ಚೆನ್ನೈ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ಮುಚ್ಚುತ್ತೇವೆ. ಅಂತರ್ಜಾತಿ ಮದುವೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ಅಂತರ್ಜಾತಿ ವಿವಾಹಗಳಿಂದ ಉಂಟಾಗುವ ಮರ್ಯಾದಾ ಹತ್ಯೆಗಳನ್ನು ತಡೆಯಲು ವಿಶೇಷ ಕಾನೂನು ರಚಿಸುತ್ತೇವೆ’. ಎಪ್ರಿಲ್ 6ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಘೋಷಿಸಿರುವ ಚುನಾವಣಾ ಪ್ರಣಾಳಿಕೆಯಿದು. ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್.ಅಳಗಿರಿ ಇಂದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ತಮಿಳುನಾಡು ಮತದಾರರ ಮನೋಭಾವವನ್ನು ಮುಖ್ಯವಾಗಿ ಗುರಿಯಾಗಿ ಇರಿಸಿಕೊಂಡು ಚುನಾವಣಾ ಪ್ರಣಾಳಿಕೆಯನ್ನು ರೂಪಿಸಲಾಗಿದೆ.
ಇಷ್ಟೇ ಅಲ್ಲದೆ, ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇನ್ನಷ್ಟು ಆಕರ್ಷಕ ಅಂಶಗಳಿವೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲೂ 500 ಯುವಕ/ಯುವತಿಯರಿಗೆ ಸರ್ಕಾರ ಉದ್ಯೋಗ ಪಡೆಯಲು ಅಗತ್ಯವಿರುವ ತರಬೇತಿ ಒದಗಿಸುತ್ತೇವೆ. ಜತೆಗೆ, ಯುವಜನರಿಗೆ ಉದ್ಯೋಗ ಪಡೆಯಲು ಅಗತ್ಯವಿರುವ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಸಹ ಕಾಂಗ್ರೆಸ್ ಘೋಷಿಸಿದೆ.
ಕಾಂಗ್ರೆಸ್ ಪ್ರಣಾಳಿಕೆಯ ಮುಖಪುಟದಲ್ಲಿ ಮುಖಂಡ ರಾಹುಲ್ ಗಾಂಧಿ ಅವರು ಕೈಬೀಸುತ್ತಿರುವ ಚಿತ್ರವನ್ನು ಆಕರ್ಷಕ ವಿನ್ಯಾಸದಲ್ಲಿ ಪ್ರಕಟಿಸಲಾಗಿದೆ. ಈ ಮೂಲಕ ರಾಹುಲ್ ಗಾಂಧಿಯವರ ಮುಖವನ್ನು ಮುಂದಿಟ್ಟುಕೊಂಡೇ ತಮಿಳುನಾಡು ಕಾಂಗ್ರೆಸ್ ಚುನಾವಣಾ ಕಣಕ್ಕಿಳಿದಿರುವುದು ಖಚಿತವಾಗಿದೆ. ಈಗಾಗಲೇ ತಮಿಳುನಾಡು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯದ ವಿವಿಧೆಡೆ ಸರಣಿ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಭವಿಷ್ಯದಲ್ಲಿ ಹೆಚ್ಚು ಮುನ್ನೆಲೆಗೆ ಬರುವ ಸಾಧ್ಯತೆಯಿರುವ ನವೋದ್ಯಮಗಳಿಗೆ ಬಲ ತುಂಬುವ ಕುರಿತೂ ಕಾಂಗ್ರೆಸ್ ಪ್ರಣಾಳಿಕೆ ಭರವಸೆ ನೀಡುತ್ತದೆ. ಕನಿಷ್ಠ 5 ವರ್ಷಗಳ ಕಾಲ ರಾಜ್ಯದ ನವೋದ್ಯಮಗಳಿಗೆ ತೆರಿಗೆ ವಿನಾಯತಿ ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿದೆ.
ತಮಿಳುನಾಡಲ್ಲಿ ರಾಹುಲ್ ಗಾಂಧಿ ಪ್ರಚಾರ ಹೇಗಿತ್ತು?
