ರೈಲ್ವೆಯಲ್ಲಿ ಖಾಸಗಿ ಹೂಡಿಕೆ ಅಷ್ಟೇ, ಸಂಪೂರ್ಣ ಖಾಸಗೀಕರಣ ಇಲ್ಲ ಎಂದ ಕೇಂದ್ರ ಸರ್ಕಾರ

ರಸ್ತೆಗಳ ಮೇಲೆ ಖಾಸಗಿ ವಾಹನ ಓಡಾಡಲು ಅವಕಾಶ ನೀಡಿದಂತೆ ರೈಲ್ವೆಗೂ ಖಾಸಗಿ ಹೂಡಿಕೆ ಅಗತ್ಯವಾಗಿದೆ. ಈ ಕ್ರಮವನ್ನು ಸ್ವಾಗತಿಸುವುದು ಉತ್ತಮ ನಡೆಯಾಗಿದೆ ಎಂದು ಪಿಯೂಷ್ ಗೋಯೆಲ್ ವಿವರಿಸಿದ್ದಾರೆ.

ರೈಲ್ವೆಯಲ್ಲಿ ಖಾಸಗಿ ಹೂಡಿಕೆ ಅಷ್ಟೇ, ಸಂಪೂರ್ಣ ಖಾಸಗೀಕರಣ ಇಲ್ಲ ಎಂದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us
|

Updated on: Mar 16, 2021 | 3:41 PM

ದೆಹಲಿ: ಭಾರತಿಯ ರೈಲ್ವೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯೆಲ್ ತಿಳಿಸಿದ್ದಾರೆ. ಹಿಂದಿನಿಂದಲೂ ಭಾರತೀಯ ರೈಲ್ವೆ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಮುಂದೆಯೂ ಅದು ಸರ್ಕಾರದ ನಿರ್ವಹಣೆಯಲ್ಲಿಯೇ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರೈಲ್ವೆ ಇಲಾಖೆಯ ಬೇಡಿಕೆ ಮತ್ತು ಅನುದಾನದ ಕುರಿತು ಸಂಸತ್​ನಲ್ಲಿ ನಡೆಸಿದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಸ್ತೆಗಳ ಮೇಲೆ ಕೇವಲ ಸರ್ಕಾರಿ ವಾಹನಗಳು ಮಾತ್ರ ಓಡಾಡಿದರೆ ಸಾಕಾಗದು. ಖಾಸಗಿ ವಾಹನಗಳೂ ಓಡಾಡಬೇಕು. ಏಕೆಂದರೆ ಆರ್ಥಿಕ ವಹಿವಾಟು ನಡೆಯವುದು ಅನಿವಾರ್ಯ. ರೈಲ್ವೆ ಖಾಸಗೀಕರಣ ಮಾಡುತ್ತಾರೆ ಎಂದು ನಮ್ಮ ಮೇಲೆ ಆರೋಪ ಕೇಳಿಬಂದಿತ್ತು. ಆದರೆ ರಸ್ತೆಗಳ ಮೇಲೆ ಖಾಸಗಿ ವಾಹನ ಓಡಾಡಲು ಅವಕಾಶ ನೀಡಿದಂತೆ ರೈಲ್ವೆಗೂ ಖಾಸಗಿ ಹೂಡಿಕೆ ಅಗತ್ಯವಾಗಿದೆ. ಈ ಕ್ರಮವನ್ನು ಸ್ವಾಗತಿಸುವುದು ಉತ್ತಮ ನಡೆಯಾಗಿದೆ ಎಂದು ಪಿಯೂಷ್ ಗೋಯೆಲ್ ವಿವರಿಸಿದ್ದಾರೆ.

