಶ್ ಚೆನ್ನಿತ್ತಲ ಮತ್ತು ಅವರಿಗೆ ಬೆಂಬಲ ನೀಡುವ ಗುಂಪಿನ ನಾಯಕರ ಇಷ್ಟಾನುಸಾರ ಸೀಟು ಹಂಚಿಕೆ ನಡೆದಿದೆ. ಈ ಎರಡೂ ಗುಂಪುಗಳನ್ನು ಜತೆಯಾಗಿ ಕರೆದೊಯ್ಯುವ ಕೆಲಸವನ್ನಷ್ಟೇ ಕೆಪಿಸಿಸಿ ಮತ್ತು ಹೈಕಮಾಂಡ್ ಮಾಡುತ್ತಿರುವುದು. ರಾಷ್ಟ್ರೀಯ ಮಟ್ಟದಲ್ಲಿಯೂ ಕಾಂಗ್ರೆಸ್ ಬೆಳೆಯುವುದಿಲ್ಲ ಎಂದು ಪಿ.ಸಿ.ಚಾಕೊ ಹೇಳಿದ್ದಾರೆ. ಆದಾಗ್ಯೂ, ಮುಂದಿನ ನಡೆ ಏನು ಎಂಬುದರ ಬಗ್ಗೆ ಯಾವುದೇ ಸೂಚನೆಯನ್ನು ಚಾಕೊ ನೀಡಿಲ್ಲ. ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಚಟುವಟಿಕೆಗಳಿಂದಲೂ ಇವರು ದೂರವಿದ್ದರು. ಅದೇ ವೇಳೆ ಕಾಂಗ್ರೆಸ್ ತೊರೆದು ಶರದ್ ಪವಾರ್ ಅವರ ಎನ್ ಸಿಪಿಯಲ್ಲಿ ಸೇರಲಿದ್ದಾರೆ ಎಂಬ ವದಂತಿಯನ್ನು ಚಾಕೊ ನಿರಾಕರಿಸಿದ್ದಾರೆ.
74ರ ಹರೆಯದ ಚಾಕೊ ಕೇರಳದ ತ್ರಿಶ್ಶೂರ್ ಚುನಾವಣಾ ಕ್ಷೇತ್ರದ ಮಾಜಿ ಸಂಸದರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಇವರು ಕಾರ್ಯ ನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಚಾಕೊ ಅವರು ಪಕ್ಷ ತೊರೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ನೀಡಿದೆ. ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯೇ ಕೇರಳದಲ್ಲಿ ಸ್ಟಾರ್ ಪ್ರಚಾರಕರಾಗಿರುವಾಗ ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯ ನಾಯಕ ಹೊರನಡೆದಿರುವುದು ಪಕ್ಷಕ್ಕೆ ಮುಜುಗರವುಂಟು ಮಾಡಿದೆ. ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ನಾಯಕರ ಪೈಕಿ ಚಾಕೊ ಕೂಡಾ ಒಬ್ಬರಾಗಿದ್ದಾರೆ.
ಪಿ.ಸಿ. ಚಾಕೊ ಅವರು ಕಾಂಗ್ರೆಸ್ನ ಹಿರಿಯ ನಾಯಕರು. ಅವರು ಐಎನ್ಸಿಯ ಅಮೂಲ್ಯ ಸೊತ್ತಾಗಿದ್ದರು. ಚುನಾವಣೆಯ ಹೊತ್ತಲ್ಲಿ ಅವರು ಪಕ್ಷ ತೊರೆದಿರುವುದು ಸರಿಯಾದ ನಿರ್ಧಾರ ಎಂದು ಅನಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಹೈಬಿ ಈಡೆನ್ ಪ್ರತಿಕ್ರಿಯಿಸಿದ್ದಾರೆ.
Published On - 3:57 pm, Wed, 10 March 21