ಕಳೆದ ಎರಡು ವರ್ಷದಿಂದ ಮುದ್ರಣವಾಗಿಲ್ಲ ರೂ. 2000 ಮುಖಬೆಲೆಯ ಕರೆನ್ಸಿ ನೋಟು

2000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕಳೆದ ಎರಡು ವರ್ಷದಿಂದ ಮುದ್ರಣ ಮಾಡಿಲ್ಲ ಎಂಬ ಅಂಶವನ್ನು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಮುದ್ರಣವಾಗಿಲ್ಲ ರೂ. 2000 ಮುಖಬೆಲೆಯ ಕರೆನ್ಸಿ ನೋಟು
ಪ್ರಾತಿನಿಧಿಕ ಚಿತ್ರ
Follow us
Srinivas Mata
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 16, 2021 | 4:11 PM

2000 ಮುಖಬೆಲೆಯ ಕರೆನ್ಸಿ ನೋಟುಗಳನ್ನು ಕಳೆದ ಎರಡು ವರ್ಷದಲ್ಲಿ ಭಾರತದಲ್ಲಿ ಮುದ್ರಿಸಿಲ್ಲ ಎಂದು ಕೇಂದ್ರ ಸರ್ಕಾರವು ತಿಳಿಸಿದೆ. ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಈ ಬಗ್ಗೆ ಲೋಕಸಭೆಗೆ ಲಿಖಿತ ಪ್ರತಿಕ್ರಿಯೆ ನೀಡಿ, ಮಾರ್ಚ್ 30, 2018ಕ್ಕೆ 3362 ಮಿಲಿಯನ್ 2000 ರೂಪಾಯಿ ಮುಖಬೆಲೆ ಕರೆನ್ಸಿ ನೋಟುಗಳು, ಅಂದರೆ ಪ್ರಮಾಣದ ದೃಷ್ಟಿಯಲ್ಲಿ ಶೇ 3.27 ಹಾಗೂ ವ್ಯವಹಾರದ ರೀತಿಯಿಂದ ಶೇ 37.26ರಷ್ಟು ಚಲಾವಣೆಯಲ್ಲಿ ಇದ್ದವು ಎಂದು ಹೇಳಿದ್ದಾರೆ. ಆದರೂ 2000 ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಕಡಿಮೆ ಆಗಿವೆ ಎಂದು ಲಿಖಿತ ಉತ್ತರವನ್ನು ನೀಡಿದ್ದಾರೆ.

ಫೆಬ್ರವರಿ 26, 2021ಕ್ಕೆ 2000 ರೂಪಾಯಿ ಮುಖಬೆಲೆ ನೋಟುಗಳು ಚಲಾವಣೆಯಲ್ಲಿದ್ದ ಸಂಖ್ಯೆ 2499 ಮಿಲಿಯನ್. ಪ್ರಮಾಣದಲ್ಲಿ ಶೇ 2.01 ಮತ್ತು ಮೌಲ್ಯದ ದೃಷ್ಟಿಯಿಂದ ಶೇ 17.78ರಷ್ಟಿತ್ತು. “ಆರ್​ಬಿಐ ಜತೆಗೆ ಚರ್ಚಿಸಿದ ನಂತರ ನಿರ್ದಿಷ್ಟ ಮುಖಬೆಲೆಯ ಬ್ಯಾಂಕ್ ನೋಟುಗಳ ಮುದ್ರಣದ ತೀರ್ಮಾನ ಕೈಗೊಳ್ಳಲಾಗುವುದು. ಆಯಾ ಮುಖಬೆಲೆಯ ನೋಟು ಯಾವ ಪ್ರಮಾಣದಲ್ಲಿರಬೇಕು ಹಾಗೂ ಸಾರ್ವಜನಿಕರಿಂದ ಬೇಡಿಕೆ ಹೇಗಿದೆ ಎಂಬ ಅಂಶ ಗಮನಿಸಿದ ನಂತರ ಮುದ್ರಣ ಪ್ರಕ್ರಿಯೆ ನಡೆಯುತ್ತದೆ. 2019- 20 ಹಾಗೂ 2020- 21ರಲ್ಲಿ 2000 ರೂಪಾಯಿ ಮುಖಬೆಲೆಯ ನೋಟಿನ ಮುದ್ರಣಕ್ಕೆ ಮುದ್ರಣಾಲಯಕ್ಕೆ ಯಾವುದೇ ಬೇಡಿಕೆ ಸಲ್ಲಿಸಿಲ್ಲ,” ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.

2016- 17ನೇ ಹಣಕಾಸು ವರ್ಷಕ್ಕೆ 2000 ರೂಪಾಯಿ ಮುಖಬೆಲೆಯ 3,542.991 ಮಿಲಿಯನ್ ನೋಟುಗಳು ಇದ್ದದ್ದು, 2017- 18ರಲ್ಲಿ 111,507 ಮಿಲಿಯನ್​​ಗೆ 2000 ಮುಖಬೆಲೆ ನೋಟುಗಳು ಇಳಿದವು. 2018-19ರಲ್ಲಿ ಆ ಪ್ರಮಾಣ 46.690 ಮಿಲಿಯನ್​​ಗೆ ಕುಸಿಯಿತು. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ 2019ರ ಏಪ್ರಿಲ್​ನಿಂದ 2000 ಮುಖ ಬೆಲೆ ನೋಟು ಮುದ್ರಣವಾಗಿಲ್ಲ. ದೊಡ್ಡ ಮುಖಬೆಲೆಯ ನೋಟುಗಳನ್ನು ಮುದ್ರಣ ಮಾಡದಂತೆ ಇರುವ ಉದ್ದೇಶ ಏನೆಂದರೆ, ಹೆಚ್ಚಿನ ಮೌಲ್ಯದ ನೋಟುಗಳನ್ನು ಸಂಗ್ರಹ ಮಾಡದಂತೆ ತಡೆಯುವುದು ಹಾಗೂ ಕಪ್ಪು ಹಣದ ಚಲಾವಣೆಯನ್ನು ನಿಲ್ಲಿಸುವುದು ಎನ್ನಲಾಗಿದೆ.

2016ರ ನವೆಂಬರ್​ನಲ್ಲಿ ಸರ್ಕಾರವು 500 ಹಾಗೂ 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದ ನಂತರ 2000 ರೂಪಾಯಿ ಮುಖಬೆಲೆ ನೋಟುಗಳನ್ನು ಮುದ್ರಿಸಲಾಯಿತು. 2000 ಮುಖಬೆಲೆ ಹೊರತುಪಡಿಸಿ 10, 20, 50, 100, 200 ಹಾಗೂ 500 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಸಹ ಪರಿಚಯಿಸಲಾಯಿತು.

ಇದನ್ನೂ ಓದಿ: ಆರ್​ಬಿಐ ಘೋಷಣೆ: ಮಾರ್ಚ್​ ನಂತರ ನಡೆಯಲ್ಲ 100, 10 ಮತ್ತು 5 ರೂಪಾಯಿಯ ಹಳೆಯ ನೋಟು!