ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ಸ್ವಪನ್ ದಾಸ್​ಗುಪ್ತಾ

West Bengal Assembly Elections 2021: ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಾರದು ಎಂದು ಸಂವಿಧಾನದ ನಿಯಮಗಳು ಹೇಳುತ್ತವೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದ್ದರ ಬೆನ್ನಲ್ಲೇ ಸ್ವಪನ್ ದಾಸ್​ಗುಪ್ತಾ ರಾಜೀನಾಮೆ ನೀಡಿದ್ದಾರೆ.

ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿ ಸ್ವಪನ್ ದಾಸ್​ಗುಪ್ತಾ
ಸ್ವಪನ್ ದಾಸ್​ಗುಪ್ತಾ
Follow us
ರಶ್ಮಿ ಕಲ್ಲಕಟ್ಟ
|

Updated on:Mar 16, 2021 | 3:08 PM

ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿ, ಅಂಕಣಕಾರ ಸ್ವಪನ್ ದಾಸ್​ಗುಪ್ತಾ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಸಭೆಗೆ ನಾಮನಿರ್ದೇಶಿತ ಸದಸ್ಯರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಬಾರದು ಎಂದು ಸಂವಿಧಾನದ ನಿಯಮಗಳು ಹೇಳುತ್ತವೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿದ್ದರ ಬೆನ್ನಲ್ಲೇ ಸ್ವಪನ್ ದಾಸ್​ಗುಪ್ತಾ ರಾಜೀನಾಮೆ ನೀಡಿದ್ದಾರೆ. ಗುಪ್ತಾ ಅವರು ಮಂಗಳವಾರ ತಮ್ಮ ರಾಜೀನಾಮೆ ಪತ್ರ ಕಳಿಸಿದ್ದು, ನಾಳೆ ಅದು ಸ್ವೀಕೃತವಾಗಲಿದೆ. ಗುಪ್ತಾ ಅವರ ಅಧಿಕಾರವಧಿ ಏಪ್ರಿಲ್ 2022ಕ್ಕೆ ಕೊನೆಗೊಳ್ಳಲಿದೆ. ನಾನು ರಾಷ್ಟ್ರಪತಿಯವರಿಂದ ನಾಮನಿರ್ದೇಶಿತನಾಗಿರುವ ರಾಜ್ಯ ಸಭಾ ಸದಸ್ಯನಾಗಿದ್ದೇನೆ, ನಾನು ಈ ಬಾರಿಯ ಚುನಾವಣೆಯಲ್ಲಿ ತಾರಕೇಶ್ವರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಎರಡು ವಿಷಯಗಳಲ್ಲಿ ಹಲವಾರು ಸಮಸ್ಯೆಗಳಿವೆ. ನಾನು ನಾಮಪತ್ರ ಸಲ್ಲಿಸುವ ಹೊತ್ತಿಗೆ ಈ ಸಮಸ್ಯೆಗಳೆಲ್ಲ ಕಾಣಿಸಿಕೊಂಡಿವೆ. ನಾನು ಇಲ್ಲಿಯವರೆಗೆ ನಾಮಪತ್ರ ಸಲ್ಲಿಸಿಲ್ಲ , ಗುರುವಾರ ಅಥವಾ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ದಾಸ್​ಗುಪ್ತಾ ಹೇಳಿದ್ದಾರೆ.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ  ಪೋಸ್ಟ್ ಬಗ್ಗೆ ಮಾಧ್ಯಮದವರು ಕೇಳಿದಾಗ, ನಾನು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಹಲವಾರು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದಿದೆ. ನಾಮಪತ್ರ ಸಲ್ಲಿಸುವ ಮುನ್ನ ಸಂಸತ್ ಸೇರಿದಂತೆ ಇತರ ಸಂಸ್ಥೆಗಳಿಂದ ಅನುಮತಿ ಪಡೆಯಬೇಕಿದೆ. ಈ ಪ್ರಕ್ರಿಯೆ ನಡೆದ ನಂತರವೇ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ ಗುಪ್ತಾ.

ರಾಜ್ಯಸಭಾ ಸದಸ್ಯರೊಬ್ಬರು ರಾಜಕೀಯ ಪಕ್ಷಕ್ಕೆ ಸೇರಿದರೆ ಅವರನ್ನು ರಾಜ್ಯಸಭೆ ಅನರ್ಹಗೊಳಿಸಬಹುದು ಎಂದು ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದರು. ದಾಸ್ ಗುಪ್ತಾ ಅವರನ್ನು 2016ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಾಮನಿರ್ದೇಶನ ಮಾಡಿದ್ದರು.

ಸ್ವಪನ್ ದಾಸ್ ಗುಪ್ತಾ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಸಂವಿಧಾನದ 10ನೇ ವಿಧಿಯು ಹೇಳುವುದೇನೆಂದರೆ ರಾಜ್ಯಸಭೆ ಸದಸ್ಯರೊಬ್ಬರು ಪ್ರತಿಜ್ಞಾವಿಧಿ ಸ್ವೀಕರಿಸಿದ 6 ತಿಂಗಳುಗಳಲ್ಲಿ ರಾಜಕೀಯ ಪಕ್ಷ ಸೇರಿದರೆ ಅವರು ಅನರ್ಹರಾಗುತ್ತಾರೆ. ಹಾಗಾಗಿ ಬಿಜೆಪಿ ಸೇರಿರುವ ಗುಪ್ತಾ ಅವರನ್ನು ಅನರ್ಹ ಮಾಡಬೇಕು ಎಂದು ಮೊಯಿತ್ರಾ ಟ್ವೀಟ್ ಮಾಡಿದ್ದರು.

ಕಳೆದ ವಾರ ಬಿಜೆಪಿ ಸ್ವಪನ್ ದಾಸ್​ಗುಪ್ತಾ ಅವರನ್ನು  ಅಭ್ಯರ್ಥಿಯಾಗಿ  ಘೋಷಿಸಿತ್ತು.  ಪಶ್ಚಿಮ ಬಂಗಾಳದಲ್ಲಿ  294 ಕ್ಷೇತ್ರಗಳಿಗೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ .

ಇದನ್ನೂ  ಓದಿ: West Bengal Elections 2021: ಟಿಎಂಸಿ ಮೂಲದವರಿಗೆ ಟಿಕೆಟ್; ಬಂಗಾಳ ಬಿಜೆಪಿ ಕಾರ್ಯಕರ್ತರಲ್ಲಿ ಭುಗಿಲೆದ್ದ ಅಸಮಾಧಾನ

Published On - 3:04 pm, Tue, 16 March 21