‘ನನಗೆ ಈ ವಿಷಯವನ್ನು ತಿಳಿಸಲು ಸಂತೋಷವಾಗುತ್ತಿದೆ. 2019ರಿಂದ ಇದುವರೆಗೆ ಓರ್ವ ರೈಲು ಪ್ರಯಾಣಿಕ ಸಹ ರೈಲು ಅಪಘಾತದಲ್ಲಿ ಮೃತಪಟ್ಟಿಲ್ಲ. ಇಡೀ ಇಲಾಖೆ ಪ್ರಯಾಣಿಕರಿಗೆ ಸುರಕ್ಷತೆ ಕಲ್ಪಿಸಲು ಹಗಲಿರುಳು ಶ್ರಮಿಸುತ್ತಿದೆ’ ಎಂದು ಅವರು ಸದನಕ್ಕೆ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಭಾರತೀಯ ರೈಲ್ವೆ ಅಭಿವೃದ್ಧಿಯ ಹಳಿಯಲ್ಲಿ ಸಾಗುತ್ತಿದೆ. ಸರ್ಕಾರ ರೈಲ್ವೆ ಇಲಾಖೆಯ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡುತ್ತಿದೆ. 2021ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ರೈಲ್ವೆ ಇಲಾಖೆಯ ಅಭಿವೃದ್ಧಿಗಾಗಿ 2 ಲಕ್ಷ ಕೋಟಿಯನ್ನು ಮೀಸಲಿಡಲಾಗಿದೆ. ರೈಲ್ವೆ ಇಲಾಖೆಯ ಅಭಿವೃದ್ಧಿ ದೇಶದ ಆರ್ಥಿಕ ಅಭಿವೃದ್ಧಿಯ ಎಂಜಿನ್ ಆಗಿ ಕಾರ್ಯವಹಿಸಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಹಿಂದಿನ ಸರ್ಕಾರ ರೈಲ್ವೆ ಇಲಾಖೆಯ ಅಭಿವೃದ್ಧಿ ಕುರಿತು ಘೋಷಣೆಗಳನ್ನಷ್ಟೇ ಮಾಡಿತ್ತು. ಆದರೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರಲಿಲ್ಲ ಎಂದು ಅವರು ಯುಪಿಎ ಸರ್ಕಾರವನ್ನು ಟೀಕಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವ ಉತ್ತಮವಾಗಿ ಅನುಷ್ಠಾನಕ್ಕೆ ಬಂದರೆ ಉದ್ಯೋಗಾವಕಾಶಗಳೂ ಹೆಚ್ಚಲಿವೆ ಎಂದು ಕೇಂದ್ರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ರೈಲಿಗಾಗಿ ಬಿಡ್ಡಿಂಗ್

ಭಾರತದಲ್ಲಿ ಲಕ್ಷಾಂತರ ಮಂದಿ ರೈಲ್ವೆ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಒಂದೂರಿನಿಂದ ಮತ್ತೊಂದೂರಿಗೆ ರೈಲು ಬೋಗಿಗಳು ಸಂಪರ್ಕ ಕೊಂಡಿಯಾಗಿವೆ. ಇಂತಹ  ಭಾರತೀಯ ರೈಲ್ವೆ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಖಾಸಗಿ‌ ಕಂಪನಿಗಳಿಂದ ರೈಲು‌ ಮಾರ್ಗಗಳ ನಿರ್ವಹಣೆಗೆ ಬಿಡ್ಡಿಂಗ್​ ಕೂಡ ಆಹ್ವಾನಿಸಿದೆ. 2021ರ ಫೆಬ್ರವರಿ, ಮಾರ್ಚ್​​​​ನಲ್ಲಿ ಆರ್ಥಿಕ ಬಿಡ್ ನಡೆಯಲಿದ್ದು ಏಪ್ರಿಲ್​​ನಲ್ಲಿ ಫೈನಲ್ ಆಗೋ ನಿರೀಕ್ಷೆ ಇದೆ. ರೈಲ್ವೆ ಖಾಸಗೀಕರಣದಿಂದ ಕೇಂದ್ರದ ಬೊಕ್ಕಸಕ್ಕೆ ಬರೋಬ್ಬರಿ 30 ಸಾವಿರ ಕೋಟಿ ಹರಿದು ಬರೋ ನಿರೀಕ್ಷೆ ಇದೆ ಎಂದು ವರದಿಯಾಗಿತ್ತು.

ದೇಶದಲ್ಲಿ ಪ್ರಯಾಣಿಕರ ರೈಲುಗಳನ್ನ ಸಂಪೂರ್ಣವಾಗಿ ಖಾಸಗೀಕರಣ ಮಾಡುತ್ತಿಲ್ಲ. ಆರಂಭಿಕ ಹಂತದಲ್ಲಿ 109 ರೈಲ್ವೆ ಮಾರ್ಗದಲ್ಲಿ 151 ರೈಲುಗಳನ್ನು ಮಾತ್ರ ಖಾಸಗಿ ಕಂಪನಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ವರದಿಗಳು ತಿಳಿಸಿದ್ದವು.

ಇದನ್ನೂ ಓದಿ: 

ವಾರ್ಷಿಕ 6 ಸಾವಿರ ಸಿಗುವ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಹೇಗೆ? ಇಲ್ಲಿದೆ ವಿವರ

ಬ್ರೈಲ್ ಲಿಪಿಯಲ್ಲಿ ಭಾರತೀಯ ಸಂವಿಧಾನ: ಅಂಧರಿಗೂ ಸಿಕ್ತು ಭಾರತೀಯ ಸಂವಿಧಾನ ಓದುವ ಅವಕಾಶ