ದೇಶದಲ್ಲಿರುವ ಇತರ ಭಾಷೆ, ಧರ್ಮ,ಸಂಸ್ಕೃತಿಗಳಂತೆಯೇ ತಮಿಳು ಸಂಸ್ಕೃತಿ ಮತ್ತು ಭಾಷೆಯನ್ನು ಓರ್ವ ಭಾರತೀಯನಾಗಿ ಸಂರಕ್ಷಿಸುವ ಹೊಣೆ ನನಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ಕನ್ಯಾಕುಮಾರಿಯಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ನವರು ತಮಿಳು ಸಂಸ್ಕೃತಿ ಅಥವಾ ಸಂಪ್ರದಾಯವನ್ನು ಅವಮಾನ ಮಾಡಲು ನಾವು ಬಿಡಬಾರದು ಎಂದು ಹೇಳಿದ್ದರು. ಕನ್ಯಾಕುಮಾರಿಯಲ್ಲಿ ಪ್ರಚಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಹುಲ್, ಮುಖ್ಯಮಂತ್ರಿಯವರು ತಮಿಳು ಸಂಸ್ಕೃತಿಯನ್ನು ಅವಮಾನ ಮಾಡಲು ಆರ್ಎಸ್ಎಸ್ಗೆ ಬಿಡಬಾರದು. ಮೋದಿಯವರು ಒಂದು ದೇಶ, ಒಂದು ಸಂಸ್ಕೃತಿ, ಒಂದು ಇತಿಹಾಸ ಎಂದು ಹೇಳುತ್ತಾರೆ. ಹಾಗಾದರೆ ತಮಿಳು ಭಾರತೀಯ ಭಾಷೆ ಅಲ್ಲವೇ? ತಮಿಳು ಇತಿಹಾಸ ಭಾರತೀಯರದ್ದು ಅಲ್ಲವೆ? ಅಥವಾ ತಮಿಳು ಸಂಸ್ಕೃತಿ ಭಾರತೀಯರದ್ದು ಅಲ್ಲವೇ? ಭಾರತೀಯನಾಗಿ ತಮಿಳು ಸಂಸ್ಕೃತಿಯನ್ನು ಕಾಪಾಡುವುದು ನನ್ನ ಹೊಣೆ ಎಂದಿದ್ದರು.
ತಮಿಳುನಾಡಿನಲ್ಲಿ ತಮಿಳು ಜನರ ಹೊರತಾಗಿ ಯಾರೂ ಅಧಿಕಾರಕ್ಕೇರಿಲ್ಲ ಎಂಬುದನ್ನು ಇತಿಹಾಸ ನಮಗೆ ತೋರಿಸಿದೆ. ಈ ಚುನಾವಣೆಯಲ್ಲಿಯೂ ಅದೇ ನಡೆಯುತ್ತದೆ ಎಂದಿದ್ದರು ರಾಹುಲ್. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನಿಧನರಾದ ಕನ್ಯಾಕುಮಾರಿ ಸಂಸದ ಎಚ್.ವಸಂತಕುಮಾರ್ ಅವರಿಗೆ ಅಗಸ್ತೀಸ್ವರಂನಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್, ಯಾವುದೇ ಒತ್ತಡವಿರಲಿ, ಯಾರೇ ಬೆದರಿಕೆಯೊಡ್ಡಲಿ ವಸಂತಕುಮಾರ್ ಅವರು ತಮ್ಮ ನಿಲುವಿಗೆ ಬದ್ಧರಾಗಿದ್ದರು. ಅವರು ಕಾಂಗ್ರೆಸ್ ಜತೆಗೆ ನಿಂತಿದ್ದರು ಎಂದು ಹೇಳಿದ್ದರು.
ತಮಿಳುನಾಡು ಚುನಾವಣಾ ಸಮಾವೇಶದಲ್ಲಿ ಒಂದೇ ಕೈಯಲ್ಲಿ ಪುಶ್-ಅಪ್ಸ್ ತೆಗೆದ ರಾಹುಲ್ ಗಾಂಧಿ: ವಿಡಿಯೋ ವೈರಲ್
ಬಿಜೆಪಿಯಿಂದ ಕೇರಳ, ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಅಣ್ಣಾಮಲೈ, ಖುಷ್ಬೂಗೆ ಅವಕಾಶ